ಬೆಂಗಳೂರು:ನಗರದ ಜನತೆಯ ಅನುಕೂಲಕ್ಕಾಗಿ ಬೆಂಗಳೂರು ಮಹಾನಗರ ಸಾರಿಗೆ ನಿಗಮಕ್ಕೆ (ಬಿಎಂಟಿಸಿ) 840 ನೂತನ ಬಸ್‌ಗಳನ್ನು ಖರೀದಿಸಿದ್ದು, ಮೊದಲ ಹಂತವಾಗಿ ಇಂದು 100 ಹೊಸ ಬಸ್‌ಗಳನ್ನು ಲೋಕಾರ್ಪಣೆ ಮಾಡುತ್ತಿರುವುದಾಗಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.
ವಿಧಾನಸೌಧದ ಮುಭಾಗ 100 ಹೊಸ ಬಸ್‌ಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಬೆಂಗಳೂರು ನಗರದ ಜನಸಂಖ್ಯೆ ಹೆಚ್ಚುತ್ತಿದ್ದು, ಶ್ರಮಿಕ ವರ್ಗಗಳ ಅನುಕೂಲಕ್ಕಾಗಿ ಹೊಸ ಬಸ್‌ಗಳನ್ನು ಬಿಎಂಟಿಸಿಗೆ ಸೇರ್ಪಡೆಗೊಳಿಸಲಾಗಿದೆ, ನಮ್ಮ ಸರ್ಕಾರ ಬಂದ ಮೇಲೆ ನಾಲ್ಕು ಬಾರಿ ಹೊಸ ಬಸ್‌ಗಳ ಖರೀದಿ ಮಾಡಿದ್ದೇವೆ ಎಂದರು.
ಇಂದಿರಾ ಕ್ಯಾಂಟೀನ್ ಪುನರಾರಂಭ
ಹಿಂದಿನ ಸರ್ಕಾರ ಸ್ಥಗಿತಗೊಳಿಸಿದ್ದ ಇಂದಿರಾ ಕ್ಯಾಂಟೀನ್‌ಗಳನ್ನು ಪುನರಾರಂಭಿಸಿದ್ದು, ಇನ್ನಷ್ಟು ಹೊಸ ಕ್ಯಾಂಟೀನ್‌ಗಳನ್ನು ತೆರೆಯಲಾಗುವುದು.
ಶ್ರಮಿಕ ವರ್ಗದ ಅನುಕೂಲಕ್ಕಾಗಿ ಶಕ್ತಿ ಯೋಜನೆ ಸೇರಿದಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಯಶಸ್ವಿಯಾಗಿ ಮುಂದುವರೆಸುತ್ತಿದ್ದೇವೆ, ನಮ್ಮ ಸರ್ಕಾರ ಇರುವವರೆಗೂ ಗ್ಯಾರಂಟಿ ಯೋಜನೆಗಳು ಮುಂದುವರೆಯಲಿವೆ.
ಬಡವರು ಮತ್ತು ಮಧ್ಯಮ ವರ್ಗದ ವಿರೋಧಿಯಾಗಿರುವ ಬಿಜೆಪಿ, ಗ್ಯಾರಂಟಿ ಯೋಜನೆಗಳ ಕುರಿತು ಅಪಪ್ರಚಾರ ಮಾಡುತ್ತಿದೆ, ಇದಕ್ಕೆ ಕಿವಿಗೊಡಬೇಡಿ, ಗ್ಯಾರಂಟಿಗಳು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಯಾಗಲಿವೆ.
ಗೃಹಲಕ್ಷ್ಮಿ ಹಣದಿಂದ ಅನುಕೂಲ
ಗೃಹಲಕ್ಷ್ಮಿ ಹಣದಿಂದ ಸಾವಿರಾರು ಕುಟುಂಬಗಳು ಹಲವು ಅನುಕೂಲಗಳನ್ನು ಪಡೆದುಕೊಂಡಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ.
ಬಡವರ ಅಕ್ಕಿ ಯೋಜನೆಗೆ ಕೇಂದ್ರ ಸರ್ಕಾರ ಅಕ್ಕಿ ಕೊಡದೆ ತೊಂದರೆ ನೀಡಿತು, ಅಕ್ಕಿ ಬದಲಿಗೆ ಹಣವನ್ನು ಜನರಿಗೆ ನೀಡಿ ನುಡಿದಂತೆ ನಡೆದಿದ್ದೇವೆ.
ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಪ್ರತೀ ಕುಟುಂಬಕ್ಕೆ ಮಾಸಿಕ 4 ರಿಂದ 5 ಸಾವಿರ ರೂ.ವರೆಗೆ ಧನಸಹಾಯ ಆಗುತ್ತಿದೆ, ಇದರಿಂದ ಲಕ್ಷಾಂತರ ಕುಟುಂಬಗಳಿಗೆ ಆರ್ಥಿಕ ಶಕ್ತಿ ನೀಡಿದ್ದೇವೆ ಎಂದರು.