ಥಾವರ್‌ಚಂದ್ ಗೆಹ್ಲೋಟ್ ಕುರಿತ ಅವಮಾನಕರ ಹೇಳಿಕೆ
ಬೆಂಗಳೂರು:ಪರಿಶಿಷ್ಟ ಜಾತಿಗೆ ಸೇರಿದ ಕರ್ನಾಟಕದ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಬಗ್ಗೆ ಸಾರ್ವಜನಿಕವಾಗಿ ಅವಹೇಳನಕಾರಿ ಮಾತುಗಳನ್ನು ಆಡುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸುವಂತೆ ಪೋಲಿಸ್ ಮಹಾನಿರ್ದೇಶಕರಿಗೆ ರಾಜ್ಯ ಬಿಜೆಪಿ ಇಂದಿಲ್ಲಿ ಒತ್ತಾಯಿಸಿದೆ.
ಮಾಜಿ ಉಪಮುಖ್ಯಮಂತ್ರಿ, ಸಂಸದ ಗೋವಿಂದ ಕಾರಜೋಳ್, ವಿಧಾನ ಪರಿಷತ್‌ನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಾಲಿ ಶಾಸಕರು, ಮಾಜಿ ಸಚಿವರುಗಳ ನಿಯೋಗ ಪೋಲಿಸ್ ಮಹಾನಿರ್ದೇಶಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.
ಸಂವಿಧಾನಕ್ಕೆ ಅವಮಾನ
ಕಾಂಗ್ರೆಸ್ ನಾಯಕರು ರಾಜ್ಯಪಾಲರ ಕುರಿತು ನೀಡುತ್ತಿರುವ ಹೇಳಿಕೆಗಳು ಸಂವಿಧಾನಕ್ಕೆ ಮತ್ತು ಪರಿಶಿಷ್ಟ ಜನಾಂಗಕ್ಕೆ ಮಾಡಿದ ಅವಮಾನ, ಅಲ್ಲದೆ, ಈ ರೀತಿಯ ಹೇಳಿಕೆಗಳು ಅತ್ಯಂತ ಸೂಕ್ಷ್ಮವಾಗಿದ್ದು ಸಮಾಜವನ್ನು ಪ್ರಚೋಧಿಸುವುದಾಗಿವೆ.
ಸಂವಿಧಾನದ ಹುದ್ದೆಯಲ್ಲಿ ಕುಳಿತಿರುವ ವ್ಯಕ್ತಿಯ ವಿರುದ್ಧ ಇಂತಹ ಹೇಳಿಕೆಗಳನ್ನು ನೀಡಿರುವ ಸಚಿವರಾದ ಜಮೀರ್ ಅಹಮದ್ ಖಾನ್, ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್, ಶಾಸಕರಾದ ನಂಜೇಗೌಡ, ಐವಾನ್ ಡಿಸೋಜ ಹಾಗೂ ಇನ್ನೂ ಅನೇಕ ನಾಯಕರ ವಿರುದ್ಧ ಜಾತಿ ನಿಂದನೆ ಹಾಗೂ ಗೂಂಡಾ ಕಾಯಿದೆಯಡಿ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಿ ಎಂದಿದ್ದಾರೆ.
ತನಿಖೆ ಎದುರಿಸಿ
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾರಜೋಳ್, ಮುಖ್ಯಮಂತ್ರಿ ಸಿದ್ದರಾಮಯ್ಯ ತನಿಖೆ ಎದುರಿಸಿ ಆರೋಪಮುಕ್ತರಾಗಿ ಹೊರಬರಬೇಕು, ಅದನ್ನು ಬಿಟ್ಟು ರಾಜ್ಯಪಾಲರ ವಿರುದ್ಧ ವಾಗ್ದಾಳಿ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಮೇಲೆ ಆರೋಪ ಬಂದಾಗ ಅವರನ್ನು ಅಪರಾಧಿ ಎನ್ನುವುದಿಲ್ಲ, ನಿರಪರಾಧಿ ಎಂದು ಸಾಬೀತುಪಡಿಸುವ ಜವಾಬ್ದಾರಿ ಸಿದ್ದರಾಮಯ್ಯ ಮೇಲಿದೆ, ಅದಕ್ಕಾಗಿ ಅವರು ರಾಜೀನಾಮೆ ಕೊಟ್ಟು ನಿಷ್ಪಕ್ಷಪಾತ ತನಿಖೆಗೆ ಅವಕಾಶ ಮಾಡಿಕೊಡಬೇಕು.
ಅದನ್ನು ಬಿಟ್ಟು ಸಂವಿಧಾನಿಕ ಹುದ್ದೆಯಲ್ಲಿರುವ, ರಾಷ್ಟ್ರಪತಿಗಳ ಪ್ರತಿನಿಧಿ ಎನಿಸಿದ ರಾಜ್ಯಪಾಲರನ್ನು ಅವಮಾನಿಸಿದ್ದಾರೆ, ಕಾಂಗ್ರೆಸ್ ಪಕ್ಷಕ್ಕೆ ಸಂಸ್ಕೃತಿ ಎಂಬುದು ಇದೆಯೇ ಎಂದರು.
