ಹಾಸನ:ಪಶ್ಚಿಮಘಟ್ಟದಿಂದ ಹಳೇ ಮೈಸೂರಿನ ಬರ ಪೀಡಿತ ಪ್ರದೇಶಗಳಿಗೆ ಕುಡಿಯುವ ನೀರು ಹರಿಸುವ ಎತ್ತಿನಹೊಳೆ ಯೋಜನೆಗೆ ಇಂದು ಚಾಲನೆ ದೊರೆತಿದ್ದರೂ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರಿಗೆ ನೀರು ತಲುಪುವುದು ಸದ್ಯಕ್ಕೆ ಕನಸಿನ ಮಾತು.
ಈ ಭಾಗದ ಏಳು ಜಿಲ್ಲೆಗಳಿಗೆ ಕುಡಿಯುವ ನೀರು ಹರಿಸುವ ಉದ್ದೇಶದಿಂದ ಕಳೆದ 10 ವರ್ಷಗಳ ಹಿಂದೆ ಶಂಕುಸ್ಥಾಪನೆ ನೆರವೇರಿಸಿ, ಇಂದು ಮೊದಲನೇ ಹಂತಕ್ಕೆ ಚಾಲನೆ ದೊರೆತರೂ ಮೂಲ ಉದ್ದೇಶ ಈಡೇರಿಲ್ಲ.
ಮುಂಗಾರಿನಲ್ಲಿ ಮಾತ್ರ ನೀರು
ಪಶ್ಚಿಮಘಟ್ಟದ ಮೇಲ್ಭಾಗದಲ್ಲಿ ಹರಿಯುವ ಎತ್ತಿನಹೊಳೆ, ಕಾಡುಮನೆ ಹೊಳೆ, ವಂಗದಹಳ್ಳ ಹಾಗೂ ಕೇರಿಹೊಳೆ ಹಳ್ಳಗಳಿಗೆ ಅಡ್ಡಲಾಗಿ 8 ವಿಯರ್‌ಗಳನ್ನು ನಿರ್ಮಿಸಿ ಈ ಹಳ್ಳಗಳ ಪ್ರವಾಹದಿಂದ ದೊರೆಯಬಹುದಾದ 24.01 ಟಿಎಂಸಿ ನೀರನ್ನು ಮುಂಗಾರು ಅವಧಿಯಲ್ಲಿ ಪೂರ್ವಭಾವಿಯಾಗಿ ತಿರುಗಿಸಿ, ರಾಜ್ಯದ ಬರಪೀಡಿತ ಏಳು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಹಾಗೂ 527 ಕೆರೆಗಳಿಗೆ ನೀರು ತುಂಬಿಸುವ ಉದ್ದೇಶದ ಯೋಜನೆ ಇದಾಗಿದೆ.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಹಳ್ಳಿಗಳು ಮತ್ತು ಕೆರೆಗಳಿಗೆ ನೀರು ಪೂರೈಸುವುದು ಎತ್ತಿನಹೊಳೆ ಯೋಜನೆಯ ಗುರಿಯಾಗಿದೆ.
ಮೊದಲ ಹಂತದಲ್ಲಿ ನೀರನ್ನು ತಡೆದು ಸದ್ಯಕ್ಕೆ ಚಿತ್ರದುರ್ಗದ ವಾಣಿವಿಲಾಸ ಸಾಗರಕ್ಕೆ ಹರಿಸುವುದಕ್ಕೆ ಚಾಲನೆ ನೀಡಲಾಗಿದೆ.
ಯೋಜನೆಗಳನ್ನೇ ರೂಪಿಸಿಲ್ಲ
ವಾಣಿವಿಲಾಸ ಸಾಗರದಿಂದ ಉಳಿದ ಜಿಲ್ಲೆಗಳಿಗೆ ನೀರು ಹರಿಸಲು ಯೋಜನೆಗಳನ್ನು ರೂಪಿಸಿಲ್ಲ, ಈಗ ಸದ್ಯಕ್ಕೆ ಚಿತ್ರದುರ್ಗ ಮತ್ತು ತುಮಕೂರಿನ ಕೆಲವು ತಾಲ್ಲೂಕುಗಳಿಗೆ ಮಾತ್ರ ಇದರ ಪ್ರಯೋಜನ ದೊರೆಯಲಿದೆ.
ದೊಡ್ಡಬಳ್ಳಾಪುರ ಸಮೀಪ ಅಣೆಕಟ್ಟೆ ನಿರ್ಮಿಸಿ ಎತ್ತಿನಹೊಳೆಯಿಂದ ನೀರನ್ನು ಇಲ್ಲಿಗೆ ಹರಿಸಿ ನಂತರ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರಿನ ಕೆಲವು ಭಾಗಗಳಿಗೆ ನೀರು ಹರಿಸುವ ಯೋಜನೆ ರೂಪಿಸಲಾಗಿತ್ತು.
