ಬೆಂಗಳೂರು:ಆಫ್ರಿಕಾ ಖಂಡದಲ್ಲಿ ಆತಂಕ ಮೂಡಿಸಿರುವ ಮಂಕಿಫಾಕ್ಸ್ ಸೋಂಕು ಭಾರತದಲ್ಲಿ ಹರಡುವ ಅಪಾಯ ಕಡಿಮೆಯಿದ್ದು, ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಕಿಫಾಕ್ಸ್ ಸೋಂಕು ಕುರಿತು ಆಗಸ್ಟ್ 14ರಂದು ವಿಶ್ವ ಆರೋಗ್ಯಸಂಸ್ಥೆ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಘೋಷಿಸಿದೆಯಾದರೂ ಆ ಬಗ್ಗೆ ಆತಂಕ ಬೇಡ, ವೈದ್ಯಕೀಯ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿದ್ದು, ಅಗತ್ಯ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆ ನಡೆಸಲಾಗಿದೆ ಎಂದರು.
ವಿಕ್ಟೋರಿಯಾದಲ್ಲಿ ಉಚಿತ ಪರೀಕ್ಷೆ
ಇದು ವೈರಲ್ ಸೋಂಕು ಆಗಿರಲಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೋಗ ಪರೀಕ್ಷೆ ಉಚಿತವಾಗಿದೆ, ಸದ್ಯಕ್ಕೆ 50 ಹಾಸಿಗೆಯ ಐದು ಐಸಿಯು ವ್ಯವಸ್ಥೆ ಮಾಡಲಾಗಿದೆ, ರಾಜ್ಯದಲ್ಲಿ ಇದುವರೆಗೂ ಒಂದೂ ಪ್ರಕರಣ ಪತ್ತೆಯಾಗಿಲ್ಲ, ಆದರೂ, ಏಕಾಏಕಿ ಕಂಡುಬಂದರೆ ಸಮಸ್ಯೆಯಾಗದಿರಲಿ ಎಂಬ ಉದ್ದೇಶದಿಂದ ಎಲ್ಲಾ ಮುನ್ನೆಚ್ಚರಿಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಎನ್‌ಸಿಡಿಸಿ ಜಂಟಿ ನಿರ್ವಹಣಾ ಸಂಸ್ಥೆ ಸೋಂಕು ಹರಡುವಿಕೆ ಅಪಾಯದ ಮೌಲ್ಯಮಾಪನ ನಡೆಸುತ್ತಿದೆ, ಒಂದು ವೇಳೆ ಪ್ರಕರಣಗಳಿದ್ದರೆ ಆರಂಭ ಹಂತದಲ್ಲೇ ಎಚ್ಚರಿಸಲಾಗುವುದು.
ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸ್ಕ್ರೀನಿಂಗ್ ಬಗ್ಗೆ ಆರೋಗ್ಯ ಇಲಾಖೆಗೆ ಕೇಂದ್ರ ಸರ್ಕಾರ ಸೂಚನೆ ನೀಡುತ್ತದೆ ಎಂದರು.