ಸಾಮಾಜಿಕ ನ್ಯಾಯ ತಿಳಿಯದವರು
ಸಾಮಾಜಿಕ ನ್ಯಾಯದ ಗಂಧವೇ ತಿಳಿಯದವರು ಕಾಂಗ್ರೆಸ್ಸಿಗರು, ಚಪ್ಪಲಿಯಿಂದ ರಾಜ್ಯಪಾಲರ ಫೋಟೊಗೆ ಹೊಡೆದುದಲ್ಲದೆ ಅವರ ಭಾವಚಿತ್ರ ಸುಟ್ಟಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ದಲಿತ ವ್ಯಕ್ತಿ ರಾಜ್ಯಪಾಲರ ಹುದ್ದೆಯಲ್ಲಿ ಇರುವುದು ನಿಮ್ಮ ಗಮನದಲ್ಲಿಲ್ಲವೇ ಡಾ.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಕಾಂಗ್ರೆಸ್ಸಿಗರಿಗೆ ಸಂಸ್ಕೃತಿ ಇರಲು ಸಾಧ್ಯವೇ ಎಂದರು.
ರಾಮಕೃಷ್ಣ ಹೆಗಡೆ ಅವರ ಮೇಲೆ ಟೆಲಿಫೋನ್ ಕದ್ದಾಲಿಕೆ ಆರೋಪ ಬಂದಾಗ ರಾಜೀನಾಮೆ ಕೊಟ್ಟಿದ್ದರು, ಕಾಂಗ್ರೆಸ್ಸಿನವರೇ ಆದ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ರೈಲ್ವೆ ಸಚಿವರಾಗಿದ್ದಾಗ ರೈಲು ಅವಘಡ ನಡೆದಿದ್ದು, ನಿಷ್ಪಕ್ಷಪಾತ ತನಿಖೆಗಾಗಿ ರಾಜೀನಾಮೆ ನೀಡಿದ್ದರು.
ರಾಜಭವನಕ್ಕೆ ನುಗ್ಗುವ ಬೆದರಿಕೆ
ಶಾಸಕ ಐವಾನ್ ಡಿಸೋಜ ಅವರು ಬಾಂಗ್ಲಾದ ಪರಿಸ್ಥಿತಿ ಕರ್ನಾಟಕದಲ್ಲೂ ಬರಲಿದೆ, ರಾಜಭವನಕ್ಕೆ ನುಗ್ಗಿ ತೊಂದರೆ ಮಾಡುತ್ತೇವೆ ಎಂದಿದ್ದಾರೆ, ಇದರಿಂದ ಅವರಿಗೆ ಪಾಕ್ ಉಗ್ರರ ನಂಟಿದೆಯೇ ಎಂಬ ಸಂಶಯ ನನಗೆ ಬರುತ್ತಿದೆ.
ಐವಾನ್ ಡಿಸೋಜ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಂಡು ದೇಶದ್ರೋಹಿ ಎಂಬ ಹಣೆಪಟ್ಟಿ ಕಟ್ಟಬೇಕು, ಎಂಎಲ್‌ಸಿ ಸ್ಥಾನದಿಂದ ವಜಾ ಮಾಡಬೇಕು ಎಂದು ಗೋವಿಂದ ಕಾರಜೋಳ ಒತ್ತಾಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ 2 ಪ್ರಮುಖ ಹಗರಣಗಳಲ್ಲಿ ಸಿಲುಕಿದ್ದಾರೆ, ಮುಡಾದಲ್ಲಿ ಅನಧಿಕೃತ, ಕಾನೂನುಬಾಹಿರವಾಗಿ ಅವರ ಪತ್ನಿ ಹೆಸರಿನಲ್ಲಿ 14 ನಿವೇಶನಗಳನ್ನು ಪಡೆದಿರುವುದು, ರಾಜ್ಯದ ಪರಿಶಿಷ್ಟ ಜಾತಿ, ಜನಾಂಗಗಳಿಗೆ ಸೇರಿದ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ. ಹಗಲುದರೋಡೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ ಎಂದರು.
ಮುಡಾ ಹಗರಣದಲ್ಲಿ ಆರ್‌ಟಿಐ ಕಾರ್ಯಕರ್ತ ಅಬ್ರಹಾಂ, ಹಗರಣಗಳ ಲೂಟಿಯ ವಿವರ ಪಡೆದು ಕೇಸು ದಾಖಲಿಸಿದ್ದಾರೆ, ಯುಪಿಎ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆ ಜಾರಿಗೊಳಿಸಿದ್ದಾಗಿ ಕಾಂಗ್ರೆಸ್‌ನವರು ಡಂಗೂರ ಸಾರುತ್ತ ಓಡಾಡಿದರು, ಈಗ ಅವರೇ ತಂದ ಕಾಯ್ದೆಯನ್ನು ಅವರೇ ಗೌರವಿಸುತ್ತಿಲ್ಲ ಎಂದು ಆಕ್ಷೇಪಿಸಿದರು.