ಬೆಂಗಳೂರು:ಗಣೇಶೋತ್ಸವ ಸಂದರ್ಭದಲ್ಲಿ ಕರ್ನಾಟಕದಲ್ಲಿ ನಡೆದ ಗಲಭೆಗಳ ಬಗ್ಗೆ ಕಾಂಗ್ರೆಸ್ ವರಿಷ್ಠರು ಗರಂ ಆಗಿದ್ದಾರೆ.
ನಾಗಮಂಗಲ ಸೇರಿದಂತೆ ರಾಜ್ಯದ ಕೆಲವು ಭಾಗಗಳಲ್ಲಿ ಗಣೇಶೋತ್ಸವ ಆಚರಣೆ ವೇಳೆ ಕೋಮು ಗಲಭೆಗೆ ಎಡೆ ಮಾಡಿ ಇಡೀ ರಾಷ್ಟ್ರವೇ ಕರ್ನಾಟಕದತ್ತ ನೋಡಿದ್ದು ಎಐಸಿಸಿಯನ್ನು ಮುಜುಗರಕ್ಕೆ ಸಿಲುಕಿಸಿದೆ.
ಕಾಂಗ್ರೆಸ್ ಹಿಂದೂ ವಿರೋಧಿ ಭಾವನೆ
ಅದರಲ್ಲೂ ಗಣೇಶ ಪ್ರತಿಮೆಯನ್ನು ಪೋಲಿಸ್ ಅಧಿಕಾರಿಯೊಬ್ಬರು ತಬ್ಬಿಕೊಂಡು ಪೋಲಿಸ್ ವಾಹನದಲ್ಲಿ ಇಡುತ್ತಿರುವ ದೃಶ್ಯ, ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಎಂಬ ಭಾವನೆ ಬಿಂಬಿಸಿ, ಇದನ್ನೇ ಉತ್ತರ ಭಾರತದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಬಳಸುತ್ತಿರುವುದು ಎಐಸಿಸಿಗೆ ಸಹಿಸಲಾಗುತ್ತಿಲ್ಲ.
ಈ ಘಟನೆ ನಂತರ ಕರ್ನಾಟಕದಲ್ಲಿನ ಕಾನೂನು ಸುವ್ಯವಸ್ಥೆ ಬಗ್ಗೆ ಪೂರ್ಣ ಮಾಹಿತಿ ನೀಡಿ ಎಂದು ಕೆಪಿಸಿಸಿ ಅಧ್ಯಕ್ಷರಿಗೆ ಎಐಸಿಸಿ, ಪತ್ರ ಬರೆದು ವಿವರಣೆ ಕೇಳಿದೆ.
ಅಷ್ಟೇ ಅಲ್ಲದೆ, ರಾಜ್ಯದಲ್ಲಿ ಅಪರಾಧ ಕೃತ್ಯಗಳ ಪ್ರಮಾಣ ಹೆಚ್ಚುತ್ತಿರಲು ಕಾರಣವೇನು, ರಾಷ್ಟ್ರೀಯ ಅಂಕಿ-ಅಂಶಗಳ ಪ್ರಕಾರ ಕಳೆದ ವರ್ಷ 6000ದಷ್ಟು ಇದ್ದದ್ದು, ಈ ವರ್ಷ 9000ಕ್ಕೆ ಏರಿಕೆ ಆಗಿದೆ.
ಅಪರಾಧ ಪ್ರಕರಣಗಳ ಹೆಚ್ಚಳ
ಅಪರಾಧ ಪ್ರಕರಣಗಳು ಹೆಚ್ಚಾಗಲು ಕಾರಣಗಳೇನು, ಗೃಹ ಇಲಾಖೆ ಮೇಲೆ ಹಿಡಿತ ಸಾಧಿಸಲು ಆಗುತ್ತಿಲ್ಲವೆ ಎಂದು ಕೆಪಿಸಿಸಿಯನ್ನು ಎಐಸಿಸಿ ಖಾರವಾಗಿ ಪ್ರಶ್ನಿಸಿದೆ.
