ಬೆಂಗಳೂರು:ಹಿರಿಯ ಸಾಹಿತಿ, ಚಿಂತಕ ಡಾ.ಹಂ.ಪ. ನಾಗರಾಜಯ್ಯ ಈ ಬಾರಿಯ ಮೈಸೂರು ದಸರಾ ಮಹೋತ್ಸವ ಉದ್ಘಾಟಿಸಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದಲ್ಲದೆ, ತಾವು ಈ ಕುರಿತು ಹಂ.ಪ.ನಾಗರಾಜಯ್ಯ ಅವರ ಜೊತೆ ಸಮಾಲೋಚನೆ ಮಾಡುತ್ತೇನೆ.
ಮೈಸೂರು ಜಿಲ್ಲಾಡಳಿತ ಹಂ.ಪ.ನಾ ಅವರಿಗೆ ಅಧಿಕೃತವಾಗಿ ಆಹ್ವಾನ ನೀಡಲಿದೆ, ದಸರಾ ಉನ್ನತ ಮಟ್ಟದ ಸಮಿತಿ ತಮಗೆ ನೀಡಿದ್ದ ಅಧಿಕಾರ ಬಳಕೆ ಮಾಡಿಕೊಂಡು ರಾಜ್ಯದ ಖ್ಯಾತ ಸಾಹಿತಿ ಮತ್ತು ಚಿಂತಕರನ್ನು ಆಯ್ಕೆ ಮಾಡಿರುವುದಾಗಿ ಹೇಳಿದರು.
ತಾಯಿ ಚಾಮುಂಡೇಶ್ವರಿ ದೇವಿಗೆ ಪೂಜೆ
ಅಕ್ಟೋಬರ್ 3ರಂದು ಬೆಳಗ್ಗೆ 9-15ರಿಂದ 9-45ರ ಮುಹೂರ್ತದಲ್ಲಿ ತಾಯಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ದಸರಾ ಮಹೋತ್ಸವಕ್ಕೆ ಹಂ.ಪ.ನಾ ಚಾಲನೆ ನೀಡಲಿದ್ದಾರೆ, ಮಹೋತ್ಸವ ಅಕ್ಟೋಬರ್ 3ರಿಂದ 13 ರವರೆಗೆ ನಡೆಯಲಿದೆ.
ಹಂ.ಪ.ನಾಗರಾಜಯ್ಯ ಅವರು ಕನ್ನಡ ಸಾರಸ್ವತ ಲೋಕದಲ್ಲಿ ’ಹಂಪನಾ’ ಎಂದೇ ಚಿರಪರಿಚಿತರು, ಇಂದಿನ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹಂಪಸಂದ್ರ ಗ್ರಾಮದಲ್ಲಿ ಅಕ್ಟೋಬರ್ 7, 1936ರಲ್ಲಿ ಜನಿಸಿದರು.
ಮಂಡ್ಯ, ಗೌರಿಬಿದನೂರು, ಮಧುಗಿರಿ, ತುಮಕೂರಿನಲ್ಲಿ ಕಾಲೇಜುವರೆಗಿನ ವಿದ್ಯಾಭ್ಯಾಸ ಮುಗಿಸಿ, ನಂತರ ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿ.ಎ.(ಆನರ್ಸ್) ಪದವಿ ಪಡೆದು ಎಂ.ಎ. ವ್ಯಾಸಂಗಕ್ಕೆ ಸೇರಿ ಕುವೆಂಪು, ತೀ.ನಂ.ಶ್ರೀಕಂಠಯ್ಯ, ಡಿ.ಎಲ್.ನರಸಿಂಹಾಚಾರ್, ಎಸ್.ವಿ.ಪರಮೇಶ್ವರ ಭಟ್ಟ, ಕೆ.ವೆಂಕಟರಾಮಪ್ಪ, ದೇ.ಜವರೇಗೌಡ ಮುಂತಾದ ಸಾಹಿತ್ಯ ದಿಗ್ಗಜಗಳ ನೆರಳಿನಲ್ಲಿ ಸ್ಫೂರ್ತಿ ಪಡೆದರು.
