ಬೆಂಗಳೂರು:ಮಾದಕ ವಸ್ತು ಮಾರಾಟ ಹಾಗೂ ಕಳ್ಳ ದಂಧೆ ನಡೆಸುವ ಪೆಡ್ಲರ್ಗಳಿಗೆ ಜೀವಾವಧಿ ಶಿಕ್ಷೆ ವಿಧಿಸುವ ಕಠಿಣ ಕಾನೂನು ತರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಘೋಷಿಸಿದ್ದಾರೆ.
ಈ ಸಂಬಂಧ ಅಗತ್ಯ ಬಿದ್ದರೆ ಹೊಸ ಕಾನೂನು ಇಲ್ಲವೇ, ಇರುವ ಕಾನೂನನ್ನು ಮತ್ತಷ್ಟು ಗಟ್ಟಿ ಮಾಡಿ ರಾಜ್ಯದಲ್ಲಿ ಡ್ರಗ್ಸ್ ಜಾಲದ ಬೇರುಗಳನ್ನು ಕತ್ತರಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಪೋಲಿಸರ ನೆರಳಿನಲ್ಲೇ ದಂಧೆ
ಮಾದಕ ವಸ್ತುಗಳ ಹಾವಳಿ ಹಾಗೂ ನಿಯಂತ್ರಣ ಕುರಿತು ಗೃಹ ಕಚೇರಿ ಕೃಷ್ಣಾದಲ್ಲಿ ಉನ್ನತ ಮಟ್ಟದ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪೋಲಿಸರ ನೆರಳಿನಲ್ಲೇ ಈ ದಂಧೆ ನಡೆಯುತ್ತಿವೆ.
ಇದಕ್ಕೆ ಕಡಿವಾಣ ಹಾಕಲು ಪೋಲಿಸರನ್ನೇ ಜವಾಬ್ದಾರರನ್ನಾಗಿ ಮಾಡುವುದು, ದಂಧೆ ನಡೆದ ಠಾಣಾ ವ್ಯಾಪ್ತಿಯ ಠಾಣಾಧಿಕಾರಿ, ಡಿವೈಎಸ್ಪಿ, ಎಸಿಪಿ ಮತ್ತು ಎಸ್ಪಿಗಳನ್ನು ಹೊಣೆ ಮಾಡಲು ತೀರ್ಮಾನಿಸಿದ್ದೇವೆ.
ಇದು ಕೇವಲ ತೀರ್ಮಾನವಲ್ಲ, ಈ ದಂಧೆ ಠಾಣಾ ವ್ಯಾಪ್ತಿಯಲ್ಲಿ ನಿಲ್ಲದಿದ್ದರೆ ಇವರ ವಿರುದ್ಧವೇ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದರು.
ಮಾದಕ ವ್ಯಸನಿ ಯುವಜನಾಂಗ
ಶಾಲಾ-ಕಾಲೇಜು ಮಕ್ಕಳು ಮತ್ತು ಯುವಜನಾಂಗ ಮಾದಕ ವ್ಯಸನಿಗಳಾಗಿ ತಾವು ಹಾಳಾಗುತ್ತಿರುವುದಲ್ಲದೆ, ತಮ್ಮ ಕುಟುಂಬವನ್ನೂ ಬಲಿ ಕೊಡುತ್ತಿದ್ದಾರೆ.
ಡ್ರಗ್ಸ್ ದಂಧೆ ಕೊಲೆ, ಸುಲಿಗೆಗಳು ಮತ್ತು ಕಳ್ಳತನ ಕೃತ್ಯಗಳಿಗೆ ದಾರಿ ಮಾಡಿಕೊಡುತ್ತಿದೆ, ಇದಕ್ಕಾಗಿ ಪೋಲಿಸರಿಗೆ ಮುಕ್ತ ಸ್ವಾತಂತ್ರ್ಯ ನೀಡಿ ಅವರನ್ನೇ ಹೊಣೆಗಾರರನ್ನಾಗಿ ಮಾಡುತ್ತೇವೆ.
ಡ್ರಗ್ಸ್ ಜಾಲ ಮುಗಿಸಲು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚಿಸಲಾಗಿದೆ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಶಿಕ್ಷಣ ಸಚಿವ ಡಾ.ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಸದಸ್ಯರಾಗಿರುತ್ತಾರೆ.
ಅಗತ್ಯ ಕಾರ್ಯತಂತ್ರ
ಇವರು ಮೇಲಿಂದ ಮೇಲೆ ಸಭೆ ನಡೆಸಿ ಅಗತ್ಯ ಕಾರ್ಯತಂತ್ರ ರೂಪಿಸಲು ಸೂಚನೆ ನೀಡಲಾಗಿದೆ ಎಂದರು.
ದಂಧೆಯ ಮಾಹಿತಿ ತಿಳಿಯಲು ಎನ್ಸಿಸಿ ಹಾಗೂ ಎನ್ಜಿಒಗಳನ್ನು ಬಲಗೊಳಿಸಿ ಅವರು, ಈ ದಂಧೆ ಬಗ್ಗೆ ಗಮನಹರಿಸಿ ಸಂಬಂಧಪಟ್ಟ ಠಾಣೆ ಮತ್ತು ಸರ್ಕಾರಕ್ಕೆ ಮಾಹಿತಿ ನೀಡುವಂತೆ ಮಾಡುತ್ತೇವೆ.
ವಿದ್ಯಾರ್ಥಿಗಳು, ಯುವಜನರು ಮತ್ತು ಪೋಷಕರ ಸಹಭಾಗಿತ್ವದಲ್ಲಿ ಮಾಹಿತಿ ಸಂಗ್ರಹಿಸುವ ತೀರ್ಮಾನವನ್ನೂ ಕೈಗೊಳ್ಳಲಾಗಿದೆ.
ಪೆಡ್ಲರ್ಗಳ ಜೊತೆ ಪೋಲಿಸರು
ಇದರಿಂದ ಡ್ರಗ್ ಪೆಡ್ಲರ್ಗಳ ಜೊತೆ ಶಾಮೀಲಾಗುವ ಪೋಲಿಸರ ವಿರುದ್ಧ ಮೇಲಧಿಕಾರಿಗಳು ಹಾಗೂ ಸರ್ಕಾರಕ್ಕೆ ವರದಿ ನೀಡುವ ಅಧಿಕಾರ ನೀಡಲಾಗುವುದು.
ದಂಧೆಗೆ ಪ್ರೋತ್ಸಾಹ ನೀಡುವುದನ್ನು ನಿಲ್ಲಿಸಿ ಪೆಡ್ಲರ್ಗಳನ್ನು ಹತ್ತಿಕ್ಕುವ ಕೆಲಸ ಮಾಡಬೇಕು, ತಪ್ಪಿದರೆ, ಸರ್ಕಾರಕ್ಕೆ ಬರುವ ಮಾಹಿತಿ ಆಧರಿಸಿ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.
ಜಾಗೃತಿ ಮತ್ತು ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಲು ಸೂಚಿಸಲಾಗಿದೆ, ಒಡಿಸ್ಸಾ, ಆಂಧ್ರ ಪ್ರದೇಶ, ಉತ್ತರ ಪ್ರದೇಶ ಸೇರಿ ಹಲವು ರಾಜ್ಯಗಳಿಂದ ಮಾದಕ ವಸ್ತು ಕರ್ನಾಟಕಕ್ಕೆ ಪೂರೈಕೆಯಾಗುತ್ತಿವೆ.
ಇದನ್ನು ತಡೆಯಲು ಹೊಸ ಕಾರ್ಯತಂತ್ರ ರೂಪಿಸುವಂತೆ ಪೋಲಿಸ್ ಅಧಿಕಾರಿಗಳಿಗೆ ಆದೇಶಿಸಲಾಗಿದೆ ಎಂದರು.