ಬೆಂಗಳೂರು:ಜಾತಿ ನಿಂದನೆ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಮುನಿರತ್ನ ಬಂಧನದ ಭೀತಿಯಲ್ಲಿದ್ದಾರೆ.
ಘನತ್ಯಾಜ್ಯ ವಿಲೇವಾರಿ ಗುತ್ತಿಗೆ ನೀಡಲು 30 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟು ಬೆದರಿಕೆ ಹಾಕಿದ ಹಾಗೂ ಜಾತಿ ನಿಂದನೆ ಆರೋಪದಡಿ ಅವರ ವಿರುದ್ಧ ವೈಯಾಲಿಕಾವಲ್ ಪೋಲಿಸ್ ಠಾಣೆಯಲ್ಲಿ ಎರಡು ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಾಗಿದೆ.
ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಹಾಗೂ ಜಾತಿ ನಿಂದನೆ ಮಾಡಿದ್ದಾರೆಂದು ವೇಲುನಾಯಕ್ ಎಂಬುವವರು ನೀಡಿದ ದೂರು ಆಧರಿಸಿ ಪೋಲಿಸರು ಪ್ರಕರಣಗಳನ್ನು ದಾಖಲಿಸಿದ್ದಾರೆ.
ಮುನಿರತ್ನ ಅಲ್ಲದೆ, ಸರ್ಕಾರಿ ಅಧಿಕಾರಿ ವಿಜಯಕುಮಾರ್, ಕಾರ್ಯದರ್ಶಿ ಅಭಿಷೇಕ್, ಅವರ ಆಪ್ತ ವಸಂತಕುಮಾರ್ ವಿರುದ್ಧವೂ ಪ್ರಕರಣ ದಾಖಲಾಗಿದೆ.
30 ಲಕ್ಷ ರೂ. ಲಂಚಕ್ಕೆ ಬೇಡಿಕೆ
ಘನತ್ಯಾಜ್ಯ ವಿಲೇವಾರಿ ಗುತ್ತಿಗೆಗೆ ಸಂಬಂಧಿಸಿದಂತೆ ಮುನಿರತ್ನ ಮತ್ತು ಅವರ ಆಪ್ತ ವಸಂತ್‌ಕುಮಾರ್, 30 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟು, ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಗುತ್ತಿಗೆದಾರ ಚೆಲುವರಾಜು ದೂರು ನೀಡಿದ್ದಾರೆ.
ವೈಯಾಲಿಕಾವಲ್ ಠಾಣೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಶಾಸಕರು ಮತ್ತು ಅವರ ಆಪ್ತರು ಕರೆ ಮಾಡಿ ಹಣ ಕೊಡದಿದ್ದರೆ ನಿನ್ನನ್ನು ರೇಣುಕಸ್ವಾಮಿ ರೀತಿಯಲ್ಲಿ ಕೊಲೆ ಮಾಡುತ್ತೇವೆಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.
ಈ ದೂರು ಆಧರಿಸಿ ಪೊಲೀಸರು ಮುನಿರತ್ನ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಜಾತಿ ನಿಂದನೆಗೆ ಎಫ್‌ಐಆರ್
ಜಾತಿ ನಿಂದನೆ ಆರೋಪದಡಿ ಇದೇ ಠಾಣೆಯಲ್ಲಿ ಶಾಸಕರ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.
ಗುತ್ತಿಗೆದಾರ ಚೆಲುವರಾಜು, ನಿನ್ನೆ ಸುದ್ದಿಗೋಷ್ಠಿ ನಡೆಸಿ, ಶಾಸಕ ಮುನಿರತ್ನ ವಿರುದ್ಧ ಗಂಭೀರ ಆರೋಪ ಮಾಡಿದ್ದರು, ಶಾಸಕರು ತನ್ನಿಂದ ಹಣ ವಸೂಲಿ ಮಾಡಲು ಜಾತಿ ನಿಂದನೆ ಮಾಡಿ, ಹೆಂಡತಿ ಮತ್ತು ತಾಯಿ ಬಗ್ಗೆ ಅತ್ಯಂತ ಅಶ್ಲೀಲ ಭಾಷೆಯಲ್ಲಿ ನಿಂದಿಸಿ ತಮಗೆ ಜೀವ ಬೆದರಿಕೆಯೊಡ್ಡಿದ್ದಾರೆ.
