’
ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಮುಡಾ ಹಗರಣದಿಂದ ಬಚಾವಾಗಲು ಪ್ರಯತ್ನಿಸಿದಷ್ಟೂ ಪಾಪದ ಕೂಪದೊಳಗೆ ಸಿಲುಕುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಟುವಾಗಿ ಟೀಕಿಸಿದ್ದಾರೆ.
ಮುಡಾ ಹಗರಣದಲ್ಲಿ ರಾಜ್ಯ ಹೈಕೋರ್ಟ್ ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿ ಸರಿಯಾಗಿದೆ ಎಂದ ಬೆನ್ನಲ್ಲೇ, ಜನಪ್ರತಿನಿಧಿಗಳ ನ್ಯಾಯಾಲಯ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸಿ ಮೂರು ತಿಂಗಳಲ್ಲಿ ವರದಿ ನೀಡುವಂತೆ ಆದೇಶಿಸಿತು.
ಸಿಬಿಐ ಪ್ರವೇಶ ನಿಷೇಧ
ಇದರ ಹಿಂದೆಯೇ ಸಂಪುಟ ಸಭೆ ನಡೆಸಿ ರಾಜ್ಯದೊಳಗೆ ಸಿಬಿಐ ಪ್ರವೇಶ ಮಾಡದಂತೆ ಸಿದ್ದರಾಮಯ್ಯ ಸರ್ಕಾರ ಕಾನೂನಿನ ನಿಷೇಧ ಹೇರಿಬಿಟ್ಟಿತು.
ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ, ಟ್ವೀಟ್ ಮಾಡಿ ಮುಖ್ಯಮಂತ್ರಿ ಅವರ ದುಸ್ಸಾಹಸಗಳನ್ನು ಕಟುವಾದ ಪದಗಳಿಂದ ಟೀಕಿಸಿದ್ದಾರೆ.
ಲೋಕಾಯುಕ್ತವೇ ಗತಿ
ಕುಮಾರಸ್ವಾಮಿ ಅವರ ಪದಗಳ ಮೊನಚು ಹೀಗಿದೆ.., ’ಸಿದ್ದರಾಮಯ್ಯನವರೇ, ನಿಮ್ಮ ’ಸಿದ್ವಿಲಾಸ’ಕ್ಕೆ ಉಘೇ ಉಘೇ ಎನ್ನಲೇಬೇಕು, ಅಂದು, ಹಗರಣಗಳಿಂದ ಪಾರಾಗಲು ಲೋಕಾಯುಕ್ತಕ್ಕೇ ಸಮಾಧಿ ಕಟ್ಟಿ ಎಸಿಬಿ ರಚನೆ ಮಾಡಿಕೊಂಡಿರಿ, ಇಂದು, ಮುಡಾ ಹಗರಣದಿಂದ ಬಚಾವಾಗಲು ನಿಮಗೀಗ ಅದೇ ಲೋಕಾಯುಕ್ತವೇ ಗತಿ’.
’ಕರ್ಮ ಹಿಟ್ ಬ್ಯಾಕ್’ ಅಂದರೇ ಇದೇ ಅಲ್ಲವೇ ಸಿದ್ದರಾಮಯ್ಯನವರೇ ಎಂದು ಮೂದಲಿಸಿದ್ದಾರೆ.
’ನಿಮ್ಮ ಗ್ರಹಚಾರಕ್ಕೆ ಎಸಿಬಿಯನ್ನೂ ಹೈಕೋರ್ಟ್ ಬರ್ಖಾಸ್ತು ಮಾಡಿಬಿಟ್ಟಿತು, ಈಗ ಲೋಕಾಯುಕ್ತವನ್ನೇ ಗುರಾಣಿ ಮಾಡಿಕೊಂಡು, ಸಿಬಿಐ ರಾಜ್ಯ ಪ್ರವೇಶಕ್ಕೆ ಸಂಪುಟದಿಂದ ಬಾಗಿಲು ಬಂದ್ ಮಾಡಿಸಿದ್ದೀರಿ’.
ಇನ್ನೊಂದೇ ಹೆಜ್ಜೆ ಬಾಕಿ
’ಅಲ್ಲಿಗೆ ಆರೋಪಿ ಅಪರಾಧಿಯಾದ ಎಂದೇ ಲೆಕ್ಕ, ’ಸಿದ್ದಾಪರಾಧ’ ಸಾಬೀತಿಗೆ ಇನ್ನೊಂದೇ ಹೆಜ್ಜೆ ಬಾಕಿ’.
’ನಾನು ಭಾವಿಸಿದಷ್ಟು ಧೈರ್ಯವಂತರಲ್ಲ ನೀವು, ನಿಮಗೂ ಭಯವಿದೆsss, ಅದೇ ಈ ನೆಲದ ಕಾನೂನಿನ ಶಕ್ತಿ, ಏನಂತೀರಿ, ಮುಡಾ ಸಿದ್ವಿಲಾಸ’ ಎಂದು ಟ್ವೀಟ್ ಮಾಡಿದ್ದಾರೆ.