ಹಾಸನ:ಕಣ್ಣೆದುರಿಗಿರುವ ಸತ್ಯವನ್ನು ಸುಳ್ಳು ಎಂದು ಬಿಂಬಿಸಿ ನಿಮ್ಮನ್ನು ಬಕ್ರಾ ಮಾಡಲು ಯತ್ನಿಸುತ್ತಿರುವವರ ಬಗ್ಗೆ ಹುಷಾರಾಗಿರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.
ನಮ್ಮದು ನುಡಿದಂತೆ ನಡೆಯುವ ಸರ್ಕಾರ, ಹಿಂದೆ ಅಧಿಕಾರದಲ್ಲಿ ಇದ್ದಾಗ ಎತ್ತಿನಹೊಳೆ ಯೋಜನೆಗೆ ಅಡಿಪಾಯ ಹಾಕಿದ್ದು, ಈಗ ಮತ್ತೆ ಅಧಿಕಾರಕ್ಕೆ ಬಂದು ಬರಡು ಭೂಮಿಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದೇನೆ.
ಅಪನಂಬಿಕೆ ಸೃಷ್ಟಿಸುವವರ ಮಾತುಗಳನ್ನು ಕೇಳಬೇಡಿ, ನಿಮ್ಮ ಕಣ್ಣೆದುರಿಗೆ ಇರುವುದನ್ನು ನಂಬಿ ಎಂದು ಕರೆ ನೀಡಿದ್ದಾರೆ.
ಎತ್ತಿನಹೊಳೆ 2ನೇ ಹಂತ
ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ 1ನೇ ಹಂತಕ್ಕೆ ಬೈಕೆರೆ ದೊಡ್ಡನಾಗರದಲ್ಲಿ ಇಂದು ಚಾಲನೆ ನೀಡಿ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಯ ಎರಡನೇ ಹಂತ 2027ರ ವೇಳೆಗೆ ಪೂರ್ಣಗೊಳ್ಳಲಿದ್ದು, 7 ಜಿಲ್ಲೆಗಳ ಲಕ್ಷಾಂತರ ಮನೆಗಳಿಗೆ ಕುಡಿಯುವ ನೀರು ತಲುಪುವುದು ಶತಃಸಿದ್ಧ ಎಂದರು.
ಎತ್ತಿನಹೊಳೆ ಯೋಜನೆಗೆ ತಮ್ಮ ಕಾಲದಲ್ಲೇ ಭೂಮಿಪೂಜೆ ನಡೆದಿತ್ತು, ಮೊದಲ ಹಂತದ ಯೋಜನೆಯನ್ನೂ ನಾನೇ ಉದ್ಘಾಟಿಸಿದ್ದೆ, ಎರಡನೇ ಹಂತದ ಯೋಜನೆಯನ್ನೂ ನಾನೇ ಉದ್ಘಾಟಿಸಿ ಯೋಜನೆಯನ್ನು ಪೂರ್ಣ ಮಾಡಿ ಕುಡಿಯುವ ನೀರನ್ನು ಕೊಟ್ಟೇ ಕೊಡುತ್ತೀವಿ, ಕೆರೆಗಳನ್ನು ತುಂಬಿಸುವುದೂ ಗ್ಯಾರಂಟಿ.
ಎತ್ತಿನಹೊಳೆ ಎರಡು ಹಂತದ ಯೋಜನೆಯಾಗಿದ್ದು ಮೊದಲ ಹಂತ ಇಂದು ಉದ್ಘಾಟನೆಯಾಗಿದೆ, ಎರಡನೇ ಹಂತ 2027ರ ವೇಳೆಗೆ ಮುಕ್ತಾಯಗೊಂಡು ಇಡೀ ಯೋಜನೆ ಯಶಸ್ವಿಯಾಗಿ ಜಾರಿಯಾಗಲಿದೆ.
ಲಕ್ಷಾಂತರ ಫಲಾನುಭವಿಗಳು
ಯೋಜನೆಯ ಅನುಕೂಲ ಲಕ್ಷಾಂತರ ಫಲಾನುಭವಿಗಳಿಗೆ ತಲುಪಲಿದೆ, 7 ಜಿಲ್ಲೆಗಳ ಜನತೆಯ ಮನೆಗಳಿಗೆ ಕುಡಿಯುವ ನೀರು ತಲುಪುತ್ತದೆ, ಇದರೊಂದಿಗೆ ಹತ್ತಾರು ಕೆರೆಗಳನ್ನೂ ತುಂಬಿಸಲಾಗುತ್ತದೆ.
ಕುಡಿಯುವ ನೀರಿನ ವಿಚಾರದಲ್ಲಿ ರೈತರಿಗೆ ಅರಣ್ಯಾಧಿಕಾರಿಗಳು ಯಾವುದೇ ತೊಂದರೆ ಕೊಡಬಾರದು.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ೨೯ ತಾಲ್ಲೂಕುಗಳ ಬದುಕನ್ನೇ ಬದಲಾಯಿಸುವ ಈ ಮಹತ್ವಾಕಾಂಕ್ಷೆ ಯೋಜನೆ ಇದಾಗಿದೆ ಎಂದರು.