ಡಾಕ್ಟರೇಟ್ ಪದವಿ
ಮೈಸೂರು ವಿಶ್ವವಿದ್ಯಾಲಯದ ಎಂಎ ಪದವಿ, ವಡ್ಡಾರಾಧನೆ ಸಮಗ್ರ ಅಧ್ಯಯನಕ್ಕೆ ಬೆಂಗಳೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿ ಪಡೆದರು.
ಬೆಂಗಳೂರು ವಿವಿಯಲ್ಲಿ ಕಲಾವಿಭಾಗದ ಮುಖ್ಯಸ್ಥರಾಗಿ, ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ದುಡಿದರು. ವಿವಿಧ ಅವಧಿಗಳಲ್ಲಿ ಜೈನ ಸಂಶೋಧನ ಕೇಂದ್ರ, ಜೈನ ಅಧ್ಯಯನ ಸಂಸ್ಥೆ, ಕರ್ನಾಟಕ ಸರ್ಕಾರದ ಕನ್ನಡ ಸಂಸ್ಕೃತಿ ನಿರ್ದೇಶನಾಲಯಗಳ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿಗೆ 1978ರಿಂದ 1986ರ ದೀರ್ಘ ಅವಧಿಗೆ ಅಧ್ಯಕ್ಷರಾಗಿದ್ದರು, ದೇಶ ವಿದೇಶಗಳಲ್ಲಿ ನಡೆದ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷತೆ ವಹಿಸಿದ್ದಾರೆ.
115 ಪುಸ್ತಕಗಳು ಪ್ರಕಟ
ಹಂಪನಾ ಅವರು ಸಾಹಿತ್ಯದ ಹಲವು ಪ್ರಕಾರಗಳಲ್ಲಿ ತಮ್ಮ ಪ್ರತಿಭೆ ತೋರಿದ್ದು, ಇವರ ಲೇಖನಿಯಿಂದ 115 ಪುಸ್ತಕಗಳು ಪ್ರಕಟವಾಗಿದೆ.
ಹಂಪನಾ ಅವರಿಗೆ ಕನ್ನಡ ವಿಶ್ವವಿದ್ಯಾಲಯ ೨೦೦೬ರಲ್ಲಿ ನಾಡೋಜ ಪ್ರಶಸ್ತಿ ನೀಡಿ ಗೌರವಿಸಿದೆ. ಅಲ್ಲದೆ, 1993-94ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1995ರ ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ,1990ರಲ್ಲಿ ಶಿಶುಸಾಹಿತ್ಯಕ್ಕಾಗಿ ನೀಡಲಾಗುವ ರಾಷ್ಟ್ರೀಯ ಪುರಸ್ಕಾರ, 1996ರಲ್ಲಿ ಚಾಮುಂಡರಾಯ ಪ್ರಶಸ್ತಿ, 1997ರಲ್ಲಿ ಕಾವ್ಯಾನಂದ ಪ್ರಶಸ್ತಿ, 1998ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 2001ರಲ್ಲಿ ಶಾಸನ ಸಾಹಿತ್ಯ ಪ್ರಶಸ್ತಿ, ಅತ್ತಿಮಬ್ಬೆ ಪ್ರತಿಷ್ಠಾನದ ಚಿ.ನ.ಮಂಗಳಾ ಪ್ರಶಸ್ತಿ, ಆಚಾರ್ಯ ಕುಂದ ಜ್ಞಾನಪೀಠ ಪ್ರಶಸ್ತಿ, ಶಿವಮೊಗ್ಗ ನಾಗರಿಕ ಸಮುದಾಯ ನೀಡಿದ ಸಾಹಿತ್ಯಸಿಂಧು ಮತ್ತು ಜ್ಞಾನಭಾಸ್ಕರ ಪ್ರಶಸ್ತಿಗಳು, ಕರ್ನಾಟಕ ಸರ್ಕಾರದ ಪಂಪ ಪ್ರಶಸ್ತಿ, ಶಾಸ್ತ್ರೀಯ ಕನ್ನಡಕ್ಕೆ ನೀಡಿದ ಸೇವೆಯನ್ನು ಪರಿಗಣಿಸಿ ರಾಷ್ಟ್ರಪತಿ ಮನ್ನಣೆ ದೊರೆತಿದೆ.