ಬೆಂಗಳೂರು:ಕರ್ನಾಟಕದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ, ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಮೇಲೆ ಹಿಟ್ಲರ್ ಆಗಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಇಂದಿಲ್ಲಿ ಟೀಕಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸಂಸದರು ಮತ್ತು ಶಾಸಕರ ಮೇಲೆ ನಿರಂತರವಾಗಿ ಎಫ್‌ಐಆರ್‌ಗಳು ದಾಖಲಾಗುತ್ತಿವೆ, ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ವಿರೋಧ ಪಕ್ಷದ ನಾಯಕರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ, ಕೇಂದ್ರ ಸಚಿವರ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ ಎಂದರು.
ಸಂಸದ ತೇಜಸ್ವಿ ಸೂರ್ಯ ಮೇಲೆ ಎಫ್‌ಐಆರ್ ದಾಖಲು ಮಾಡಿದ್ದಾರೆ, ಶಾಸಕರಾದ ಹರೀಶ್ ಪೂಂಜಾ, ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್, ಭರತ್ ಶೆಟ್ಟಿ ಸೇರಿದಂತೆ ಬಿಜೆಪಿ ನಾಯಕರು, ಕಾರ್ಯಕರ್ತರನ್ನು ಹತ್ತಿಕ್ಕುವ, ಧ್ವನಿ ಅಡಗಿಸುವುದನ್ನು ರಾಜ್ಯ ಕಾಂಗ್ರೆಸ್ ಸರ್ಕಾರದ ಮಾಡುತ್ತಿದೆ.
ದೂರನ್ನು ತೆಗೆದುಕೊಂಡಿಲ್ಲ
ಬಾಂಗ್ಲಾ ಮಾದರಿಯಲ್ಲಿ ರಾಜ್ಯಪಾಲರನ್ನು ಓಡಿಸುತ್ತೇವೆ ಎಂಬುದಾಗಿ ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿಕೆ ಕೊಟ್ಟಿದ್ದರು, ನಮ್ಮ ಮಂಗಳೂರಿನ ಜನರು, ಕಾರ್ಯಕರ್ತರು ದಿನವೂ ಪೊಲೀಸ್ ಸ್ಟೇಶನ್‌ಗೆ ಹೋಗುವಂತಾಗಿದೆ, ದೂರುಗಳನ್ನೂ ನೀಡುತ್ತಿದ್ದಾರೆ, ಆದರೆ, ಈವರೆಗೂ ದೂರನ್ನು ತೆಗೆದುಕೊಂಡಿಲ್ಲ, ಘಟನೆಗಳಿಗೆ ಕಾರಣರಾದವರ ಮೇಲೆ ಏಕೆ ಎಫ್‌ಐಆರ್ ದಾಖಲಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಕರ್ನಾಟಕವನ್ನು ಏನು ಮಾಡಲು ಹೊರಟಿದ್ದೀರಿ, ಘಟನೆ, ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಕರ್ನಾಟಕದ ನಾಗಮಂಗಲದಲ್ಲಿ ಗಣೇಶ ಚತುರ್ಥಿ ಆಚರಣೆ ಸಂದರ್ಭದಲ್ಲಿ ಗಣೇಶ ಮೂರ್ತಿಯನ್ನೇ ಪೊಲೀಸ್ ವ್ಯಾನಿನಲ್ಲಿ ತೆಗೆದುಕೊಂಡು ಹೋಗಿ ವಿಸರ್ಜನೆ ಮಾಡುವ ಪರಿಸ್ಥಿತಿ ನಿರ್ಮಾಣವಾಯಿತು.
ನಾಗಮಂಗಲ ಉತ್ಸವದಲ್ಲಿ ಗಣಪತಿ ಮೂರ್ತಿಗೆ ದುಷ್ಕರ್ಮಿಗಳು ಚಪ್ಪಲಿ, ಕಲ್ಲುಗಳನ್ನು ಎಸೆಯಲು ಅವಕಾಶ ಕೊಟ್ಟಿದ್ದೀರಿ, ಮೂರ್ತಿ ಭಗ್ನ ಆಯಿತು, ಮೂರ್ತಿಯನ್ನು ಅಲ್ಲೇ ಬಿಟ್ಟು ಓಡಿದರು, 25 ಅಂಗಡಿಗಳನ್ನು ಸುಟ್ಟುವರು ಯಾರು, ನಾಗಮಂಗಲದ ಜನರಿಗೆ ಆ ಧೈರ್ಯ ಹೇಗೆ ಬಂತು ಎಂದರು.
