ಬೆಂಗಳೂರು:ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ವರಿಷ್ಠರು ಅಭಯ ನೀಡಿದ್ದರೂ ಮತ್ತೊಂದೆಡೆ ಪರ್ಯಾಯ ನಾಯಕತ್ವದ ಅನ್ವೇಷಣೆಯಲ್ಲೂ ಇದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಬಿಡಿ ನಿವೇಶನಗಳ ಹಂಚಿಕೆ ಹಗರಣ ಕುರಿತಂತೆ ರಾಜ್ಯ ಹೈಕೋರ್ಟ್ ಈ ತಿಂಗಳ 29ರಂದು ವಿಚಾರಣೆ ಮುಂದುವರೆಸಲಿದೆ.
ನ್ಯಾಯಾಲಯದ ತೀರ್ಪು ಮುಖ್ಯಮಂತ್ರಿಗೆ ವಿರುದ್ಧವಾದರೆ ಅಂತಹ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಉಳಿಸಿಕೊಳ್ಳಲು ಪಕ್ಷದ ಶಾಸಕರ ವಿಶ್ವಾಸ ಹೊಂದಿರುವ ನಾಯಕನ ಆಯ್ಕೆಗೆ ಮುಂದಾಗಿದೆ.
ಸಿದ್ದರಾಮಯ್ಯ ಒಪ್ಪಿಗೆ ವ್ಯಕ್ತಿ
ಅಂತಹ ಸನ್ನವೇಶ ನಿರ್ಮಾಣವಾದರೆ, ಸಿದ್ದರಾಮಯ್ಯ ಅವರಿಗೂ ಒಪ್ಪಿಗೆ ಆಗಬಹುದಾದ ವ್ಯಕ್ತಿಯ ಅನ್ವೇಷಣೆ ನಡೆದಿದೆ.
ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರ ನೀಡಿದರೆ ಸಿದ್ದರಾಮಯ್ಯ ಬೆಂಬಲಿಗರ ಮುನಿಸು ಎದುರಾಗುವ ಸಾಧ್ಯತೆ ಇದೆ.
ಶಿವಕುಮಾರ್ ಅವರಿಗೆ ಅವಕಾಶ ಮಾಡಿಕೊಟ್ಟರೆ ಸಿದ್ದರಾಮಯ್ಯ ಬೆಂಬಲಿಗರು ಸಿಡಿದೇಳಬಹುದೆಂಬ ಭಯ ಕಾಡಿದೆ.
ಇಂತಹ ಸನ್ನಿವೇಶವನ್ನು ಬಿಜೆಪಿ ತನ್ನ ರಾಜಕೀಯ ಲಾಭಕ್ಕೆ ಬಳಕೆ ಮಾಡಿಕೊಳ್ಳಬಹುದು, ಇದನ್ನು ತಪ್ಪಿಸುವ ಉದ್ದೇಶದಿಂದಲೇ ಎಲ್ಲರಿಗೂ ಒಪ್ಪಿಗೆಯಾಗುವಂತಹ ವ್ಯಕ್ತಿಯನ್ನು ನಾಯಕತ್ವಕ್ಕೆ ತರಲು ಮುಂದಾಗಿದೆ.
ಆಂತರಿಕವಾಗಿ ಚರ್ಚೆ
ಎಐಸಿಸಿ ವರಿಷ್ಠರು ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರನ್ನು ದೆಹಲಿಗೆ ಕರೆಸಿಕೊಂಡು ಮಾತನಾಡುವುದಕ್ಕೂ ಮುನ್ನ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅಧಿನಾಯಕ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರುಗಳು ಆಂತರಿಕವಾಗಿ ಎಲ್ಲಾ ಕೋನಗಳಿಂದಲೂ ಚರ್ಚಿಸಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಪರ್ಯಾಯವಾಗಿ ಮಲ್ಲಿಕಾರ್ಜುನ ಖರ್ಗೆ ಇಲ್ಲವೇ ಡಾ.ಜಿ.ಪರಮೇಶ್ವರ್ ಅವರನ್ನು ಸಿಎಲ್‌ಪಿ ನಾಯಕರನ್ನಾಗಿ ಮಾಡಿದರೆ ಸರ್ಕಾರ ಸುಭದ್ರವಾಗಿರುತ್ತದೆ ಎಂಬ ಆಲೋಚನೆಯೂ ಇದೆ.
ಆದರೆ, ಖರ್ಗೆ ಅವರಿಗೆ ಈಗಿರುವ ಉನ್ನತ ಹುದ್ದೆಗಳನ್ನು ಬಿಟ್ಟು ರಾಜ್ಯ ರಾಜಕಾರಣಕ್ಕೆ ಹಿಂತಿರುಗಲು ಆಸಕ್ತಿ ಇಲ್ಲ.
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅಷ್ಟೇ ಅಲ್ಲದೆ, ಡಾ.ಪರಮೇಶ್ವರ್ ಅವರನ್ನೂ ವರಿಷ್ಠರು ನಿನ್ನೆ ದೆಹಲಿಗೆ ಕರೆಸಿಕೊಂಡಿದ್ದರು.
ವರಿಷ್ಠರಿಂದ ಆಹ್ವಾನ ಇರಲಿಲ್ಲ
ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ಜೆ.ಜಾರ್ಜ್, ಜಮೀರ್ ಅಹಮದ್ ಖಾನ್, ಆರ್.ಬಿ.ತಿಮ್ಮಾಪುರ್, ಪ್ರಿಯಾಂಕ್ ಖರ್ಗೆ ಅಲ್ಲದೆ, ಕೆಲವು ಶಾಸಕರು ಮುಖ್ಯಮಂತ್ರಿ ಅವರ ಜೊತೆ ದೆಹಲಿಗೆ ತೆರಳಿದ್ದರೇ ಹೊರತು ಅವರುಗಳಿಗೆ ವರಿಷ್ಠರಿಂದ ಆಹ್ವಾನ ಇರಲಿಲ್ಲ.
ಆದರೆ, ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರೊಂದಿಗೆ ಸಮಾಲೋಚನೆ ಮಾಡುವಾಗ ಡಾ.ಪರಮೇಶ್ವರ್ ಸಭೆಯಲ್ಲಿ ಉಪಸ್ಥಿತರಿರಲಿಲ್ಲವಾದರೂ, ಅವರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ.
ಖರ್ಗೆ ಇಲ್ಲವೇ ಪರಮೇಶ್ವರ್ ಅವರನ್ನು ಅಧಿಕಾರಕ್ಕೆ ತಂದರೆ ಸಿದ್ದರಾಮಯ್ಯ ಬೆಂಬಲಿಗರು ಪ್ರಶ್ನೆ ಮಾಡುವುದಿಲ್ಲ, ದಲಿತ ನೇತೃತ್ವದ ಸರ್ಕಾರ ಬಂದರೆ ಪಕ್ಷಕ್ಕೆ ಒಳ್ಳೆಯ ವರ್ಚಸ್ಸು ಬರಲಿದೆ.
ಸರ್ಕಾರ ಉರುಳಿಸುವ ಪ್ರಯತ್ನವನ್ನು ಪ್ರತಿಪಕ್ಷ ಬಿಜೆಪಿ ಮಾಡುವುದಿಲ್ಲ ಎಂಬ ಎಲ್ಲಾ ರೀತಿಯ ಆಲೋಚನೆಗಳು ವರಿಷ್ಠರದ್ದಾಗಿದೆ.
ಶಿವಕುಮಾರ್ ಮನವೊಲಿಕೆ
ಅಂತಹ ಸನ್ನಿವೇಶದಲ್ಲಿ ಶಿವಕುಮಾರ್ ಅವರ ಮನವೊಲಿಸಿ ಈಗಿನ ಹುದ್ದೆಗಳಲ್ಲೇ ಮುಂದುವರೆಸಬಹುದು ಎಂಬ ಚಿಂತನೆಯೂ ನಡೆದಿದೆ.
ನ್ಯಾಯಾಲಯದ ಆದೇಶವನ್ನೇ ವರಿಷ್ಠರು ಎದುರು ನೋಡುತ್ತಿದ್ದು, ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯ ಈ ತೀರ್ಪಿನ ಮೇಲೆ ನಿಂತಿದೆ.
ವರಿಷ್ಠರ ಜೊತೆಗಿನ ಸಮಾಲೋಚನೆ ವೇಳೆ ಇಂಡಿಯಾ ಮೈತ್ರಿಕೂಟದ ಸದಸ್ಯರ ಜೊತೆಗೂಡಿ ರಾಷ್ಟ್ರಪತಿ ಅವರನ್ನು ಭೇಟಿ ಮಾಡುವುದಲ್ಲದೆ, ಕರ್ನಾಟಕ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ನಿರ್ಧಾರದ ವಿರುದ್ಧ ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪವಾಗಿದೆ.
ಆದರೆ, ನ್ಯಾಯಾಲಯದ ತೀರ್ಪು ಬರುವವರೆಗೂ ಇಂತಹ ನಿರ್ಧಾರಕ್ಕೆ ಮುಂದಾಗುವುದು ಬೇಡ ಎಂದು ವೇಣುಗೋಪಾಲ್ ಸಲಹೆಗೆ ರಾಹುಲ್, ಖರ್ಗೆ ಸಮ್ಮತಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರತಿಭಟನೆ ನಿರ್ಧಾರವನ್ನು ತಾತ್ಕಾಲಿಕವಾಗಿ ಕೈಬಿಡಲಾಗಿದೆ.