ಸಂಪುಟ ಸಭೆಯಲ್ಲಿ ರಾಜ್ಯಪಾಲರ ಅನುಮತಿ ಕೋರುವ ನಿರ್ಣಯ
ಬೆಂಗಳೂರು : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವರಾದ ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಜರ್ನಾದನ ರೆಡ್ಡಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ರಾಜ್ಯಪಾಲರನ್ನು ಕೋರಿ ರಾಜ್ಯ ಸಚಿವ ಸಂಪುಟ ಇಂದಿಲ್ಲಿ ಮಹತ್ವದ ನಿರ್ಣಯ ಕೈಗೊಂಡಿದೆ.
ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್.ಕೆ.ಪಾಟೀಲ್, ಇವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯಿದೆಯಡಿ ತನಿಖಾ ಸಂಸ್ಥೆಗಳು ಆರೋಪ ಪಟ್ಟಿ ಸಹಿತ ಸಲ್ಲಿಸಿರುವ ಅರ್ಜಿಗಳಿಗೆ ತನಿಖೆಗೆ ಆದೇಶ ನೀಡಿ ಎಂಬ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಎಂದರು.
ಸಾರ್ವಜನಿಕರ ದೃಷ್ಟಿಯಲ್ಲಿ ರಾಜ್ಯಪಾಲರ ಕಚೇರಿ ತಪ್ಪು ಮಾಡಬಾರದೆಂಬ ಉದ್ದೇಶದಿಂದ ಸಂವಿಧಾನ ವಿಧಿ ೧೬೩ರಡಿ ಸಂಪುಟಕ್ಕೆ ಇರುವ ಅಧಿಕಾರವನ್ನು ಬಳಕೆ ಮಾಡಿಕೊಂಡು ಸಲಹೆ ಮಾಡುವ ನಿರ್ಣಯ ಕೈಗೊಂಡಿದ್ದೇವೆ.
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಖಾಸಗಿ ವ್ಯಕ್ತಿ ನೀಡಿದ ದೂರನ್ನು ಆಧಾರವಾಗಿ ಇಟ್ಟುಕೊಂಡು ನೀವು ತನಿಖೆಗೆ ಆದೇಶ ಮಾಡಿದ್ದೀರಿ.
ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ನಿಮ್ಮ ಮುಂದೆ ಅನೇಕ ಪ್ರಕರಣಗಳಿವೆ ಅದರಲ್ಲಿ ಈ ನಾಲ್ವರ ವಿರುದ್ಧ ತನಿಖಾ ಸಂಸ್ಥೆಗಳು ತನಿಖೆ ನಡೆಸಿ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ನಿಮ್ಮ ಉತ್ತರಕ್ಕೆ ಕಾಯುತ್ತಿವೆ.
ತನಿಖೆ ನಡೆಸಲು ಅನುಮತಿ ನೀಡಬೇಕೆಂಬ ಸಲಹೆ
ಸಿದ್ದರಾಮಯ್ಯ ಅವರ ವಿಷಯದಲ್ಲಿ ರಾಜಭವನ ತೆಗೆದುಕೊಂಡ ತರಾತುರಿ ಇವರುಗಳ ಬಗ್ಗೆ ಏಕೆ ಇಲ್ಲ ಎಂದು ಸಭೆ ಪ್ರಶ್ನೆ ಮಾಡಿರುವುದಲ್ಲದೆ, ಸಾರ್ವಜನಿಕ ಹಿತದೃಷ್ಟಿಯಿಂದ ಈ ನಾಲ್ಕೂ ಪ್ರಕರಣಗಳಲ್ಲಿ ತನಿಖೆ ನಡೆಸಲು ಅನುಮತಿ ನೀಡಬೇಕು ಎಂದು ಸಲಹೆ ಮಾಡುತ್ತೇವೆ.
197, 17ಎಅಡಿ ಕೆಲವು ಕೇಸ್ ಬಾಕಿ ಇವೆ, ಅದರಲ್ಲಿ ವಿಶೇಷವಾಗಿ ಶಶಿಕಲಾ ಜೊಲ್ಲೆಗೆ ಸಂಬಂಧಿಸಿದ ಅರ್ಜಿ 9/12/2021 ರಿಂದ ಇದೆ. ಮುರುಗೇಶ್ ನಿರಾಣಿ ಅವರಿಗೆ ಸಂಬಂಧಿಸಿ ಅರ್ಜಿ 26/02 24ರಿಂದ ಇದೆ. 21/11/2023ರಿಂದ ಎಚ್.ಡಿ.ಕುಮಾರಸ್ವಾಮಿ ವಿರುದ್ಧದ ಹಾಗೂ ಜನಾರ್ದನ ರೆಡ್ಡಿ ವಿರುದ್ಧದ ಅರ್ಜಿಗಳು ಬಾಕಿ ಇವೆ.