ಕೇರಳದಿಂದ ಬಂದ ದುಷ್ಕರ್ಮಿಗಳು
ಲಭ್ಯ ವರದಿ ಪ್ರಕಾರ ದುಷ್ಕರ್ಮಿಗಳು ಕೇರಳದಿಂದ ಬಂದಿದ್ದಾರೆ ಎನ್ನಲಾಗುತ್ತಿದೆ, ಅವರು ಯಾರು, ಹೇಗೆ ಮತ್ತು ಯಾಕೆ ಬಂದರು, ನಾಗಮಂಗಲದ ಕೇಸನ್ನೂ ಸರ್ಕಾರ ಮುಚ್ಚಿ ಹಾಕಿದೆ, ಪೊಲೀಸರು ಇದೊಂದು ಘಟನೆಯೇ ಅಲ್ಲ ಎಂಬಂತೆ ಆ ಕೇಸ್ ಕ್ಲೋಸ್ ಮಾಡಿದ್ದಾರೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇದೊಂದು ಚಿಕ್ಕ ಘಟನೆ ಎನ್ನುತ್ತಾರೆ, ಯಾವುದು ಚಿಕ್ಕ ಘಟನೆ ಪರಮೇಶ್ವರ್ ಅವರೇ, 25 ಅಂಗಡಿ ಸುಟ್ಟಿದ್ದು ಚಿಕ್ಕ ಘಟನೆಯೇ, ಪಕ್ಕದ ರಾಜ್ಯದಿಂದ ಬಂದು ಗಲಭೆ ಮಾಡಿದ್ದು ಚಿಕ್ಕ ಘಟನೆಯೇ ಎಂದು ಪ್ರಶ್ನಿಸಿದರು.
ಬೆಳಗಾವಿಯಲ್ಲಿ ಗಣಪತಿ ಮೂರ್ತಿ ವಿಸರ್ಜನೆ ವೇಳೆ 3 ಜನ ಹಿಂದೂ ಯುವಕರಿಗೆ ಚಾಕುವಿನಿಂದ ಇರಿದಿದ್ದಾರೆ, ಕೋಲಾರದಲ್ಲಿ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಪ್ಯಾಲೆಸ್ಟೀನ್ ಧ್ವಜ ನೋಡುವಂತಾಗಿದೆ, ಕೋಲಾರದ ಮೆರವಣಿಗೆಯಲ್ಲಿ ಪ್ಯಾಲೆಸ್ಟೀನ್ ಧ್ವಜದ ಪ್ರದರ್ಶನ ಆಗಿದೆ, ನಿನ್ನೆ ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿ ರಾಷ್ಟ್ರಧ್ವಜ ವಿರೂಪಗೊಳಿಸಿ ರಾಷ್ಟ್ರಧ್ವಜದ ಅಶೋಕ ಚಕ್ರದ ಜಾಗದಲ್ಲಿ ಉರ್ದುವಿನಲ್ಲಿ ಬರೆದಿದ್ದಾರೆ, ಇಂಥ ಧ್ವಜವನ್ನು ಬೆಂಗಳೂರಿನಲ್ಲಿ ಹಾರಿಸುತ್ತಿದ್ದಾರೆ, ಇದು ಕರ್ನಾಟಕದ ರಾಜಧಾನಿಯ ಸ್ಥಿತಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಟಿಪ್ಪು ವೈಭವೀಕರಣ
ಶಿವಮೊಗ್ಗದಲ್ಲಿ ಹಿಂದೂಗಳನ್ನು ಕಗ್ಗೊಲೆ ಮಾಡಿದ ಔರಂಗಬೇಬನ ರಕ್ತ ಸಿಕ್ತ ಖಡ್ಗ ಪ್ರದರ್ಶನ ಮಾಡುತ್ತಾರೆ, ಕೋಲಾರದಲ್ಲೂ ಇದರ ಪ್ರದರ್ಶನ ನಡೆದಿದೆ, ಟಿಪ್ಪುವನ್ನು ವೈಭವೀಕರಿಸಲಾಗುತ್ತಿದೆ, ಆದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ಹನುಮಾನ್ ಚಾಲೀಸ ಕೇಳುತ್ತಿದ್ದ ಹುಡುಗನ ಮೇಲೆ ಹಲ್ಲೆ ಮಾಡಲಾಗಿದೆ, ಇದನ್ನು ಪ್ರಶ್ನಿಸಲು ಹೋದವರ ಮೇಲೇ ಕೇಸು ಹಾಕಿದ್ದೀರಿ.
