ಬೆಂಗಳೂರು:ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ ಕಾರ್ಯಕ್ರಮ ಹೆಸರಿನಲ್ಲಿ ರಾಜ್ಯ ಸರ್ಕಾರ ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡುತ್ತಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಈಗಾಗಲೇ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ಮಂಡ್ಯ, ಮೈಸೂರು ಭಾಗದ ಶಾಸಕರು, ವಿಧಾನ ಪರಿಷತ್ ಸದಸ್ಯರು, ಕಾವೇರಿ ಅಭಿವೃದ್ಧಿ ನಿಗಮದ ಹಿರಿಯ ಅಧಿಕಾರಿಗಳು ಮೂರು ದಿನಗಳ ಹರಿದ್ವಾರ ಹಾಗೂ ಕಾಶಿ ಭೇಟಿ ನೀಡಿ ಅಧ್ಯಯನ ನಡೆಸಿ ಬಂದಿದ್ದು, ಈಗ ಮತ್ತೊಮ್ಮೆ ಅಧಿಕಾರಿಗಳ ನಿಯೋಗ ಕಳುಹಿಸುತ್ತಿರುವುದು ಹಣದ ಲೂಟಿ ಕಾರ್ಯಕ್ರಮವಾಗಿದೆ ಎಂದಿದ್ದಾರೆ.
ಮತ್ತೊಮ್ಮೆ ನಿಯೋಗ
ಅಧಿಕಾರಿಗಳ ನಿಯೋಗ ಮತ್ತೊಮ್ಮೆ ಕಳುಹಿಸುವುದಾದರೆ, ಸಚಿವರು ತಮ್ಮ ತಂಡದೊಂದಿಗೆ ಹರಿದ್ವಾರ ಹಾಗೂ ಕಾಶಿಗೆ ತೆರಳಿ ಸರ್ಕಾರಿ ಹಣದಲ್ಲಿ ಮೋಜು-ಮಸ್ತಿ ಮಾಡಿದ್ದಾರೆಯೇ.
ಅಯೋಧ್ಯೆ ರಾಮಮಂದಿರದ ಉದ್ಘಾಟನೆ ವೇಳೆ 30 ವರ್ಷ ಹಳೆ ಮೊಕದ್ದಮೆಗಳನ್ನು ರೀ-ಓಪನ್ ಮಾಡಿ ಕರಸೇವಕರನ್ನು ಜೈಲಿಗೆ ಹಾಕಿದ್ದ, ಗಣೇಶ ಮೂರ್ತಿಯನ್ನೇ ಪೊಲೀಸ್ ವ್ಯಾನ್‌ಗೆ ಹತ್ತಿಸಿದ, ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಕೋಮುದಳ್ಳುರಿಯನ್ನು ಸಣ್ಣ ಘಟನೆ, ಆಕಸ್ಮಿಕ ಘಟನೆ ಎಂದು ತಿಪ್ಪೆ ಸಾರಿಸಿದ ಕಾಂಗ್ರೆಸ್ ಸರ್ಕಾರ ಈಗ ದಿಢೀರನೆ ಹಿಂದೂ ಧರ್ಮ, ಹಿಂದೂಗಳ ಆಚಾರ-ವಿಚಾರ, ಸಂಪ್ರದಾಯ-ಪರಂಪರೆ ಬಗ್ಗೆ ಎಲ್ಲಿಲ್ಲದ ಆಸಕ್ತಿ ತೋರುವ ನಾಟಕ ಮಾಡುತ್ತಿದೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ, ನಿಮಗೆ ನಿಜವಾಗಿಯೂ ದೇಶ, ಧರ್ಮದ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ, ಮೊದಲು ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ, ನಾಗಮಂಗಲದಲ್ಲಿ, ದಾವಣಗೆರೆಯಲ್ಲಿ ಗಣೇಶ ವಿಸರ್ಜನೆ ವೇಳೆ ಗಲಭೆ ಎಬ್ಬಿಸಿದ, ಚಿಕ್ಕಮಗಳೂರಿನಲ್ಲಿ ಪ್ಯಾಲೆಸ್ಟೈನ್ ಧ್ವಜ ಹಿಡಿದು ಪುಂಡಾಟಿಕೆ ಮಾಡಿದ ನಿಮ್ಮ ಬ್ರದರ್ಸ್‌ಗಳನ್ನು ಒಳಗೆ ಹಾಕಿ, ಅದು ಬಿಟ್ಟು ಬರೀ ತೋರಿಕೆಗೆ ಕಾವೇರಿ ಆರತಿ ಮಾಡುವ ನಾಟಕದಿಂದ ತಾಯಿ ಕಾವೇರಿ ಮೆಚ್ಚುವುದಿಲ್ಲ ಎಂದಿದ್ದಾರೆ.