ಗಣೇಶೋತ್ಸವ ಸಂದರ್ಭದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಏಕೆ ಕೈಗೊಳ್ಳುತ್ತಿಲ್ಲ, ಕರ್ನಾಟಕದಲ್ಲಿ ಗಣೇಶನನ್ನೇ ಬಂಧಿಸಿದ್ದಾರೆ ಎಂದು ಟ್ವೀಟ್ ಮಾಡಿ ನಮ್ಮ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಅಷ್ಟೇ ಅಲ್ಲದೆ, ಹರಿಯಾಣ ವಿಧಾನಸಭಾ ಚುನಾವಣಾ ವೇಳೆಯಲ್ಲೂ ಗಣೇಶ ಮೂರ್ತಿಯನ್ನೇ ಬಂಧಿಸಿದ್ದನ್ನು ಪ್ರಧಾನಿ ಅವರು ಪ್ರಚಾರದ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ.
ಪ್ರಧಾನಿ ಮೋದಿ ಭಾಷಣ
ಕಾಂಗ್ರೆಸ್ ಹಿಂದೂಗಳ ವಿರೋಧಿ ಎಂದು ಬಿಂಬಿಸುವ ಕೆಲಸ ನಡೆದಿದೆ, ಕರ್ನಾಟಕ ಸರ್ಕಾರ ಗಣೇಶ್ ಮೂರ್ತಿಯನ್ನೇ ಬಂಧಿಸುವ ಸ್ಥಿತಿಗೆ ತಲುಪಿದೆ, ಇವರಿಗೆ ನೀವು ಅಧಿಕಾರ ನೀಡಿದರೆ, ಇಲ್ಲಿಯೂ ಅದೇ ಪರಿಸ್ಥಿತಿ ಬರುತ್ತದೆ ಎಂದು ಮೋದಿ ಅವರು ಭಾಷಣ ಮಾಡುತ್ತಿರುವುದು ಕಾಂಗ್ರೆಸ್‌ಗೆ ಹಿನ್ನಡೆ ಉಂಟು ಮಾಡಿದೆ.
ಕರ್ನಾಟಕದಲ್ಲಿನ ಹದಗೆಟ್ಟ ಕಾನೂನು ಸುವ್ಯವಸ್ಥೆಯನ್ನೇ ಮೋದಿ ಅಸ್ತ್ರವನ್ನಾಗಿ ಇಟ್ಟುಕೊಂಡು ಟೀಕೆ ಮಾಡುತ್ತಿದ್ದಾರೆ, ಇದು ನಿಮ್ಮ ಅರಿವಿಗೆ ಬಂದಿಲ್ಲವೇ ಎಂದು ಪತ್ರದಲ್ಲಿ ಎಐಸಿಸಿ ಪ್ರಶ್ನಿಸಿದೆ.
ನಾಗಮಂಗಲ ಘಟನೆ ಹಾಗೂ ಗಣೇಶ ಮೂರ್ತಿ ಬಂಧನದ ಸುದ್ದಿ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಅವರನ್ನೂ ಕೆರಳಿಸಿದೆಯಂತೆ, ಅವರ ಸಲಹೆ ಮೇರೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಕೆಪಿಸಿಸಿಯಿಂದ ವಿವರಣೆ ಬಯಸಿದ್ದಾರೆ.
ಎಲ್ಲದಕ್ಕೂ ವಿವರಣೆ ನೀಡಿ
ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದರಿಂದ ಸರ್ಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಅಭಿವೃದ್ಧಿ ಕುಂಠಿತಗೊಂಡಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ, ಎಲ್ಲದಕ್ಕೂ ವಿವರಣೆ ನೀಡಿ ಎಂದಿದೆ.
ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿದೇಶ ಪ್ರವಾಸದಿಂದ ಹಿಂತಿರುಗುತ್ತಿದ್ದಂತೆ ಎಐಸಿಸಿ ಪತ್ರ ಅವರ ಕೈಸೇರಿದೆ.
ಕಲಬುರಗಿಯ ಸಂಪುಟ ಸಭೆ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರೊಂದಿಗೆ ಸಮಾಲೋಚಿಸಿ ಎಐಸಿಸಿಗೆ ಕೆಪಿಸಿಸಿ ಉತ್ತರ ಬರೆಯಲಿದೆ ಎಂದು ಮೂಲಗಳು ತಿಳಿಸಿವೆ.