ಬೆಂಗಳೂರು:ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ದ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಪೂರ್ವಭಾವಿ ಪರೀಕ್ಷೆಯ ಕನ್ನಡ ಅನುವಾದಿತ ಪ್ರಶ್ನೆಗಳು ಅಸಮರ್ಪಕವಾಗಿರುವ ಆರೋಪದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳನ್ನು ಅಮಾನತು ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಪರೀಕ್ಷಾರ್ಥಿಗಳಿಗೆ ಅನ್ಯಾಯವಾಗಬಾರದು, ಮುಂದಿನ ಎರಡು ತಿಂಗಳಲ್ಲಿ ಮರುಪರೀಕ್ಷೆ ನಡೆಸುವಂತೆ ಆಯೋಗಕ್ಕೆ ಸೂಚನೆ ನೀಡಿದ್ದಾರೆ.
ಸಮರ್ಪಕ ಮರುಪರೀಕ್ಷೆ
ಮುಂದೆ ಕೈಗೊಳ್ಳಲಾಗುವ ಗೆಜೆಟೆಡ್ ಪ್ರೊಬೆಷನರಿ ಮರುಪರೀಕ್ಷೆಗಳನ್ನು ಅತ್ಯಂತ ಜವಾಬ್ದಾರಿ ಹಾಗೂ ಸಮರ್ಪಕವಾಗಿ ನಡೆಸುವಲ್ಲಿ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಬೇಕು.
ಗೆಜೆಟೆಡ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗಳ ಸಮಗ್ರತೆ ಮತ್ತು ನಂಬಿಕಾರ್ಹತೆಯನ್ನು ಎತ್ತಿಹಿಡಿದು ಪರೀಕ್ಷಾರ್ಥಿಗಳ ಹಿತರಕ್ಷಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ಟ್ವೀಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಕಳೆದ ಆಗಸ್ಟ್ 27ರಂದು 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಗ್ರೂಪ್ ’ಎ’ ಮತ್ತು ಗ್ರೂಪ್ ’ಬಿ’ ವೃಂದದ ಒಟ್ಟು 384 ಹುದ್ದೆಗಳಿಗೆ ಆಯೋಗ ಪೂರ್ವಭಾವಿ ಪರೀಕ್ಷೆ ನಡೆಸಿತ್ತು.
ಸುಮಾರು 2 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, ಕನ್ನಡದ ಪ್ರಶ್ನೆಗಳು ತಪ್ಪಾಗಿದ್ದವು, 60ಕ್ಕೂ ಹೆಚ್ಚು ತಪ್ಪುಗಳನ್ನು ಪತ್ತೆ ಮಾಡಲಾಗಿತ್ತು, ಇದರಿಂದ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ತೊಂದರೆಯಾಗಿತ್ತು.
ಆರ್.ಅಶೋಕ್ ಟ್ವೀಟ್
ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಪೂರ್ವಭಾವಿ ಮರುಪರೀಕ್ಷೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆದೇಶ ಹೊರಬಿದ್ದ ಬೆನ್ನಲ್ಲೇ ಟ್ವೀಟ್ ಮಾಡಿರುವ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಸರ್ಕಾರ ತನ್ನ ಲೋಪಗಳನ್ನು ಒಪ್ಪಿಕೊಂಡು ಮರುಪರೀಕ್ಷೆ ನಡೆಸಲು ಕೈಗೊಂಡಿರುವ ನಿರ್ಧಾರ ಅತ್ಯಂತ ಸ್ವಾಗತಾರ್ಹ, ಇದು ಲಕ್ಷಾಂತರ ಉದ್ಯೋಗಾಕಾಂಕ್ಷಿಗಳು ಹಾಗೂ ಪ್ರತಿಪಕ್ಷಗಳ ಹೋರಾಟಕ್ಕೆ ಸಿಕ್ಕ ಜಯವಾಗಿದೆ ಎಂದಿದ್ದಾರೆ.
ಮರುಪರೀಕ್ಷೆ ಸಮರ್ಪಕವಾಗಿ ನಡೆಸಬೇಕು, ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತೊಂದರೆಯಾಗದಂತೆ ಪರೀಕ್ಷಾ ದಿನಾಂಕಗಳ ನಿಗದಿ, ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರಗಳ ಹಂಚಿಕೆ, ಪ್ರಶ್ನೆ ಪತ್ರಿಕೆಗಳ ರಚನೆ, ಕನ್ನಡ ಅನುವಾದ ಸೇರಿದಂತೆ ಎಲ್ಲ ಅಂಶಗಳನ್ನು ಪರಿಗಣಿಸಿ ಅತ್ಯಂತ ಜಾಗರೂಕತೆ ಹಾಗೂ ಸುವ್ಯವಸ್ಥಿತ ಪರೀಕ್ಷೆ ನಡೆಸಬೇಕು.
ಪೂರ್ವಭಾವಿ ಪರೀಕ್ಷೆ ಎಡವಟ್ಟುಗಳಿಗೆ ಕಾರಣರಾದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.