ಕಾಂಗ್ರೆಸ್ ವರಿಷ್ಠರ ಅಂಗಳದಲ್ಲಿ ಸಿದ್ದರಾಮಯ್ಯ ರಾಜಕೀಯ ಭವಿಷ್ಯ
ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಬಿಡಿ ನಿವೇಶನಗಳ ಹಂಚಿಕೆ ಹಗರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ಭವಿಷ್ಯದ ಬಗ್ಗೆ ಕಾಂಗ್ರೆಸ್ ವರಿಷ್ಠರು ನಾಳೆ ಮಹತ್ವದ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.
ಈ ಪ್ರಕರಣ ರಾಷ್ಟ್ರಮಟ್ಟದಲ್ಲಿ ಪಕ್ಷಕ್ಕೆ ಭಾರೀ ಮುಜುಗರ ತಂದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಜೊತೆಗೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನೂ ದೆಹಲಿಗೆ ಬರುವಂತೆ ಬುಲಾವ್ ಮಾಡಿದ್ದಾರೆ.
ವರಿಷ್ಠರ ಕರೆಯ ಮೇರೆಗೆ ನಾಳೆ ಬೆಳಗ್ಗೆ ದೆಹಲಿಗೆ ತೆರಳುವ ಉಭಯ ನಾಯಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಪಕ್ಷದ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಲಿದ್ದಾರೆ.
ಸಚಿವರು, ಶಾಸಕರ ವಿಶ್ವಾಸದ ಖಾತ್ರಿ
ವರಿಷ್ಠರ ಕರೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರು ಇಂದು ನಡೆದ ಸಂಪುಟ ಸಭೆ, ಆ ನಂತರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ, ಸಚಿವರು ಮತ್ತು ಶಾಸಕರ ವಿಶ್ವಾಸ ತಮಗೆ ಇದೆ ಎಂಬುದನ್ನು ಮತ್ತೊಮ್ಮೆ ಖಾತ್ರಿ ಪಡಿಸಿಕೊಂಡಿದ್ದಾರೆ.
ಸಂಪುಟ ಹಾಗೂ ಶಾಸಕಾಂಗ ಸಭೆ ತಮ್ಮ ಬೆಂಬಲಕ್ಕಿದೆ ಎಂಬುದನ್ನು ಮುಖ್ಯಮಂತ್ರಿ ಅವರು ನಾಳೆ ವರಿಷ್ಠರ ಗಮನಕ್ಕೆ ತರುವ ಉದ್ದೇಶದಿಂದಲೇ ಇಂದು ಎರಡೂ ಸಭೆಗಳನ್ನು ನಡೆಸಿದರು.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಮುಡಾ ನಿವೇಶನಗಳ ಹಂಚಿಕೆ ಹಗರಣಗಳಲ್ಲಿ ತಮ್ಮ ಪಾತ್ರ ಇಲ್ಲ ಎಂಬುದನ್ನು ವರಿಷ್ಠರಿಗೆ ಈಗಾಗಲೇ ಹಲವು ಬಾರಿ ಮುಖ್ಯಮಂತ್ರಿ ಮನದಟ್ಟು ಮಾಡಿದ್ದಾರೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜಭವನ ನೋಟಿಸ್ ನೀಡಿದ ಸಂದರ್ಭದಲ್ಲಿ ಎಐಸಿಸಿಯೇ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿದ್ದಲ್ಲದೆ, ಸುಪ್ರೀಂಕೋರ್ಟ್‌ನ ಹಿರಿಯ ವಕೀಲರನ್ನು ನ್ಯಾಯಾಲಯದಲ್ಲಿ ವಕಾಲತ್ತು ವಹಿಸಲು ನೇಮಿಸಿತ್ತು.
ಆದರೆ, ಪಶ್ಚಿಮ ಬಂಗಾಳದಲ್ಲಿ ವೈದ್ಯೆಯ ಹತ್ಯೆ ಘಟನೆ ನಂತರ ನಡೆದ ಅಲ್ಲಿನ ರಾಜಕೀಯ ಬೆಳವಣಿಗೆಗಳು ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರದ ಮೇಲೆ ಪ್ರಭಾವ ಬೀರುತ್ತಿವೆ.
ರಾಹುಲ್ ಗಾಂಧಿ ಅವರು, ವೈದ್ಯೆಯ ಹತ್ಯೆ ಬಗ್ಗೆ ಕಿಡಿಕಾರಿದ ಸಂದರ್ಭದಲ್ಲಿ ಅಲ್ಲಿನ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ), ನಮ್ಮ ಆಡಳಿತದ ಬಗ್ಗೆ ಟೀಕಿಸುವ ಮೊದಲು ಕರ್ನಾಟಕದಲ್ಲಿ ನಿಮ್ಮ ಪಕ್ಷದ ಸರ್ಕಾರದ ಮುಖ್ಯಮಂತ್ರಿ ಮೇಲಿನ ಭ್ರಷ್ಟಾಚಾರ ಆರೋಪದ ಬಗ್ಗೆ ಉತ್ತರಿಸಿ ನಂತರ ನಮ್ಮ ವಿಷಯಕ್ಕೆ ಬನ್ನಿ ಎಂದು ಮೂದಲಿಸಿತ್ತು.
ತೃಣಮೂಲ ಕಾಂಗ್ರೆಸ್‌ನ ವಕ್ತಾರ ಹಾಗೂ ಮಾಜಿ ಸಂಸದ ಕುನಾಲ್ ಘೋಷ್, ಕರ್ನಾಟಕದ ಆಡಳಿತವನ್ನು ಮುಂದಿಟ್ಟುಕೊಂಡು ರಾಹುಲ್ ಗಾಂಧಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.
ಇಕ್ಕಟ್ಟಿಗೆ ಸಿಲುಕಿಸಿದ ಎಐಸಿಸಿ
ಈ ಬೆಳವಣಿಗೆ ನಂತರ ರಾಷ್ಟ್ರಮಟ್ಟದ ಮಾಧ್ಯಮಗಳಲ್ಲಿ ಪಶ್ಚಿಮ ಬಂಗಾಳ ಹಾಗೂ ಕರ್ನಾಟಕದ ವಿಷಯವೇ ಪ್ರಮುಖವಾಗಿ ಪ್ರಸ್ತಾಪವಾಗುತ್ತಿರುವುದು ಎಐಸಿಸಿಯನ್ನು ಭಾರೀ ಇಕ್ಕಟ್ಟಿಗೆ ಸಿಲುಕಿಸಿದೆ.
ಇದರಿಂದ ಮೊದಲ ಬಾರಿಗೆ ಸ್ವಲ್ಪ ವಿಚಲಿತಗೊಂಡ ರಾಹುಲ್ ಗಾಂಧಿ, ಕರ್ನಾಟಕ ಸರ್ಕಾರದ ವಿದ್ಯಮಾನ ಮತ್ತು ಪ್ರತಿಪಕ್ಷಗಳು ನಡೆಸುತ್ತಿರುವ ಹೋರಾಟದ ಬಗ್ಗೆ ಖರ್ಗೆ ಮತ್ತು ವೇಣುಗೋಪಾಲ್ ಅವರೊಂದಿಗೆ ಸಮಾಲೋಚಿಸಿ ನಂತರ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ಬುಲಾವ್ ನೀಡಿದ್ದಾರೆ.