ಬೆಂಗಳೂರು:ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಜೆಡಿಎಸ್‌ನ ಹಿರಿಯ ಕಾರ್ಯಕರ್ತ ಜಯಮುತ್ತು ಕಣಕ್ಕಿಳಿಯುವುದು ಬಹುತೇಕ ಖಚಿತ.
ರಾಜ್ಯದಲ್ಲಿ ತೆರವಾಗಿರುವ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್‌ನಲ್ಲಿ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಕಸರತ್ತು ನಡೆಸಿರುವ ಬೆನ್ನಲ್ಲೇ ಚನ್ನಪಟ್ಟಣ ಕ್ಷೇತ್ರವನ್ನು ತನ್ನ ಮಿತ್ರ ಪಕ್ಷವಾದ ಜೆಡಿಎಸ್‌ಗೆ ಬಿಟ್ಟುಕೊಟ್ಟಿದೆ.
ಸಿ.ಪಿ.ಯೋಗೇಶ್ವರ್‌ಗೆ ನಿರಾಸೆ
ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಮೂಲಕ ಉಪಚುನಾವಣೆಯಲ್ಲಿ ಕಣಕ್ಕಿಳಿಯಲು ಭಾರೀ ಹರಸಾಹಸ ಮಾಡಿದ್ದ ಮಾಜಿ ಸಚಿವ, ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರಿಗೆ ಭಾರೀ ನಿರಾಸೆಯಾಗಿದೆ.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಂದ ತೆರವಾದ ಕ್ಷೇತ್ರದಲ್ಲಿ ಕಣಕ್ಕಿಳಿಯಲು ಯೋಗೇಶ್ವರ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮೂಲಕ ಭಾರೀ ಕಸರತ್ತು ನಡೆಸಿದ್ದರು.
ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಡಲು ಕುಮಾರಸ್ವಾಮಿ, ಸಾರಾಸಗಟಾಗಿ ನಿರಾಕರಿಸಿದ್ದು ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ರಾಧಾ ಮೋಹನ್‌ದಾಸ್ ಅಗರ್ವಾಲ್ ಸಹಾ ಜೆಡಿಎಸ್ ಬೆಂಬಲಕ್ಕೆ ನಿಂತಿದ್ದರಿಂದ ಯೋಗೇಶ್ವರ್ ಅವರಿಗೆ ಟಿಕೆಟ್ ಇಲ್ಲ ಎಂಬುದು ಖಚಿತಗೊಂಡಿದೆ.
ಬಿಜೆಪಿ ವರಿಷ್ಠರ ಕಿವಿಮಾತು
ದೆಹಲಿಯ ಬಿಜೆಪಿ ವರಿಷ್ಠರು ಕೂಡಾ ಜೆಡಿಎಸ್ ಕ್ಷೇತ್ರವನ್ನು ನಾವು ಪಡೆಯಲು ಸಾಧ್ಯವಿಲ್ಲ, ಮೈತ್ರಿ ಮತ್ತಷ್ಟು ಗಟ್ಟಿಯಾಗಿ ಮುಂದುವರೆಯಬೇಕು, ನಿಮಗೆ ವಿಧಾನ ಪರಿಷತ್ ಸದಸ್ಯತ್ವ ಇನ್ನೂ ಎರಡು ವರ್ಷ ಇರುವುದರಿಂದ ಕಣಕ್ಕಿಳಿಯುವುದು ಬೇಡ ಎಂದು ಕಿವಿಮಾತು ಹೇಳಿದ್ದರು.
ಇದರ ನಡುವೆ ಕುಮಾರಸ್ವಾಮಿ ತಮ್ಮ ಕುಟುಂಬದವರನ್ನು ಉಪಚುನಾವಣೆಯಲ್ಲಿ ಕಣಕ್ಕಿಳಿಸುವ ಬಗ್ಗೆ ಆಸಕ್ತಿ ತೋರದೆ ಜಯಮುತ್ತು ಅವರಿಗೆ ಅಭ್ಯರ್ಥಿಯಾಗಲು ಸಿದ್ಧರಾಗಿ ಮತ್ತು ಕ್ಷೇತ್ರದಲ್ಲಿ ಕೆಲಸ ಮಾಡಿ ಎಂದು ತಿಳಿಸಿದ್ದಾರಂತೆ.
ಇದರ ಬೆನ್ನಲ್ಲೇ ಜಯಮುತ್ತು ಜೆಡಿಎಸ್ ಯುವಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ನಾಳೆ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಚುನಾವಣಾ ಕಣಕ್ಕೆ ಧುಮುಕಲಿದ್ದಾರೆ.
ನಿಲುವು ಬದಲು ಸಾಧ್ಯತೆ
ಒಂದು ವೇಳೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಸಹೋದರ ಡಿ.ಕೆ.ಸುರೇಶ್ ಅವರನ್ನು ಕಣಕ್ಕಿಳಿಸಿದರೆ ಜೆಡಿಎಸ್ ಕೊನೆ ಗಳಿಗೆಯಲ್ಲಿ ತನ್ನ ನಿಲುವು ಬದಲಿಸಿ, ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.
ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಚಿವ ಇ.ತುಕಾರಾಂ ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಸತ್‌ಗೆ ಆಯ್ಕೆಗೊಂಡ ಹಿನ್ನೆಲೆಯಲ್ಲಿ ಚನ್ನಪಟ್ಟಣ, ಶಿಗ್ಗಾಂವ್ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.