ಮುಂದೆ ನಾನು ಜೀವಂತವಾಗಿ ಇರುತ್ತೇನೋ ಇಲ್ಲವೋ ಗೊತ್ತಿಲ್ಲ, ನನ್ನ ಜಾತಿ ಬಳಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ, ನನ್ನ ಹೆಂಡತಿ ಫೋಟೋ ತೋರಿಸು ಹೇಗಿದ್ದಾಳೆ ಎನ್ನುತ್ತಾರೆ, ಮುನಿರತ್ನ ನನ್ನ ಹೆಂಡತಿಯನ್ನು ಮಂಚಕ್ಕೆ ಕಳುಹಿಸು ಎಂದಿದ್ದಾರೆ, ನನ್ನ ತಾಯಿಯ ಬಗ್ಗೆ ಅಸಹ್ಯವಾಗಿ ಮಾತಾಡಿದ್ದಾರೆ ಎಂದು ಆರೋಪಿಸಿ, ಮುನಿರತ್ನ ಮಾತನಾಡಿರುವುದು ಎನ್ನಲಾದ ಆಡಿಯೋಗಳನ್ನು ಬಿಡುಗಡೆ ಮಾಡಿದ್ದರು.
ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ
ಈ ಮಧ್ಯೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಡಿ.ಕೆ.ಸುರೇಶ್ ತುರ್ತು ಸುದ್ದಿಗೋಷ್ಠಿ ನಡೆಸಿ, ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಕಿರುವ ಆರೋಪ ಎದುರಿಸುತ್ತಿರುವ ಮುನಿರತ್ನ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮುನಿರತ್ನ ಎರಡು ಜಾತಿಗಳ ಮಧ್ಯೆ ಸಂಘರ್ಷ ತರುವ ಕೆಲಸ ಮಾಡಿದ್ದಾರೆ, ಹಿಂದೆಯೂ ಅವರು ಒಕ್ಕಲಿಗ ಸಮುದಾಯವನ್ನು ಬಹಳ ಕೀಳಾಗಿ ನೋಡಿದ್ದರು, ಬಿಜೆಪಿ ನಾಯಕರು ಇದನ್ನು ಯಾವ ರೀತಿ ಅರಗಿಸಿಕೊಳ್ಳುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಮುನಿರತ್ನ ವಿರುದ್ಧದ ಆರೋಪಗಳಿಗೆ ಬಿಜೆಪಿಯ ಒಬ್ಬರೇ ಒಬ್ಬ ನಾಯಕರೂ ಪ್ರತಿಕ್ರಿಯೆ ನೀಡಿಲ್ಲ, ನೈತಿಕತೆ ಇದ್ದರೆ ಇಷ್ಟೊತ್ತಿಗೆ ಪಕ್ಷದಿಂದ ವಜಾ ಮಾಡಬೇಕಿತ್ತು ಎಂದರು.
ಬಿಜೆಪಿ ನಾಯಕರು ಈ ರೀತಿ ಮಾಡುವುದು ಎಷ್ಟು ಸರಿ, ಎರಡು ಜಾತಿಗಳನ್ನು ಎತ್ತಿಕಟ್ಟುವ ಕೆಲಸ ಆಗಿದೆ, ಇನ್ನೊಂದು ಕಡೆ ಲಂಚದ ಆರೋಪ, ದುಡ್ಡು ತಂದುಕೊಟ್ಟರೆ ಬದುಕುತ್ತೀಯಾ ಎಂದು ಮುನಿರತ್ನ ನೇರವಾಗಿ ಕೊಲೆ ಬೆದರಿಕೆ ಹಾಕಿದ್ದಾರೆ, ಈ ಥರ ನಡೆದುಕೊಂಡಿರುವುದು ಒಬ್ಬ ಸಾಮಾನ್ಯ ವ್ಯಕ್ತಿಯಲ್ಲ, ಬಿಜೆಪಿ ನಾಯಕ, ಸಿನಿಮಾ ನಿರ್ಮಾಪಕ ಎಂದರು.
