ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಧ್ಯವರ್ತಿ
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಪ್ರಾಸಿಕ್ಯೂಷನ್ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿ ಇರುವಾಗಲೇ ಸಂಪುಟದ ಪ್ರಭಾವೀ ಸಚಿವರೊಬ್ಬರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಬಿಜೆಪಿ ನಾಯಕರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿರುವುದು ರಾಜ್ಯ ಕಾಂಗ್ರೆಸ್‌ನಲ್ಲಿ ತಲ್ಲಣ ಉಂಟು ಮಾಡಿದೆ.
ರಾಜ್ಯಪಾಲರು ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ನೀಡುತ್ತಿದ್ದಂತೆ ಈ ಸಚಿವರು ಕಳೆದ 15 ದಿನದಲ್ಲಿ ಎರಡು ಬಾರಿ ದೆಹಲಿಗೆ ತೆರಳಿ ಬಿಜೆಪಿ ಮುಖಂಡರನ್ನು ಭೇಟಿ ಮಾಡಿದ್ದಾರೆ.
ಸಚಿವರು ದೆಹಲಿಯ ಬಿಜೆಪಿ ನಾಯಕರ ಭೇಟಿಗೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಕಾನೂನಿನ ಇಕ್ಕಳಕ್ಕೆ ಸಿಲುಕಿ ಸಿದ್ದರಾಮಯ್ಯ ಅಧಿಕಾರದಿಂದ ಕೆಳಕ್ಕಿಳಿದರೆ ತಾವು ಮತ್ತೊಬ್ಬ ನಾಯಕನ ಅಡಿಯಲ್ಲಿ ಕಾರ್ಯನಿರ್ವಹಿಸಲು, ಇಲ್ಲವೇ, ಕಾಂಗ್ರೆಸ್‌ನಲ್ಲಿ ಉಳಿಯುವ ಆಸಕ್ತಿ ಇವರಿಗಿಲ್ಲ.
ಅದರಲ್ಲೂ ಕಾಂಗ್ರೆಸ್ ವರಿಷ್ಠರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಪರ್ಯಾಯ ನಾಯಕನನ್ನಾಗಿ ಆಯ್ಕೆ ಮಾಡಿದಲ್ಲಿ, ಅಂತಹ ಸರ್ಕಾರದಲ್ಲಿ ಮಂತ್ರಿಯೂ ಆಗುವುದಿಲ್ಲ ಎಂಬುದನ್ನು ಈಗಾಗಲೇ ಆಪ್ತರ ಬಳಿ ಹೇಳಿಕೊಂಡಿದ್ದಾರೆ.
ಇದೇ ನಿಲುವನ್ನು ಸಿದ್ದರಾಮಯ್ಯ ಸಂಪುಟದ ಕೆಲವು ಸಚಿವರು ಹಾಗೂ ಶಾಸಕರೂ ಹೊಂದಿರುವುದಲ್ಲದೆ, ಈ ಸಚಿವರ ಬೆನ್ನಿಗೆ ನಿಂತಿದ್ದಾರೆ.
ಸಿದ್ದರಾಮಯ್ಯ ಅಧಿಕಾರದಲ್ಲಿ ಇರುವವರೆಗೂ ಅವರ ಜೊತೆ ಇರುತ್ತೇವೆ. ಅವರು ಅಧಿಕಾರದಿಂದ ಕೆಳಗಿಳಿದರೆ ನಾವು ಮತ್ತೊಬ್ಬರ ಅಡಿಯಲ್ಲಿ ಕೆಲಸ ಮಾಡುವುದಿಲ್ಲ ಎಂದು ಹಲವು ಬಾರಿ ಹೇಳಿದ್ದಾರೆ.
ಇನ್ನು ಕಾಂಗ್ರೆಸ್‌ನಲ್ಲಿ ತಮಗೆ ಮುಖ್ಯಮಂತ್ರಿ ಅವಕಾಶ ದೊರೆಯುವುದು ಕಷ್ಟ ಎಂಬುದನ್ನು ಅರಿತಿರುವ ಈ ಸಚಿವರು, ಬಿಜೆಪಿ ಜೊತೆ ಕೈಜೋಡಿಸಿ ಶಿವಕುಮಾರ್ ಅವರಿಗೆ ಸಿಗುವ ಅಧಿಕಾರ ತಪ್ಪಿಸುವ ಕೆಲಸ ಇದಾಗಿದೆ ಎನ್ನಲಾಗಿದೆ.
ಕಳೆದ ಮೂರ‍್ನಾಲ್ಕು ದಿನಗಳಿಂದ ನ್ಯಾಯಾಲಯದಲ್ಲಿ ಪ್ರಕರಣದ ವಾದ-ಪ್ರತಿವಾದ ನಡೆಯುತ್ತಿದ್ದ ಬೆನ್ನಲ್ಲೇ ನಿನ್ನೆ ದೆಹಲಿಗೆ ತೆರಳಿದ ಸಚಿವರು, ಇಡೀ ದಿನ ಬಿಜೆಪಿ ನಾಯಕರೊಂದಿಗೆ ಸಮಾಲೋಚನೆ ನಡೆಸಿ ರಾತ್ರಿ ಹಿಂತಿರುಗಿದ್ದಾರೆ.
ಕಾಂಗ್ರೆಸ್ ನಾಯಕರಿಗೂ ಈ ಸಚಿವರ ನಡೆ ಬಗ್ಗೆ ಸ್ಪಷ್ಟ ಮಾಹಿತಿ ಇದೆ, ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಕೆಲವು ಹಿರಿಯ ಸಚಿವರು ಪ್ರಯತ್ನ ನಡೆಸಿದ್ದಾರಾದರೂ, ತಮ್ಮ ನಿಲುವಿನಿಂದ ಹಿಂದೆ ಸರಿದಿಲ್ಲ.
ಗೋವಾ ಮುಖ್ಯಮಂತ್ರಿ ಸಾವಂತ್, ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರೊಂದಿಗೆ ನಡೆಸುತ್ತಿರುವ ಚರ್ಚೆಯನ್ನು ಬಹಳ ಗೌಪ್ಯವಾಗಿ ಇಡಲಾಗಿದೆ.