ಬೆಂಗಳೂರು:ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುರಿತು ಅವಹೇಳನಕಾರಿಯಾಗಿ ಸುದ್ದಿ ಪ್ರಸಾರ ಮಾಡುತ್ತಿರುವ ಖಾಸಗಿ ಚಾನೆಲ್ ಒಂದರ ವಿರುದ್ಧ ರಾಜ್ಯ ಒಕ್ಕಲಿಗರ ಸಂಘ ತಿರುಗಿಬಿದ್ದಿದೆ.
ಈ ಖಾಸಗಿ ಚಾನೆಲ್‌ಗೆ ಸುಳ್ಳು ಸುದ್ದಿಗಳನ್ನು ನೀಡಿ ದೇವೇಗೌಡರ ಕುಟುಂಬದ ಬಗ್ಗೆ ಹಿಂಬಾಗಿಲಿನಿಂದ ಅಪಪ್ರಚಾರ ಮಾಡುತ್ತಿರುವವರ ಹೆಸರನ್ನು ಬಹಿರಂಗ ಪಡಿಸಬೇಕೆಂದು ಸುದ್ದಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರನ್ನು ಸಂಘ ಒತ್ತಾಯಿಸಿದೆ.
ಆರು ದಶಕಗಳಿಂದ ಹೋರಾಟ
ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಹಾಗೂ ಶಾಸಕ ಬಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ಹಾಪ್‌ಕಾಮ್ಸ್ ದೇವರಾಜ್ ಹಾಗೂ ಇತರ ಪದಾಧಿಕಾರಿಗಳು, ರೈತರು ಮತ್ತು ಬಡವರ ಪರವಾಗಿ ಕಳೆದ ಆರು ದಶಕಗಳಿಂದ ನಿರಂತರ ಹೋರಾಟ ಮಾಡುತ್ತಾ ಬಂದಿರುವ ದೇವೇಗೌಡರ ಬಗ್ಗೆ ಹಗುರವಾಗಿ ಸುದ್ದಿ ಬಿತ್ತರಿಸುವುದು ಸರಿಯಲ್ಲ.
ಇದರ ಹಿಂದೆ ಕಾಣದ ಕೈಗಳಿವೆ, ಅವರ ಹೆಸರನ್ನು ಬಹಿರಂಗ ಪಡಿಸಬೇಕು ಮತ್ತು ತಕ್ಷಣವೇ ಕ್ಷಮೆಯಾಚಿಸಬೇಕು, ಇಲ್ಲದಿದ್ದರೆ ಸುದ್ದಿ ಸಂಸ್ಥೆ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕಾನೂನಿಗಿಂತ ಯಾರೂ ದೊಡ್ಡವರಲ್ಲ, ಯಾರೇ ತಪ್ಪು ಮಾಡಿದರೂ ನ್ಯಾಯಾಲಯದ ಮೊರೆ ಹೋಗಬಹುದು, ತನಿಖೆ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಬಹುದು, ಅದನ್ನು ಬಿಟ್ಟು ಈ ಸುದ್ದಿ ಸಂಸ್ಥೆ ಗೌಡರ ವಿರುದ್ಧ ಅಗೌರವದಿಂದ ನಡೆದುಕೊಳ್ಳುತ್ತಿದೆ.
ಸಲಹೆ-ಸೂಚನೆ
ಈ ಇಳಿ ವಯಸ್ಸಿನಲ್ಲೂ ನೀರಾವರಿ, ಕೃಷಿಗೆ ಸಂಬಂಧಿಸಿದಂತೆ ಸಂಸತ್‌ನ ಒಳಗೆ ಮತ್ತು ಹೊರಗೆ ದನಿ ಎತ್ತಿರುವುದಲ್ಲದೆ, ಕೇಂದ್ರ ಸರ್ಕಾರಕ್ಕೆ ಸಲಹೆ, ಸೂಚನೆಗಳನ್ನೂ ಗೌಡರು ನೀಡುತ್ತಿದ್ದಾರೆ.
ಇಂತಹವರ ವಿರುದ್ಧ ಸುಳ್ಳು ಸುದ್ದಿಗಳನ್ನು ಬಿತ್ತರಿಸಿ ಸಮಾಜಕ್ಕೆ ಅಪಮಾನ ಮಾಡುತ್ತಿದ್ದೀರಿ, ಇದೇ ರೀತಿ ಮುಂದುವರೆದರೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಮುಂದಿನ ಹೋರಾಟದ ಬಗ್ಗೆ ತೀರ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ.