ಶ್ರೀನಗರ – ಬಾರಮುಲ್ಲಾ ರೈಲಿನಲ್ಲಿ ಪ್ರಯಾಣ; ಗೌಡರೇ ಮಂಜೂರು ಮಾಡಿದ್ದ ರೈಲ್ವೆ ಯೋಜನೆ
ನವದೆಹಲಿ/ಶ್ರೀನಗರ : ತಾವು ಪ್ರಧಾನಿಗಳಾದ 28 ವರ್ಷಗಳ ನಂತರ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ಕಣಿವೆ ರಾಜ್ಯ ಕಾಶ್ಮೀರಕ್ಕೆ ಭೇಟಿ ನೀಡಿ ದೇಶದ ಕೊನೆಯ ಭಾಗದಲ್ಲಿರುವ ಉರಿ ಜಲವಿದ್ಯುತ್ ಘಟಕವನ್ನು ಖುದ್ದು ವೀಕ್ಷಿಸಿದರು.
ಬುಧವಾರವೇ ಶ್ರೀನಗರಕ್ಕೆ ಆಗಮಿಸಿದ್ದ ಮಾಜಿ ಪ್ರಧಾನಿಗಳು, 28 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಕಣಿವೆ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಗುರುವಾರ ಬೆಳಗ್ಗೆಯೇ ಶ್ರೀನಗರದಿಂದ ಬಾರಮುಲ್ಲಾಕ್ಕೆ ರೈಲಿನಲ್ಲಿ ಪ್ರಯಾಣ ಮಾಡಿದ್ದು, ತಾವು ಪ್ರಧಾನಿಗಳಾಗಿದ್ದ ಸಂದರ್ಭದಲ್ಲಿ ಈ ರೇಲ್ವೆ ಮಾರ್ಗಕ್ಕೆ ಮಂಜೂರಾತಿ ನೀಡಿದ್ದನ್ನು ನೆನಪು ಮಾಡಿಕೊಂಡರು.
ಬಾರಾಮುಲ್ಲಾದಿಂದ ಉರಿಗೆ ತೆರಳಿದ ಅವರು, ಅಲ್ಲಿನ ರಾಷ್ಟ್ರೀಯ ಜಲವಿದ್ಯುತ್ ಉತ್ಪಾದನಾ ಘಟಕ (National Hydroelectric Power Corporation Private Limited- NHPC) ಕ್ಕೆ ಭೇಟಿ ಕೊಟ್ಟರು. 480 ಮೆಗಾವ್ಯಾಟ್ ಸಾಮರ್ಥ್ಯದ ಈ ವಿದ್ಯುತ್ ಘಟಕವೂ ದೇವೇಗೌಡರು ಪ್ರಧಾನಿಯಾಗಿದ್ದಾಗಲೇ ಉದ್ಘಾಟನೆ ಆಗಿತ್ತು. ಈ ವಿದ್ಯುತ್ ಉತ್ಪಾದನಾ ಘಟಕವೂ ಉರಿಯ ಝಿಲಂ ನದಿ ದಂಡೆಯಲ್ಲಿ, ಭಾರತ – ಪಾಕಿಸ್ತಾನದ ನಡುವಿನ ನಿಯಂತ್ರಣ ರೇಖೆಗೆ (LOC) ಅತಿ ಸಮೀಪದಲ್ಲಿದೆ.
ವಿದ್ಯುತ್ ಸ್ಥಾವರದ ಉದ್ದಗಲಕ್ಕೂ ತೆರಳಿದ ಮಾಜಿ ಪ್ರಧಾನಿಗಳು, ತಾವು ಘಟಕಕ್ಕೆ ಭೇಟಿ ನೀಡಿದ್ದ ಸಂದರ್ಭವನ್ನು ಸ್ಮರಣೆ ಮಾಡಿಕೊಂಡರಲ್ಲದೆ, ಅಲ್ಲಿನ ಸಿಬ್ಬಂದಿ, ಅಧಿಕಾರಿಗಳ ಜತೆ ಅಂದಿನ ಸಂದರ್ಭವನ್ನು, ಸೇನೆಯ ಎಚ್ಚರಿಕೆಯನ್ನು ಲೆಕ್ಕಿಸದೆ ಘಟಕದ ಸುರಂಗಕ್ಕೆ ಭೇಟಿ ಕೊಟ್ಟಿದ್ದನ್ನು ನೆನಪು ಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಗೌಡರು, ನಾನು ಪ್ರಧಾನಿ ಸ್ಥಾನದಿಂದ ಕೆಳಗಿಳಿದ 28 ವರ್ಷಗಳ ನಂತರ ನಾನು ಕಾಶ್ಮೀರಕ್ಕೆ ಭೇಟಿ ನೀಡಿದ್ದೇನೆ. ಅಂದಿನ ಕಾಶ್ಮೀರಕ್ಕೂ ಇಂದಿನ ಕಾಶ್ಮೀರಕ್ಕೂ ಬಹಳಷ್ಟು ವ್ಯತ್ಯಾಸ ಕಾಣುತ್ತಿದೆ. ನಾನು ಪ್ರಧಾನಿ ಆಗಿದ್ದಾಗ 13 ಫೆಬ್ರವರಿ 1997ರಂದು ಈ ಘಟಕವನ್ನು ದೇಶಕ್ಕೆ ಸಮರ್ಪಣೆ ಮಾಡಿದ್ದೆ ಎಂದರು.
ನಿರ್ಮಾಣ ಹಂತದಲ್ಲಿದ್ದ ಈ ಘಟಕಕ್ಕೆ ಎರಡು ಬಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೆ. ಆ ಭೇಟಿಗಳು ನನ್ನ ಪಾಲಿಗೆ ರೋಚಕ ಅನುಭವ ಎಂದು ಹೇಳಬಹುದು. ಮತ್ತೆ ಈ ವಿದ್ಯುತ್ ಘಟಕಕ್ಕೆ ಭೇಟಿ ನೀಡಿದ್ದು ಬಹಳ ಸಂತೋಷ ಉಂಟು ಮಾಡಿದೆ ಎಂದು ಹೇಳಿದರು.
ಇದೇ ವೇಳೆ ಮಾಜಿ ಪ್ರಧಾನಿಗಳು ಈ ವಿದ್ಯುತ್ ಘಟಕದ ಉದ್ಘಾಟನಾ ಫಲಕದ ಮುಂದೆ ನಿಂತು ಬಹಳ ಸಂತೋಷದಿಂದ ಫೋಟೋ ತೆಗೆಸಿಕೊಂಡರು. ಅಂದಿನ ಕಾರ್ಯಕ್ರಮದ ಕ್ಷಣಗಳನ್ನು ಅಧಿಕಾರಿಗಳ ಜತೆ ಹಂಚಿಕೊಂಡರು. ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನಸೋತರು.
ರೈಲು ಪ್ರಯಾಣದ ಬಗ್ಗೆ ಸಂತಸ
ಶ್ರೀನಗರ – ಬಾರಮುಲ್ಲಾ ನಡುವಿನ ರೈಲು ಪ್ರಯಾಣದ ಬಗ್ಗೆಯೂ ಸಂತಸ ವ್ಯಕ್ತಪಡಿಸಿದ ಗೌಡರು, ತಾವು ಪ್ರಧಾನಿಯಾಗಿದ್ದಾಗ ಕಣಿವೆ ರಾಜ್ಯಕ್ಕೆ ಭೇಟಿ ನೀಡಿದ ವೇಳೆ ಈ ರೇಲ್ವೆ ಮಾರ್ಗಕ್ಕೆ ಮಂಜೂರಾತಿ ನೀಡಿದ ಸಂದರ್ಭವನ್ನು ಮೆಲುಕು ಹಾಕಿದರು.