ಲೋಕಾಯುಕ್ತ ಮತ್ತು ಎಸ್‌ಐಟಿ ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಿವೆ
ಅದರಲ್ಲೂ ಕುಮಾರಸ್ವಾಮಿ ಹಾಗೂ ಜನಾರ್ದನ ರೆಡ್ಡಿ ವಿರುದ್ಧ ಲೋಕಾಯುಕ್ತ ಮತ್ತು ಎಸ್‌ಐಟಿ ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಿವೆ.
ಕುಮಾರಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಭವನ 2024ರ ಜುಲೈ 29ರಂದು ಸ್ಪಷ್ಟೀಕರಣ ಕೇಳಿರುವ ಪತ್ರ ಎಸ್‌ಐಟಿಗೆ ಆಗಸ್ಟ್ 8ರಂದು ತಲುಪಿದೆ.
ರಾಜಭವನದ ಪತ್ರಕ್ಕೆ ಎಸ್‌ಐಟಿ ಆಗಸ್ಟ್ 16 ರಂದು ಸ್ಪಷ್ಟೀಕರಣ ನೀಡಿದ್ದಾರೆ. ಅದರ ನಂತರವೂ ನೀವು ಯಾವುದೇ ತೀರ್ಮಾನ ಕೈಗೊಂಡಿಲ್ಲ.
ಸಾರ್ವಜನಿಕರ ಮನೋಭಾವನೆ ಅರ್ಥ ಮಾಡಿಕೊಂಡಿರುವ ಸಂಪುಟ, ತನಗಿರುವ ಅಧಿಕಾರ ಬಳಕೆ ಮಾಡಿ, ಈ ನಾಲ್ಕೂ ವಿಶೇಷ ಪ್ರಕರಣಗಳನ್ನು ಪ್ರಾಸಿಕ್ಯೂಷನ್‌ಗೆ ನೀಡುವಂತೆ ಸಂಪುಟ ಸಲಹೆ ಮಾಡಿದೆ.
ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್ಗೆ ನೋಟಿಸ್ ನೀಡಿದ ನಂತರ ಆಗಸ್ಟ್ 1ರಂದು ಮಂತ್ರಿ ಪರಿಷತ್ ಸಭೆ ತೆಗೆದುಕೊಂಡ ಖಂಡನಾ ನಿರ್ಣಯಕ್ಕೆ ಇಂದಿನ ಸಭೆ ಘಟನೋತ್ತರ ಅನುಮೋದನೆ ನೀಡಿದೆ ಎಂದು ತಿಳಿಸಿದರು.
ವಿವಾದಾತ್ಮಕವಾಗಿದ್ದ ಜೆಎಸ್‌ಡಬ್ಲ್ಯೂ ಸ್ಟೀಲ್ ಕಂಪನಿಗೆ ಸಂಡೂರು ತಾಲ್ಲೂಕಿನಲ್ಲಿ 3,666 ಎಕರೆ ಭೂಮಿಗೆ ಶುದ್ಧ ಕ್ರಯಪತ್ರ ನೀಡುವ ನಿರ್ಧಾರ ಸಭೆ ಕೈಗೊಂಡಿತೆಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಹೆಬ್ಬಾಳದಿಂದ ಸಿಲ್ಕ್‌ಬೋರ್ಡ್ ವೃತ್ತದವರೆಗೂ12,690 ಕೋಟಿ ರೂ. ವೆಚ್ಚದಲ್ಲಿ ಸುರಂಗ ರಸ್ತೆ ಮಾರ್ಗಕ್ಕೆ ಸಂಪುಟ ಅನುಮೋದನೆ ನೀಡಿದೆ.
ರಾಜಧಾನಿಯಲ್ಲಿ 250 ಅಡಿ ಎತ್ತರದ ಆಕಾಶಗೋಪುರ ನಿರ್ಮಾಣಕ್ಕೆ 500 ಕೋಟಿ ರೂ. ವೆಚ್ಚ ಹಾಗೂ 52 ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಸಂಪುಟ ಅನುಮೋದನೆ ನೀಡಿದೆ ಎಂದು ಅವರು ತಿಳಿಸಿದರು.