ಬೆಂಗಳೂರು:ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಬಿಡಿ ನಿವೇಶನಗಳ ಹಂಚಿಕೆಯಲ್ಲಿ ನ್ಯಾಯಾಲಯದ ಆದೇಶದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮೊದಲ ಆರೋಪಿಯನ್ನಾಗಿಸಿ ಎಫ್‌ಐಆರ್ ದಾಖಲಾಗಿದೆ.
ತವರು ಜಿಲ್ಲೆ ಮೈಸೂರಿನಲ್ಲೇ ಮುಖ್ಯಮಂತ್ರಿ ಅವರು, ಪ್ರವಾಸ ಕೈಗೊಂಡಿರುವ ಸಂದರ್ಭದಲ್ಲೇ ಎಫ್ ಐಆರ್ ದಾಖಲಾಗಿದೆ.
ವಂಚನೆ ಮತ್ತು ಫೋರ್ಜರಿ ಸೇರಿದಂತೆ ಸಿದ್ದರಾಮಯ್ಯ ಮತ್ತು ಇತರ ಆರೋಪಿಗಳ ವಿರುದ್ಧ ಸಿಆರ್‌ಪಿಸಿ ಕಾಯಿದೆ 166, 403, 120(ಬಿ), 406, 420, 465, 468, 340, 351 ಹಾಗೂ 09, ಬೇನಾಮೀ ಆಸ್ತಿ ವಹಿವಾಟು ಕಾಯಿದೆ 1988ರಡಿ ಹಾಗೂ ಕರ್ನಾಟಕ ಭೂಕಬಳಿಕೆ ನಿಷೇಧ ಕಾಯಿದೆ 211ರಡಿ ತನಿಖಾಧಿಕಾರಿ ಎಫ್‌ಐಆರ್ ದಾಖಲಿಸಿದ್ದಾರೆ.
ತನಿಖಾಧಿಕಾರಿಗೆ ಪೂರ್ಣ ಅಧಿಕಾರ
ನ್ಯಾಯಾಲಯದ ಆದೇಶದಂತೆ ತನಿಖಾಧಿಕಾರಿಗೆ ಪೂರ್ಣ ಅಧಿಕಾರವಿದ್ದು, ಅವರು, ಪ್ರಕರಣ ದಾಖಲಿಸಿದ ಸಂದರ್ಭದಲ್ಲೇ ಅಗತ್ಯ ಕಂಡುಬಂದರೆ, ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆಗೆ ಒಳಪಡಿಸಬಹುದು.
ತನಿಖೆ ಸಂದರ್ಭದಲ್ಲಿ ಆರೋಪಿ ಎಂದು ಕಂಡುಬಂದರೆ, ಹೆಚ್ಚಿನ ವಿಚಾರಣೆಗೆ ವಶಕ್ಕೆ ತೆಗೆದುಕೊಳ್ಳುವ ಅಧಿಕಾರವನ್ನು ನೀಡಿದೆ.
ಇದರ ಬೆನ್ನಲ್ಲೇ ತನಿಖಾಧಿಕಾರಿಗಳು ನಿನ್ನೆ ಕೇಂದ್ರ ಕಚೇರಿಗೆ ಧಾವಿಸಿ, ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ನಂತರ ಮೈಸೂರಿಗೆ ಹಿಂತಿರುಗಿ, ಇಂದು ಬೆಳಗ್ಗೆ ತಮ್ಮ ಗೊಂದಲ ನಿವಾರಿಸಿಕೊಳ್ಳಲು ಪತ್ರ ಮುಖೇನ, ಯಾವ ಕಾನೂನಿನಡಿ ತನಿಖೆ ನಡೆಸಬೇಕು ಎಂದು ಕೋರಿದರು.
156(3) ಅಡಿ ಪ್ರಕರಣ
ಮೈಸೂರು ಲೋಕಾಯುಕ್ತ ಪೋಲಿಸ್ ವರಿಷ್ಠರ ಪತ್ರಕ್ಕೆ ಎಡಿಜಿಪಿ ಮನೀಶ್, ನ್ಯಾಯಾಲಯದ ಆದೇಶದಂತೆ ಸಿಆರ್‌ಪಿಸಿ 156(3) ಅಡಿ ಪ್ರಕರಣ ದಾಖಲಿಸುವಂತೆ ಮೈಸೂರು ಲೋಕಾಯುಕ್ತ ತನಿಖಾಧಿಕಾರಿಗೆ ಆದೇಶ ಮಾಡಿದರು.
