ಬೆಂಗಳೂರು:ಅಮೆರಿಕಾದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭೇಟಿಗೆ ಯಾರ ಅನುಮತಿ ಕೇಳಬೇಕಾದ ಅಗತ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ನಮ್ಮ ನಾಯಕರು, ಅವರ ಬಳಿ ಏನು ಮಾತನಾಡಿದೆ ಎನ್ನುವುದನ್ನು ಮಾಧ್ಯಮದವರಿಗೆ ಹೇಳಲಾಗುತ್ತದೆಯೇ, ನನ್ನ ತಮ್ಮ, ಹೆಂಡತಿ ಮತ್ತು ಸ್ವಾಮೀಜಿ ಅವರ ಬಳಿ ಏನು ಮಾತನಾಡುತ್ತೇನೆ ಎಂಬುದನ್ನು ನಿಮ್ಮ (ಮಾಧ್ಯಮ) ಬಳಿ ಹೇಳಲು ಆಗುತ್ತದೆಯೇ ಎಂದರು.
ಕಾನೂನು ಪ್ರಕಾರ ಕ್ರಮ
ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಗಲಾಟೆ ಪ್ರಕರಣದ ಬಗ್ಗೆ ಸರ್ಕಾರ, ಪೊಲೀಸ್ ಇಲಾಖೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತದೆ.
ಒಕ್ಕಲಿಗ ಸಮುದಾಯದ ಕುರಿತು ಶಾಸಕ ಮುನಿರತ್ನ ಆಡಿರುವ ಮಾತಿನ ಬಗ್ಗೆ ಸಮುದಾಯದ ಮುಖ್ಯಸ್ಥರು, ಸ್ವಾಮೀಜಿಗಳು, ಹಿರಿಯರು, ನಾಗರಿಕರು, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹಾಗೂ ಬಿಜೆಪಿ ನಾಯಕರು ಪ್ರತಿಕ್ರಿಯಿಸಬೇಕು.
ಶಾಸಕ ಮುನಿರತ್ನ ದಲಿತರು ಮತ್ತು ಒಕ್ಕಲಿಗ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ, ಅವರು ಮಾತನಾಡಿರುವುದು ಸರಿಯೋ, ತಪ್ಪೋ, ಒಳ್ಳೆಯದೋ, ಕೆಟ್ಟದ್ದೋ ಸಮಾಜದ ದೊಡ್ಡವರು ಹಾಗೂ ಬಿಜೆಪಿ ನಾಯಕರು ತಿಳಿಸಬೇಕು ಎಂದರು.
ಪೊಲೀಸರ ಬಂಧನಕ್ಕೆ ಮುಂಚಿತವಾಗಿ ಅಣ್ಣ-ತಮ್ಮ ಆಟ ಶುರುವಾಗಿದೆ ಎಂಬ ಮುನಿರತ್ನ ಹೇಳಿಕೆ ಬಗ್ಗೆ ನನಗೆ ವಿಚಾರ ಗೊತ್ತೇ ಇಲ್ಲ, ತಿಳಿದು ಮಾತನಾಡುತ್ತೇನೆ, ಸರಿಯಾಗಿ ಮಾಹಿತಿ ಗೊತ್ತಿಲ್ಲ, ಸಂವಿಧಾನಿಕ ಹುದ್ದೆ ಹೊಂದಿರುವ ಆರ್.ಅಶೋಕ್, ವಿಜಯೇಂದ್ರ, ಕೇಂದ್ರ ಸಚಿವರು ಈ ಬಗ್ಗೆ ಪ್ರತಿಕ್ರಿಯೆ ನೀಡಬೇಕು ಎಂದರು.