ಅಲ್ಪಸಂಖ್ಯಾತರ ಓಲೈಕೆ ಮಾಡಿ ಪ್ರಜಾತಂತ್ರ ಕಗ್ಗೊಲೆ ಮಾಡುವ ಕೆಲಸ ಮಾಡುತ್ತಿದ್ದೀರಿ, ನೀವು ಪ್ರಜಾತಂತ್ರ ರಕ್ಷಕರೇ ಎಂದು ವ್ಯಂಗ್ಯವಾಡಿದರು.
ಸಂವಿಧಾನ ರಕ್ಷಣೆಗೆ ಶಾಲೆ-ಕಾಲೇಜು ಮಕ್ಕಳ ಮಾನವ ಸರಪಳಿ ಮಾಡಿದಿರಿ, ಆದರೆ ಜನರೇ ಬರಲಿಲ್ಲ, ಮನೆಗಳಿಗೆ ಹೋಗಿದ್ದ ಮಕ್ಕಳನ್ನು ಪುನಃ ಕರೆತಂದು ರಸ್ತೆಯಲ್ಲಿ ಬಿಸಿಲಲ್ಲಿ ನಿಲ್ಲಿಸಿದಿರಿ. ಈ ಬಗ್ಗೆ ನಮಗೆ ನೂರಾರು ಫೋನ್ ಕರೆಗಳು ಬಂದಿವೆ, ಇದು ಯಾವ ರೀತಿಯ ಸಂವಿಧಾನ ರಕ್ಷಣೆ.
ವಿಧಾನಸೌಧದಲ್ಲಿ ಪಾಕಿಸ್ತಾನ್ ಘೋಷಣೆ
ನೀವು ಮುಖ್ಯಮಂತ್ರಿ ಆದ ಮೇಲೆ ರಾಜ್ಯಸಭೆ ಚುನಾವಣೆ ನಡೆದಾಗ ಕರ್ನಾಟಕ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೇಳಬೇಕಾಯಿತು, ಘಟನೆ ಸಂಬಂಧ ಎಫ್‌ಎಸ್‌ಎಲ್ ವರದಿ ಬಳಿಕ ಕೇಸು ಹಾಕುವುದಾಗಿ ಹೇಳಿ ದಿನ ತಳ್ಳಲಾಯಿತು.
ಅತ್ಯಂತ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಪರಶುರಾಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಕಾಂಗ್ರೆಸ್ ಶಾಸಕ ಮತ್ತು ಶಾಸಕರ ಪುತ್ರ ಸೇರಿ ತಮಗೆ ಹಣ ಕೇಳಿದ್ದು, ಅದನ್ನು ಕೊಡಲು ನನಗೆ ಶಕ್ತಿ ಇಲ್ಲ, ನನಗೆ ಹಿಂಸೆ ಕೊಡುತ್ತಿದ್ದಾರೆ ಎಂದು ಅಧಿಕಾರಿ ಹೇಳಿ ಮೃತಪಟ್ಟರು, ಆದರೂ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ಹಿಂದೆ ಮುಂದೆ ನೋಡುತ್ತಿದ್ದೀರಿ.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ. ಹಗರಣ ನಡೆಸಿ ಸಿಕ್ಕಿ ಹಾಕಿಕೊಂಡ ನಂತರ ಎಸ್‌ಐಟಿ ರಚಿಸಿದ್ದೀರಿ, ಎಸ್‌ಐಟಿ ವರದಿ ಓದಿದ್ದೀರಾ ಸಿದ್ದರಾಮಯ್ಯನವರೇ, ಆ ವರದಿಯಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಅವರ ಹೆಸರು ಏಕೆ ಇಲ್ಲ, ಅವರು ಅಪರಾಧಿ ಅಲ್ಲವೇ ಎಂದು ಪ್ರಶ್ನಿಸಿದರು.