ಬೆಂಗಳೂರು:ಮುಡಾ ಹಗರಣದಲ್ಲಿ ತಮ್ಮ ಹಾಗೂ ತಮ್ಮ ಕುಟುಂಬದ ಪಾತ್ರವೇ ಇಲ್ಲ ಎಂದು ಹೇಳುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ದಾಖಲೆ ಸಮೇತ ಉತ್ತರ ನೀಡಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, ಮಾರುಕಟ್ಟೆ ದರದಲ್ಲಿ ಜಮೀನಿನ ಪರಿಹಾರ ಅಥವಾ 40:60ರ ಅನುಪಾತದಲ್ಲಿ ನಿವೇಶನ ನೀಡುವ ಮುಡಾ ಪ್ರಸ್ತಾವನೆ ನಿರಾಕರಿಸಿ ಬದಲಿ ಜಮೀನನ್ನೇ ನೀಡುವಂತೆ ಒತ್ತಾಯ ಮಾಡಿರುವ ದಾಖಲೆಯನ್ನು ಕೇಂದ್ರ ಸಚಿವರು ಬಿಡುಗಡೆ ಮಾಡಿದ್ದಾರೆ.
ನೀವು ವಕೀಲರಲ್ಲವೇ ಕಣ್ಣಿಟ್ಟು ಓದಿ
ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಮುಡಾ ನಿವೇಶನ ಹಂಚಿಕೆಯಲ್ಲಿ ನನ್ನ ಹಾಗೂ ನನ್ನ ಕುಟುಂಬದ ಪಾತ್ರವೇ ಇಲ್ಲ ಎಂದು ಬೊಗಳೆ ಬಿಡುವ ನಿಮಗೆ ಕನ್ನಡ ಬರುತ್ತದೆ, ಭಾಷೆಯೂ ಗೊತ್ತಿದೆ ಎಂದು ಪರಿಭಾವಿಸುತ್ತೇನೆ, ನೀವು ವಕೀಲರಲ್ಲವೇ ದಾಖಲೆಯನ್ನೊಮ್ಮೆ ಕಣ್ಣಲ್ಲಿ ಕಣ್ಣಿಟ್ಟು ಓದಿ ಎಂದು ದಾಖಲೆಯನ್ನೂ ಟ್ಯಾಗ್ ಮಾಡಿದ್ದಾರೆ.
50:50ರ ಅನುಪಾತದಲ್ಲಿ ಮುಡಾ ಬದಲಿ ನಿವೇಶನ ನೀಡಲೇಬೇಕು ಎಂದು ಸಿದ್ದರಾಮಯ್ಯ ಅವರ ಧರ್ಮಪತ್ನಿ ಒತ್ತಾಯ ಮಾಡಿದ್ದಾರೆ, ಅಲ್ಲದೆ, ಅರ್ಜಿದಾರರಾದ ಪಾರ್ವತಮ್ಮ ಅವರಿಗೆ ಮಾರುಕಟ್ಟೆ ದರದಲ್ಲಿ ಜಮೀನಿನ ಪರಿಹಾರ ನೀಡುವುದಾಗಿಯೂ ಅಥವಾ 40:60ರ ಅನುಪಾತದಲ್ಲಿ ನಿವೇಶನ ನೀಡುವುದಾಗಿಯೂ ತಿಳಿಸಲಾಗಿತ್ತು.
ಪ್ರಾಧಿಕಾರದ ಸಲಹೆಗೆ ಅವರು ಒಪ್ಪಿಗೆ ನೀಡದೇ ಇದ್ದು, ಬದಲಿ ಜಮೀನನ್ನೇ ನೀಡುವಂತೆ ಒತ್ತಾಯಿಸಿರುತ್ತಾರೆ, ಇದು ಮುಡಾ ದಾಖಲೆಯಲ್ಲಿನ ಟಿಪ್ಪಣಿಗೆ ತಾವು ಏನಂತೀರಿ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಆಗ ಯಾವ ಹುದ್ದೆಯಲ್ಲಿದ್ದಿರಿ
ಇದು ತಮ್ಮ ಪ್ರಕಾರ ಟಿಪ್ಪಣಿಯೋ.., ಒಕ್ಕಣೆಯೋ.. ಅಥವಾ ಅಪ್ಪಣೆಯೋ.. ಸೂಪರ್ ಮುಖ್ಯಮಂತ್ರಿ ಅವರೇ ಒತ್ತಾಯಿಸಿರುತ್ತಾರೆ ಎಂದರೆ ಮುಡಾ ಅಧಿಕಾರಿಗಳು ಇನ್ನೇನು ಮಾಡಲು ಸಾಧ್ಯ, ಆಗ ತಾವು ರಾಜ್ಯದಲ್ಲಿ ಯಾವ ಹುದ್ದೆಯಲ್ಲಿದ್ದಿರಿ, ವಿಧಾನಸೌಧದ 3ನೇ ಮಹಡಿಯಲ್ಲಿರುವ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂತಿದ್ದಿರಿ.
ಈಗ ಹೇಳಿ, ಯಾರ ತಟ್ಟೆಯಲ್ಲಿ ಏನು ಸತ್ತು ಬಿದ್ದಿದೆ ಅಥವಾ ಕಪ್ಪುಚುಕ್ಕೆಯನ್ನು ವೈಟ್ನರ್ ನುಂಗಿತ್ತಾ ಎಂದು ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.