ತನಿಖಾಧಿಕಾರಿ ಬರೆದ ಪತ್ರ ಆಧಾರವಾಗಿಟ್ಟುಕೊಂಡು, ಕೇಂದ್ರ ಲೋಕಾಯುಕ್ತ ಕಚೇರಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮೊದಲ ಆರೋಪಿಯನ್ನಾಗಿ, ಪತ್ನಿ ಪಾರ್ವತಿ ಅವರನ್ನು ಎರಡನೇ ಆರೋಪಿಯಾಗಿ, ಮುಖ್ಯಮಂತ್ರಿ ಅವರ ಸಂಬಂಧಿ ಮಲ್ಲಿಕಾರ್ಜುನಸ್ವಾಮಿ ಅವರನ್ನು ಮೂರನೇ ಆರೋಪಿಯನ್ನಾಗಿ ಮಾಡಿದೆ.
ಮಲ್ಲಿಕಾರ್ಜುನಸ್ವಾಮಿ ನಾಲ್ಕನೇ ಆರೋಪಿ
ಮಲ್ಲಿಕಾರ್ಜುನಸ್ವಾಮಿ ಅವರಿಗೆ ಜಮೀನು ಮಾರಾಟ ಮಾಡಿದ ದೇವರಾಜ್ ಅವರನ್ನು ನಾಲ್ಕನೇ ಆರೋಪಿಯನ್ನಾಗಿ ಮಾಡಿ, ಐದನೇ ಸ್ಥಾನದಲ್ಲಿ ಹಗರಣದಲ್ಲಿ ಸಂಬಂಧ ಹೊಂದಿದ ಎಲ್ಲರ ವಿರುದ್ಧವೂ ಎಫ್‌ಐಆರ್ ದಾಖಲಿಸಿ ಎಂದು ಕೇಂದ್ರ ಕಚೇರಿ ತನಿಖಾಧಿಕಾರಿಗಳಿಗೆ ಸೂಚಿಸಿದೆ.
ಜನಪ್ರತಿನಿಧಿಗಳ ನ್ಯಾಯಾಲಯ ನೀಡಿರುವ ಆದೇಶದಂತೆ ನೀವು ನಡೆದುಕೊಳ್ಳಿ ಮುಡಾ ಹಗರಣದ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಹಳೇ ಕಾನೂನಿನಡಿಯೇ ಕ್ರಮ ಜರುಗಿಸಿ.
ಯಾವುದೇ ಒತ್ತಡಕ್ಕೆ ಮಣಿಯುವುದು ಬೇಡ, ಕಾನೂನಿನ ರೀತ್ಯ ಎಲ್ಲಾ ಕೋನಗಳಿಂದಲೂ ತನಿಖೆ ನಡೆಸಿ ಅಗತ್ಯ ಕಂಡುಬಂದರೆ, ನೀವು ಯಾರನ್ನಾದರೂ ವಶಕ್ಕೆ ಪಡೆದು ವಿಚಾರಣೆ ನಡೆಸಿ ಎಂದು ಆದೇಶಿಸಿದ್ದಾರೆ.
ದಾಖಲೆಗಳು ವಶಕ್ಕೆ
ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರರಿಂದಲೂ ಮಾಹಿತಿ ಪಡೆದುಕೊಳ್ಳಿ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಮುಖ್ಯಮಂತ್ರಿಗಳ ಕುಟುಂಬಕ್ಕೆ 14 ನಿವೇಶನಗಳ ಹಂಚಿಕೆಗೆ ಸಂಬಂಧಿಸಿದಂತೆ ದಾಖಲೆಗಳನ್ನು ನೀವು ವಶಕ್ಕೆ ಪಡೆಯಬಹುದು.
ಮಲ್ಲಿಕಾರ್ಜುನಸ್ವಾಮಿ ಅವರು ಖರೀದಿ ಮಾಡಿರುವ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆ ಮತ್ತು ನೋಂದಣಿ ಇಲಾಖೆ ಕಚೇರಿಯಲ್ಲೂ ಕಾನೂನು ಬದ್ಧವಾಗಿ ದಾಖಲೆಗಳನ್ನು ವಶಕ್ಕೆ ಪಡೆಯಬಹುದು.
ನ್ಯಾಯಾಲಯ ನೀಡಿರುವ ಗಡುವಿನೊಳಗೆ ನಿಮ್ಮ ತನಿಖೆ ಪೂರ್ಣಗೊಳಿಸಿ, ಸವಿಸ್ತಾರ ವರದಿ ನೀಡಿ ಎಂದು ಲೋಕಾಯುಕ್ತ ಕೇಂದ್ರ ಕಚೇರಿ ತನಿಖಾಧಿಕಾರಿಗಳಿಗೆ ಸಲಹೆ ಮಾಡಿದೆ.