ಚೆನ್ನೈ:ಈ ವರ್ಷ ವರುಣದೇವ ನಮ್ಮನ್ನು ಕಾಪಾಡಿದ್ದಾನೆ, ಮೇಕೆದಾಟು ಯೋಜನೆ ಸಾಕಾರಗೊಂಡರೆ ಕರ್ನಾಟಕಕ್ಕಿಂತ ತಮಿಳುನಾಡಿನ ಜನತೆಗೆ ಹೆಚ್ಚು ಉಪಯೋಗ ಆಗಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.
ಶ್ರೀನಿವಾಸ ಸಾಲಿಡ್ ವೇಸ್ಟ್ ಮ್ಯಾನೇಜ್‌ಮೆಂಟ್ ಘಟಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮೇಕೆದಾಟು ಅಣೆಕಟ್ಟಿಗೆ ತಮಿಳುನಾಡು ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿ, ಈ ಬಾರಿ ಉತ್ತಮ ಮಳೆಯಿಂದ ತಮಿಳುನಾಡಿಗೆ ಒಳ್ಳೆಯದಾಗಿದೆ ಎಂದು ಚುಟುಕಾಗಿ ನುಡಿದರು.
ತ್ಯಾಜ್ಯ ನಿರ್ವಹಣೆ ಅಧ್ಯಯನ
ಘನ ತ್ಯಾಜ್ಯ ನಿರ್ವಹಣೆ ಸೇರಿದಂತೆ ಕಸದಿಂದ ಅನಿಲ ಉತ್ಪಾದನೆ ಬಗ್ಗೆ ತಿಳಿದುಕೊಳ್ಳಲು 15 ಅಧಿಕಾರಿಗಳ ತಂಡದ ಜೊತೆ ಚೆನ್ನೈಗೆ ಅಧ್ಯಯನಕ್ಕೆ ಬಂದಿದ್ದು, ತ್ಯಾಜ್ಯ ನಿರ್ವಹಣೆ ಕುರಿತು ಹಲವು ವಿಚಾರಗಳನ್ನು ತಿಳಿದುಕೊಂಡಂತಾಯಿತು, ಘಟಕಕ್ಕೆ ಭೇಟಿ ನೀಡಲು ಈಗ ಸಮಯ ಸಿಕ್ಕಿದೆ, ಕರ್ನಾಟಕದಲ್ಲೂ ತ್ಯಾಜ್ಯ ನಿರ್ವಹಣೆಗೆ ಇಲ್ಲಿನ ಉತ್ತಮ ಅಂಶಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದರು.
ಹಲವೆಡೆ ಘನ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಯಶಸ್ಸು ಕಂಡಿಲ್ಲ, ಕನಾಟಕದಲ್ಲೂ 10 ಕಡೆ ಕಸದಿಂದ ವಿದ್ಯುತ್ ಉತ್ಪಾದನೆಗೆ ಅವಕಾಶ ನೀಡಲಾಗಿತ್ತು, ಹೈದರಾಬಾದ್‌ನಲ್ಲಿ ನಗರದ ನಡುವೆಯೇ ಸಿಎನ್‌ಜಿ ಉತ್ಪಾದನಾ ಘಟಕ ಅಚ್ಚುಕಟ್ಟಾಗಿ ನಿರ್ಮಿಸಲಾಗಿದೆ, ನಮ್ಮ ರಾಜ್ಯದಲ್ಲೂ ಒಂದಷ್ಟು ಒಳ್ಳೆಯ ಕೆಲಸ ಮಾಡಿದ್ದೇವೆ.
ಕರ್ನಾಟಕದಲ್ಲಿ ಸಿಎ ನಿವೇಶನ ಹಂಚಿಕೆ ಕಾನೂನಾತ್ಮಕವಾಗಿ ನಡೆದಿದೆ, ಯಾವುದೇ ಅಕ್ರಮ ಆಗಿಲ್ಲ, ವ್ಯಕ್ತಿಗೆ ಸೈಟು ಹಂಚಿಲ್ಲ, ಚಾರಿಟೆಬಲ್ ಟ್ರಸ್ಟ್‌ಗೆ ನೀಡಿದ್ದೇವೆ.
ತಮಿಳುನಾಡು ಉಪಮುಖ್ಯಮಂತ್ರಿ ಅವರನ್ನು ಸಮಯ ಹೊಂದಿಸಿಕೊಂಡು ಸ್ನೇಹಪೂರ್ವಕ ಭೇಟಿ ಮಾಡುವುದಾಗಿ ತಿಳಿಸಿದರು.