ಬೆಂಗಳೂರು:ಕ್ವಿನ್‌ಸಿಟಿ ಯೋಜನೆಯಡಿ ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಂಡು ಸುಸ್ಥಿರ ಬೆಳವಣಿಗೆ ಸಾಧಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ, ಜಾಗತಿಕ ಮಟ್ಟದ ಸಹಭಾಗಿತ್ವ ಮತ್ತು ನಾವೀನ್ಯತೆಗಳಿಗೆ ಆದ್ಯತೆ ನೀಡಲಿದ್ದು, ‘ಸ್ಮಾರ್ಟ್ ಲಿವಿಂಗ್’ ಪರಿಕಲ್ಪನೆಗೆ ಒತ್ತು ಕೊಡಲಾಗುವುದು, ಕರ್ನಾಟಕ ದೇಶದ ಜ್ಞಾನಾಧಾರಿತ ಆರ್ಥಿಕತೆಯಲ್ಲಿ ಪ್ರಥಮ ಸ್ಥಾನದಲ್ಲಿದೆ, ಕ್ವಿನ್‌ಸಿಟಿ ಯೋಜನೆ ಕರ್ನಾಟಕ ಮತ್ತು ಭಾರತದ ಹೊಸ ಭಾಷ್ಯ ಬರೆಯಲಿದೆ ಎಂದರು.
ನಗರದ ಹೊರವಲಯದ ಡಾಬಸಪೇಟೆ ಮತ್ತು ದೊಡ್ಡಬಳ್ಳಾಪುರ ನಡುವೆ, ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ ಸಮೀಪ ಅಭಿವೃದ್ಧಿಪಡಿಸಲಿರುವ ಜ್ಞಾನ, ಆರೋಗ್ಯ ಮತ್ತು ಸಂಶೋಧನಾ ನಗರ ಯೋಜನೆ (ಕ್ವಿನ್‌ಸಿಟಿ)ಯ ಮೊದಲ ಹಂತಕ್ಕೆ ಚಾಲನೆ ನೀಡಲಾಗಿದೆ ಎಂದರು.
20 ವರ್ಷ ನೀರಿನ ಕೊರತೆ ಇಲ್ಲ
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಬೆಂಗಳೂರಿನಲ್ಲಿ ಕೈಗಾರಿಕಾ ಬೆಳವಣಿಗೆಗೆ ಬಹಳ ಅವಕಾಶಗಳಿದ್ದು, ಇದರ ಸಾಕಾರಕ್ಕೆ ಸರ್ಕಾರ ಬದ್ಧವಾಗಿದೆ, ಎರಡು ವಾರಗಳಲ್ಲಿ ಕಾವೇರಿ 5ನೇ ಹಂತದ ಕುಡಿಯುವ ನೀರು ಪೂರೈಕೆ ಆರಂಭವಾಗಲಿದ್ದು, ನಗರಕ್ಕೆ ಇನ್ನು 20 ವರ್ಷ ನೀರಿನ ಕೊರತೆ ಇರುವುದಿಲ್ಲ.
ಬೆಂಗಳೂರಿನಲ್ಲಿ ವಿದ್ಯುತ್ ಸಮಸ್ಯೆ ಇಲ್ಲ, ಸಂಚಾರ ವ್ಯವಸ್ಥೆಯಲ್ಲಿ ಸ್ವಲ್ಪ ಮಟ್ಟಿನ ಸಮಸ್ಯೆ ಇರುವುದು ನಿಜ, ಅದನ್ನು ಕ್ಷಿಪ್ರಗತಿಯಲ್ಲಿ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು, ಇಲ್ಲಿರುವಷ್ಟು ಪ್ರತಿಭಾನ್ವಿತ ಮಾನವ ಸಂಪನ್ಮೂಲ ಇನ್ನೆಲ್ಲೂ ಸಿಗುವುದಿಲ್ಲ ಎಂದರು.
5,800 ಎಕರೆಯಲ್ಲಿ ಕ್ವಿನ್‌ಸಿಟಿ
ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಮಾತನಾಡಿ, 40 ಸಾವಿರ ಕೋಟಿ ರೂ. ಹೂಡಿಕೆಯ ಈ ಯೋಜನೆಯಿಂದ ಒಂದು ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ, ಒಟ್ಟು 5,800 ಎಕರೆಯಲ್ಲಿ ಕ್ವಿನ್‌ಸಿಟಿ ಅಭಿವೃದ್ಧಿಪಡಿಸುವ ಉದ್ದೇಶವಿದೆ ಎಂದರು.
ಕ್ವಿನ್‌ಸಿಟಿ ರಾಜ್ಯದ ಕೈಗಾರಿಕಾ ಬೆಳವಣಿಗೆ ಮತ್ತು ಶ್ರೇಷ್ಠತೆಗೆ ಮಾನದಂಡವಾಗಿ ಹೊರಹೊಮ್ಮಲಿದೆ, ಬೆಂಗಳೂರಿನಲ್ಲಿರುವ ವಿಜ್ಞಾನ, ತಂತ್ರಜ್ಞಾನ, ಸಂಶೋಧನೆ, ನವೋದ್ಯಮ, ವೈಮಾಂತರಿಕ್ಷ ಮತ್ತು ರಕ್ಷಣಾ ವಲಯಗಳ ಕಾರ್ಯ ಪರಿಸರವನ್ನು ಪೂರಕವಾಗಿ ಬಳಸಿಕೊಳ್ಳಲಾಗುವುದು, ಮುಂಬರುವ ದಿನಗಳಲ್ಲಿ ಸ್ಮಾರ್ಟ್ ಸಿಟಿಗಳಿಗೆ ಮೇಲ್ಪಂಕ್ತಿಯಾಗಲಿದೆ ಎಂದರು.