ಬೆಂಗಳೂರು:ಅರ್ಕಾವತಿ ಅಕ್ರಮ ಡಿ-ನೋಟಿಫಿಕೇಷನ್ ಪ್ರಕರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊರಳಿಗೆ ಸುತ್ತಿಕೊಳ್ಳುವ ಸಾಧ್ಯತೆ ಎದುರಾಗಿದೆ.
ಸಿದ್ದರಾಮಯ್ಯ ಮೊದಲ ಬಾರಿಗೆ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಬಿಡಿಎ ಅರ್ಕಾವತಿ ಬಡಾವಣೆಯಲ್ಲಿ 541 ಎಕರೆ ಡಿ-ನೋಟಿಫಿಕೇಷನ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ರಾಜ್ಯ ಸರ್ಕಾರದಿಂದ ಮಾಹಿತಿ ಕೋರಿದ್ದಾರೆ.
7,000 ಕೋಟಿ ರೂ. ಕೈಬದಲಾವಣೆ
ರೀ-ಡೂ ಹೆಸರಿನಲ್ಲಿ ಇಷ್ಟು ದೊಡ್ಡ ಪ್ರಮಾಣದ ಭೂಮಿಯನ್ನು ಡಿ-ನೋಟಿಫಿಕೇಷನ್ ಮಾಡಿ 7,000 ಕೋಟಿ ರೂ.ಗಳಿಗೂ ಹೆಚ್ಚು ಹಣ ಕೈಬದಲಾವಣೆ ಆಗಿದೆ ಎಂದು ಪ್ರತಿಪಕ್ಷಗಳು ಆಗಿಂದಾಗ್ಯೆ ಆರೋಪ ಮಾಡುತ್ತಾ ಬಂದಿದ್ದವು.
ಆರೋಪಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ, ನ್ಯಾಯಮೂರ್ತಿ ಎಚ್.ಎಸ್.ಕೆಂಪಣ್ಣ ಆಯೋಗ ರಚಿಸಿ ವರದಿಯನ್ನೂ ತರಿಸಿಕೊಂಡರು, ಆದರೆ, ಆ ವರದಿಯನ್ನು ವಿಧಾನಮಂಡಲದಲ್ಲಿ ಮಂಡಿಸಲೇ ಇಲ್ಲ.
ಪ್ರತಿಪಕ್ಷಗಳು ಆರೋಪ ಮಾಡಿದ್ದವಾದರೂ ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಿಲ್ಲ, ರಾಜಭವನ ಮತ್ತು ವಿಧಾನಸೌಧದ ನಡುವಿನ ಮುಸುಕಿನ ಗುದ್ದಾಟದಲ್ಲಿ ರೀ-ಡೂ ಪ್ರಕರಣವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲು ರಾಜ್ಯಪಾಲರು ಇದೀಗ ಮುಂದಾಗಿದ್ದಾರೆ.
2017ರಲ್ಲೇ ಕೆಂಪಣ್ಣ ಆಯೋಗ ವರದಿ
ರೀ-ಡೂ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಪಣ್ಣ ಆಯೋಗ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಅಂದರೆ, 2017ರಲ್ಲೇ ವರದಿ ಸಲ್ಲಿಸಿತ್ತು.
ರಾಜ್ಯಪಾಲರ ಕಾರ್ಯದರ್ಶಿಗಳು, ಕೆಂಪಣ್ಣ ಆಯೋಗದ ವರದಿಯ ಪೂರ್ಣ ಪ್ರತಿ ಮತ್ತು ಅರ್ಕಾವತಿ ಬಡಾವಣೆಯಲ್ಲಿ ರೀ-ಡೂ ಹೆಸರಿನಲ್ಲಿ ಡಿ-ನೋಟಿಫೈ ಮಾಡಿರುವ ಕಡತಗಳನ್ನು ಸಲ್ಲಿಸುವಂತೆ ಸರ್ಕಾರಕ್ಕೆ ಆದೇಶಿಸಿದ್ದಾರೆ.
ಮುಖ್ಯಕಾರ್ಯದರ್ಶಿ ಅವರಿಗೆ ಬಂದ ರಾಜಭವನದ ಪತ್ರವನ್ನು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅವರಿಗೆ ವರ್ಗಾಯಿಸಲಾಗಿದೆ.
ರಾಜಭವನದ ಆದೇಶ
ರಾಜಭವನದ ಆದೇಶಕ್ಕೆ ದಾಖಲೆಗಳನ್ನು ಸಲ್ಲಿಸುವ ಸಂಬಂಧ ಇಲಾಖೆಯ ಅಧೀನ ಕಾರ್ಯದರ್ಶಿ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಗಮನಕ್ಕೆ ತಂದು ಅನುಮತಿ ಕೋರಿದ್ದಾರೆ.
