ಬೆಂಗಳೂರು:ದೇಶ ದ್ರೋಹಿಗಳ ವಿರುದ್ಧ ರಾಜ್ಯ ಕಾಂಗ್ರೆಸ್ ಸರ್ಕಾರದ ಮೃದು ಧೋರಣೆಯಿಂದ ಕನಾಟಕದಲ್ಲಿ ಶಾಂತಿ ಸುವ್ಯವಸ್ಥೆ ಕದಡುವಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದಿಲ್ಲಿ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗಮಂಗಲ, ದಾವಣಗೆರೆ ಮತ್ತಿತರ ಕಡೆ ನಡೆದ ಗಲಭೆಗಳ ಕುರಿತು ರಾಜ್ಯ ಸರ್ಕಾರಿ ಸಂಸ್ಥೆಗಳು ಸಮರ್ಪಕ ತನಿಖೆ ನಡೆಸಲು ಸಾಧ್ಯವಿಲ್ಲ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಯಿಂದ ತನಿಖೆ ಆಗಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.
ಎನ್‌ಐಎಯಿಂದ ತನಿಖೆ
ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಬದಿಗಿಟ್ಟು, ಎಲ್ಲ ಸಮುದಾಯದ ಜನರು ನೆಮ್ಮದಿಯಿಂದ ಬದುಕುವಂತಾಗಲು ಘಟನೆಗಳ ತನಿಖೆಯನ್ನು ಎನ್‌ಐಎಗೆ ಕೊಡಿ.
ಹಿಂದೂಗಳ ಮೇಲೆ ಬಲಾತ್ಕಾರ, ದಾಳಿ ನಡೆಯುತ್ತಿದೆ, ಪೊಲೀಸರ ಕಣ್ಮುಂದೆಯೇ ನಡೆದರೂ ಕಣ್ಮುಚ್ಚಿ ಕೂತಿದ್ದಾರೆ, ಅವರಿಗೆ ಯಾವುದೇ ಕ್ರಮ ಕೈಗೊಳ್ಳಲು ಅಧಿಕಾರ ಇಲ್ಲದಿರುವುದೇ ಇದಕ್ಕೆ ಕಾರಣ.
ರಾಜ್ಯದಲ್ಲಿ ಅಲ್ಪಸಂಖ್ಯಾತರಿಂದಲೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ ಎಂಬ ಭ್ರಮೆಯಲ್ಲಿ ಮುಖ್ಯಮಂತ್ರಿಗಳಿದ್ದು ಇದೇ ಕಾರಣಕ್ಕೆ ಅಲ್ಪಸಂಖ್ಯಾತರು ರಾಜ್ಯದಲ್ಲಿ ಮೆರೆಯುತ್ತಿದ್ದಾರೆ.
ಅರಾಜಕತೆ ಹೆಚ್ಚಾಗುತ್ತಿದೆ
ವಿರೋಧ ಪಕ್ಷವಾದ ಬಿಜೆಪಿ ಎಲ್ಲ ವಿಚಾರಗಳನ್ನು ಗಂಭೀರವಾಗಿ ತೆಗೆದುಕೊಂಡಿದೆ, ಮುಂದೆ ಹೇಗೆ ತೆಗೆದುಕೊಂಡು ಹೋಗಬೇಕೆಂದು ಚರ್ಚಿಸಲಿದ್ದೇವೆ, ರಾಜ್ಯದಲ್ಲಿ ಅರಾಜಕತೆ ದಿನೇ ದಿನೇ ಹೆಚ್ಚಾಗುತ್ತಿದೆ, ಕಾನೂನು-ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ.
ಒಂದಾದ ಮೇಲೆ ಒಂದರಂತೆ ದುರ್ಘಟನೆಗಳು ನಡೆಯುತ್ತಿವೆ, ನಾಗಮಂಗಲ ನಂತರ ಪಾಂಡವಪುರದಲ್ಲಿ ಪೊಲೀಸರು ಏಕಾಏಕಿ ಸಂಘದ ಕಾರ್ಯಾಲಯಕ್ಕೆ ನುಗ್ಗಿ ದಬ್ಬಾಳಿಕೆ ಮಾಡಿದ್ದಾರೆ.
ನಿನ್ನೆ ರಾತ್ರಿ ದಾವಣಗೆರೆಯಲ್ಲಿ ಘಟನೆ ನಡೆದಿದೆ, ಹಿಂದೂ ಯುವಕರು ಶಾಂತಿಯುತವಾಗಿ ಗಣಪತಿ ಮೆರವಣಿಗೆ ಮಾಡುತ್ತಿದ್ದಾಗ ಅವರ ಮೇಲೆ ದಾಳಿ ಮಾಡಲಾಗಿದೆ, ಪೊಲೀಸ್ ಅಧಿಕಾರಿಗಳಿಗೂ ಕಲ್ಲಿನ ಪೆಟ್ಟು ಬಿದ್ದಿದೆ.
ಪೊಲೀಸ್ ವ್ಯವಸ್ಥೆ ಇದೆಯೇ
ವಿವಿಧೆಡೆ ನಡೆಯುತ್ತಿರುವ ಘಟನಾವಳಿಗಳನ್ನು ಗಮನಿಸಿದರೆ ರಾಜ್ಯದಲ್ಲಿ ಚುನಾಯಿತ ಸರ್ಕಾರ, ಪೊಲೀಸ್ ವ್ಯವಸ್ಥೆ ಇದೆಯೇ ಎಂಬ ಸಂಶಯವಾಗಿದೆ.
ಹಿಂದೂಗಳ ಮೇಲೆ ಏನೇ ದಾಳಿ ಮಾಡಿದರೂ ಅದನ್ನು ಸಣ್ಣ ಘಟನೆ ಎಂದು ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂಬ ಧೈರ್ಯ-ವಿಶ್ವಾಸ ದೇಶದ್ರೋಹಿಗಳಲ್ಲಿ ಬೇರೂರಿದೆ ಎಂದರು.
ನಾಗಮಂಗಲ ಘಟನೆ ಕುರಿತು ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರ ನೇತೃತ್ವದಲ್ಲಿ ಬಿಜೆಪಿ ಸತ್ಯಶೋಧನಾ ಸಮಿತಿ ರಚಿಸಿ, ಸ್ಥಳಕ್ಕೆ ಭೇಟಿ ನೀಡಿ ಸತ್ಯಾಸತ್ಯತೆ ಕುರಿತು ಮಾಹಿತಿ ಪಡೆದಿದ್ದು, ಘಟನೆ ಹಿಂದಿನ ವ್ಯವಸ್ಥಿತ ಪಿತೂರಿ ಬಗ್ಗೆ ವರದಿ ನೀಡಿದೆ ಎಂದರು.