ಮೂಲ ಉದ್ದೇಶದಂತೆ ಇನ್ನೂ ಅಣೆಕಟ್ಟೆಯೇ ನಿರ್ಮಾಣವಾಗಿಲ್ಲ, ನೀರು ಹರಿಸುವ ಕೊಳವೆಯನ್ನು ತಂದು ಬಿಡಲಾಗಿದೆ ಅಷ್ಟೇ, ಇದೇ ಮಾದರಿಯಲ್ಲಿ ಇನ್ನೂ ಮೂರು-ನಾಲ್ಕು ಅಣೆಕಟ್ಟೆಗಳನ್ನು ನಿರ್ಮಿಸಿ ಅದರ ಮೂಲಕ ಈ ಜಿಲ್ಲೆಗಗಳಿಗೆ ಕುಡಿಯುವ ನೀರು ಪೂರೈಸುವುದು ಮತ್ತು ಕೆರೆಗಳನ್ನು ತುಂಬಿಸಬೇಕಿದೆ.
ಭೂಸ್ವಾಧೀನವೂ ನಡೆದಿಲ್ಲ
ಆದರೆ, ಅಣೆಕಟ್ಟೆ ನಿರ್ಮಾಣಕ್ಕೆ ಕೆಲವೆಡೆ ಇನ್ನೂ ಭೂಸ್ವಾಧೀನ ಕಾರ್ಯವೂ ನಡೆದಿಲ್ಲ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರಿನ ಕೆಲವು ಭಾಗದ ಕುಡಿಯುವ ನೀರಿನ ದಾಹ ನೀಗಿಸುವ ಉದ್ದೇಶದಿಂದ 10 ವರ್ಷಗಳ ಹಿಂದೆ ಯೋಜನೆ ರೂಪಿಸಲಾಗಿತ್ತು.
ಒಂದು ದಶಕದ ಹಿಂದೆಯೇ ಕಾಮಗಾರಿ ಆರಂಭಗೊಂಡರೂ ಪರ್ಯಾಯವಾಗಿ ನೀರು ಸಂಗ್ರಹಿಸುವ ಅಣೆಕಟ್ಟೆಗಳ ನಿರ್ಮಾಣಕ್ಕೆ ಇದುವರೆಗೂ ಚಾಲನೆ ನೀಡಿಲ್ಲ.
ಸದ್ಯಕ್ಕೆ ಏತ ಕಾಮಗಾರಿಗಳು ಮತ್ತು ವಿದ್ಯುತ್ ಪೂರೈಕೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.
ಎತ್ತಿನಹೊಳೆಯಿಂದ 252.61 ಕಿಲೋ ಮೀಟರ್ ಕೊಳವೆಯಲ್ಲಿ ನೀರು ಹರಿಸಿ ಈ ಎಲ್ಲಾ ಜಿಲ್ಲೆಗಳಿಗೆ ತಲುಪಿಸಬೇಕು.
ಫೀಡರ್ ಕಾಮಗಾರಿ ಪ್ರಗತಿಯಲ್ಲಿ
ಆದರೆ ಇದುವರೆಗೂ 164.7 ಕಿಲೋ ಮೀಟರ್ ಕಾಲುವೆ ಕಾಮಗಾರಿ ಪೂರ್ಣಗೊಂಡಿದೆ, ಮಧುಗಿರಿ-ಪಾವಗಡ, ಟಿ.ಜಿ.ಹಳ್ಳಿ-ರಾಮನಗರ, ಗೌರಿಬಿದನೂರು ಫೀಡರ್ ಕಾಮಗಾರಿಗಳು ಪ್ರಗತಿಯಲ್ಲಿವೆ.
ಕೋಲಾರ, ಶ್ರೀನಿವಾಸಪುರ ಫೀಡರ್‌ಗಳ ಕಾಮಗಾರಿಯೇ ಆರಂಭಗೊಂಡಿಲ್ಲ, ಯಾವ ಉದ್ದೇಶದಿಂದ ಯೋಜನೆ ಕೈಗೆತ್ತಿಕೊಂಡರೋ ಆ ಯೋಜನೆ ಪೂರ್ಣಗೊಳ್ಳಲು ಇನ್ನೂ ಇಷ್ಟೇ ಸಮಯ ಮುಂದಕ್ಕೂ ಬೇಕಾಗಬಹುದು.