ಬೆಂಗಳೂರು ನಗರಾಭಿವೃದ್ಧಿ ಮತ್ತು ಬಿಡಿಎ ಶಿವಕುಮಾರ್ ವ್ಯಾಪ್ತಿಗೆ ಬರಲಿದ್ದು, ಅವರ ಅನುಮತಿ ಪಡೆದು ರಾಜಭವನಕ್ಕೆ ದಾಖಲೆಗಳನ್ನು ಸಲ್ಲಿಸಲು ನಗರಾಭಿವೃದ್ಧಿ ಇಲಾಖೆ ಕೋರಿದೆ.
ಗಂಗೇನಹಳ್ಳಿ ಡಿ-ನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಸಂಪುಟದ ಮೂವರು ಸಚಿವರು ಸುದ್ದಿಗೋಷ್ಠಿ ನಡೆಸಿ, ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿ.ಎಸ್.ಯಡಿಯೂರಪ್ಪ ಅವರುಗಳು ನೂರು ಕೋಟಿ ರೂ. ಸರ್ಕಾರಿ ಭೂಮಿಯನ್ನು ಲಪಟಾಯಿಸಿದ್ದಾರೆ ಎಂದು ಮಾಡಿದ ಆರೋಪದ ಬೆನ್ನಲ್ಲೇ ಅರ್ಕಾವತಿ ಹಗರಣದ ಕಡತವನ್ನು ರಾಜಭವನ ಕೇಳಿದೆ.
ಸರ್ಕಾರದಿಂದ ಮಾಹಿತಿ ಕೋರಿ ಪತ್ರ
ಸರ್ಕಾರದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಹಗರಣ ಮತ್ತು ಅದರ ತನಿಖೆಗಳ ಬಗ್ಗೆ ಕಳೆದ ನಾಲ್ಕು ದಿನಗಳಿಂದ ಒಂದಲ್ಲಾ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಭವನ ಸರ್ಕಾರದಿಂದ ಮಾಹಿತಿ ಪಡೆಯುತ್ತಿದೆ.
ಅಷ್ಟೇ ಅಲ್ಲ, ಲೋಕಾಯುಕ್ತ ನಡೆಸಿರುವ ತನಿಖಾ ವರದಿಗಳು ಸರ್ಕಾರದ ಕೈಸೇರಿರುವ ಬಗ್ಗೆಯೂ ರಾಜ್ಯಪಾಲರು ಲೋಕಾಯುಕ್ತಕ್ಕೂ ಬಿಸಿ ಮುಟ್ಟಿಸಿದ್ದಾರೆ.
ಕೆಂಪಣ್ಣ ವರದಿಯಲ್ಲಿ ಬಿಡಿಎ ಮತ್ತು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳನ್ನು ಮಾತ್ರ ಹೊಣೆ ಮಾಡಿ ಸಿದ್ದರಾಮಯ್ಯ ಅವರಿಗೆ ರೀ-ಡೂ ಪ್ರಕರಣದಲ್ಲಿ ಕ್ಲೀನ್‌ಚಿಟ್ ನೀಡಿತ್ತು.
ಬಿಜೆಪಿ ಹೋರಾಟಕ್ಕೆ ಅಡ್ಡಿ
ಈ ಹಗರಣವನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ವಿಧಾನಸಭೆ ಒಳಗೆ ಮತ್ತು ಹೊರಗೆ ಹೋರಾಟ ನಡೆಸಲು ಬಿಜೆಪಿ ಮುಂದಾದ ಸಂದರ್ಭದಲ್ಲೆಲ್ಲಾ ಆ ಪಕ್ಷದ ಮುಖಂಡರೊಬ್ಬರು ಇದಕ್ಕೆ ಆಸ್ಪದ ಕೊಡುತ್ತಿರಲಿಲ್ಲ.
ಬಸವರಾಜ ಬೊಮ್ಮಾಯಿ ಪ್ರತಿಪಕ್ಷದಲ್ಲಿ ಇದ್ದ ಸಂದರ್ಭದಲ್ಲಿ ಹಗರಣದ ಬಗ್ಗೆ ಪ್ರಸ್ತಾಪ ಎತ್ತಿದ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾರಾಮಾರಿಯೇ ನಡೆದಿತ್ತು.
ಆದರೆ, ಬೊಮ್ಮಾಯಿ ಅವರು ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ರೀ-ಡೂ ಪ್ರಕರಣದ ತನಿಖೆ ಮಾಡಿಸುವ ಧೈರ್ಯ ತೋರಲಿಲ್ಲ, ಅವರ ಸರ್ಕಾರದ ಮೇಲೆ ಅಂದಿನ ಪ್ರತಿಪಕ್ಷ ಕಾಂಗ್ರೆಸ್ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದರೂ ಅವರು ರೀ-ಡೂ ಪ್ರಕರಣಕ್ಕೆ ಕೈಹಾಕಲಿಲ್ಲ.