1996, 1997ರ ಸಂದರ್ಭದಲ್ಲಿ ಕಾಶ್ಮೀರದ ಜನರು ಸಂಪರ್ಕ ಜಾಲದಿಂದ ವಂಚಿತರಾಗಿದ್ದರು. ಭಯೋತ್ಪಾದಕ ಚಟುವಟಿಕೆಗಳಿಂದ ಜರ್ಜರಿತರಾಗಿದ್ದರು. ಆ ಸಂದರ್ಭದಲ್ಲಿ ಬಾರಾಮುಲ್ಲಾ ಮತ್ತು ಶ್ರೀನಗರ ನಡುವೆ ರೇಲ್ವೆ ಮಾರ್ಗ ನಿರ್ಮಿಸುವ ಯೋಜನೆಗೆ ನಾನು ಮಂಜೂರಾತಿ ಕೊಟ್ಟೆ. ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಿದ್ದೆ. ಇವತ್ತು ಅದೇ ರೈಲು ಮಾರ್ಗದ ರೈಲಿನಲ್ಲಿ ಪ್ರಯಾಣ ಮಾಡಿದ್ದು ನನಗೆ ಮರೆಯಲಾಗದ ಅವಿಸ್ಮರಣೀಯ ಕ್ಷಣ ಎಂದು ಅವರು ಭಾವುಕರಾದರು.
ಈ ಸಂದರ್ಭದಲ್ಲಿ ಮಾಜಿ ಪ್ರಧಾನಿಗಳನ್ನು ರೇಲ್ವೆ ಅಧಿಕಾರಿಗಳು ಆತ್ಮೀಯವಾಗಿ ಬರ ಮಾಡಿಕೊಂಡರು. ಈ ಸಂದರ್ಭದಲ್ಲಿ ರೇಲ್ವೆ ಮಾರ್ಗದ ಬಗ್ಗೆ ಹಾಗೂ ಜತೆಗೆ ಆಗುತ್ತಿರುವ ಉಪಯೋಗದ ಬಗ್ಗೆ ಮಾಜಿ ಪ್ರಧಾನಿಗಳು ಮಾಹಿತಿ ಪಡೆದುಕೊಂಡರು.
ಬೆಳಿಗ್ಗೆ 11:30ಕ್ಕೆ ಶ್ರೀನಗರದಲ್ಲಿ ರೈಲು ಹಿಡಿದ ಮಾಜಿ ಪ್ರಧಾನಿಗಳು, ಮಧ್ಯಾಹ್ನ 12:30 ಗಂಟೆಗೆ ಬಾರಮುಲ್ಲಾ ತಲುಪಿದರು.
ತಾವು ಪ್ರಧಾನಿಯಾಗಿದ್ದಾಗ ಕಾಶ್ಮೀರದ ರೈತರಿಗಾಗಿ ಒಟ್ಟು 200 ಕೋಟಿ ರೂ. ಸಾಲ ಮನ್ನಾ ಮಾಡಿದೆ. ಕಣಿವೆ ರಾಜ್ಯದ ಪ್ರತಿ ರೈತರ 50,000 ರೂ.ಸಾಲ ಮನ್ನಾ ಮಾಡಲಾಯಿತು. ಅಂದು ಪ್ರಧಾನಿಯಾಗಿ ರೈತರನ್ನು ಭೇಟಿಯಾಗಿ ಅವರ ಸಂಕಷ್ಟವನ್ನು ಆಲಿಸಿದ್ದೆ. ಅವರಿಗೆ ನೆರವಾಗುವ ಉದ್ದೇಶದಿಂದ ಸಾಲ ಮನ್ನಾ ಮಾಡಲಾಯಿತು ಎಂದು ಮಾಜಿ ಪ್ರಧಾನಿಗಳು ಸುದ್ದಿಗಾರರ ಜತೆ ಮಾತಾಡುತ್ತಾ ಹೇಳಿದರು.
ನಾಳೆ ದಾಲ್ ಸರೋವರ, ಶಂಕರರ ದೇಗುಲಕ್ಕೆ ಭೇಟಿ
ಶುಕ್ರವಾರವೂ ಮಾಜಿ ಪ್ರಧಾನಿಗಳು ಶ್ರೀನಗರದ ದಾಲ್ ಸರೋವರ ಹಾಗೂ ಶ್ರೀ ಶಂಕರಾಚಾರ್ಯ ದೇಗುಲಕ್ಕೆ ಭೇಟಿ ನೀಡಲಿದ್ದಾರೆ.