ಆರೆಸ್ಸೆಸ್ ಜೊತೆ ಒಡನಾಟ
ಸಾರ್ವಜನಿಕ ಜವಾಬ್ದಾರಿ ಸ್ಥಾನದಲ್ಲಿ ಇರುವ ಮಾಜಿ ಸಚಿವ, ಆರ್.ಆರ್.ನಗರ ಕ್ಷೇತ್ರದ ಶಾಸಕರಾಗಿರುವ ಮುನಿರತ್ನ ಬಹಳ ಕೀಳು ದರ್ಜೆಯ ಪದಗಳನ್ನು ಬಳಸಿದ್ದಾರೆ, ಕೀಳರಿಮೆ ಮನಸ್ಥಿತಿ ಇರುವವರೂ ಕೂಡ ಇಂಥ ಪದ ಬಳಸುವುದಿಲ್ಲ, ಒಂದು ಕಡೆ ರಾಮನ ಜಪ, ಒಂದು ಕಡೆ ಸಂಸ್ಕೃತಿ ಜಪ, ಇನ್ನೊಂದು ಕಡೆ ತಾಯಂದಿರನ್ನು ಮಂಚಕ್ಕೆ ಕರೆಯುವ ಮಾಜಿ ಮಂತ್ರಿ, ಸಾಲದೆಂಬಂತೆ ಆರೆಸ್ಸೆಸ್ ಜೊತೆಗೆ ಒಡನಾಟ ಇಟ್ಟುಕೊಂಡವರು ಎಂದು ವ್ಯಂಗ್ಯವಾಡಿದ್ದಾರೆ.
ದಲಿತ ಸಮುದಾಯದ ಮೇಲೆ 80ರ ದಶಕದ ನಂತರ ಯಾರೂ ಇಂಥ ಪದ ಬಳಸುತ್ತಿರಲಿಲ್ಲ, ದಲಿತ ಸಮುದಾಯದ ಮೇಲೆ ಇಂಥ ಪದ ಬಳಕೆ ಮಾಡುವುದು ಎಷ್ಟು ಸರಿ, ಇದಕ್ಕೆ ಬಿಜೆಪಿ ನಾಯಕರು, ಎನ್‌ಡಿಎ ನಾಯಕರು ಸ್ಪಷ್ಟವಾಗಿ ಹೇಳಬೇಕು, ನೈತಿಕತೆ, ಬದ್ಧತೆ ಪ್ರದರ್ಶನ ಮಾಡಬೇಕು ಎಂದು ಆಗ್ರಹಿಸಿದರು.
ಬಿಜೆಪಿಯ ಒಕ್ಕಲಿಗ ನಾಯಕರು ಇದಕ್ಕೆ ಉತ್ತರ ಕೊಡಬೇಕು, ಒಕ್ಕಲಿಗ ಹೆಣ್ಣು ಮಕ್ಕಳನ್ನು ಮಂಚಕ್ಕೆ ಕರೆಯುವುದು ಎಷ್ಟು ಸರಿ ಎಂಬುದನ್ನು ಆರ್. ಅಶೋಕ್ ಹೇಳಬೇಕು, ಒಕ್ಕಲಿಗ ಕೇಂದ್ರ ಸಚಿವರು ಪಕ್ಷದ ವರಿಷ್ಠರಾದ ಜೆ.ಪಿ.ನಡ್ಡಾ, ನರೇಂದ್ರ ಮೋದಿ ಅವರಿಗೆ ಈ ಬಗ್ಗೆ ವರದಿ ಕೊಡಲಿ.
ಪರಿಶಿಷ್ಟ ಸಮುದಾಯಕ್ಕೆ ಸೇರಿದ ಗುತ್ತಿಗೆದಾರನಿಗೆ ಜೀವ ಬೆದರಿಕೆ, ಜಾತಿ ನಿಂದನೆ ಮಾಡಿದ ಮುನಿರತ್ನ ವಿರುದ್ಧ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.