ಹುಬ್ಬಳ್ಳಿ:ಮುಡಾ ನಿವೇಶನಗಳನ್ನು ವಾಪಸ್ ಕೊಡುವ ಮೂಲಕ ಮತ್ತಷ್ಟು ಸಂಕಷ್ಟವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಮೇಲೆ ಎಳೆದುಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಧರ್ಮಪತ್ನಿ ಮುಡಾ ಸೈಟ್ ವಾಪಸ್ ನೀಡುವುದನ್ನು ಮೊದಲೇ ಮಾಡಬೇಕಿತ್ತು, ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆ ಮಾಡಿಸಿದ್ದರೆ ಮುಖ್ಯಮಂತ್ರಿಗಳ ಪ್ರಾಮಾಣಿಕತೆ ಪ್ರಶ್ನೆ ಬರುತ್ತಿರಲಿಲ್ಲ, ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟು, ಪ್ರಕರಣ ದಾಖಲಾಗಿ, ತನಿಖೆ ನಡೆದಿದೆ, ಈಗ ನಿವೇಶನ ವಾಪಸ್ ಮಾಡುವುದರಿಂದ ಹಲವು ಪ್ರಶ್ನೆಗಳು ಉದ್ಭವಿಸಿವೆ ಎಂದರು.
ತನಿಖೆ ಆಗಲೇಬೇಕು
ಎಫ್ಐಆರ್ ದಾಖಲಾದ ಮೇಲೆ ತನಿಖೆ ಆಗಲೇಬೇಕು, ಒಂದು ಕಡೆ ಲೋಕಾಯುಕ್ತ ತನಿಖೆ, ಮತ್ತೊಂದೆಡೆ ಇ.ಡಿ. ತನಿಖೆ ನಡೆಯುತ್ತಿದೆ.
ಕಾಂಗ್ರೆಸ್ ನಾಯಕರು ತಪ್ಪೇ ನಡೆದಿಲ್ಲ ಅನ್ನುತ್ತಿದ್ದರು, 14 ನಿವೇಶನಗಳನ್ನು ವಾಪಸ್ ಕೊಟ್ಟು ತಪ್ಪಾಗಿರುವುದನ್ನು ಒಪ್ಪಿಕೊಂಡಿರುವುದಲ್ಲದೆ, ಕಾನೂನುಬಾಹಿರವಾಗಿ ನಿವೇಶನ ಹಂಚಿಕೆಯಾಗಿದೆ ಎಂಬುದನ್ನು ಅವರೇ ಒಪ್ಪಿಕೊಂಡಂತೆ ಆಗಿದೆ.
ಈ ಹಿಂದೆ ಯಡಿಯೂರಪ್ಪ ನಿವೇಶನ ವಾಪಸ್ ಮಾಡಿದಾಗ, ಸಿದ್ದರಾಮಯ್ಯ ಏನು ಹೇಳಿದ್ದರು ನೆನಪಿಸಿಕೊಳ್ಳಲಿ, ’ಯಡಿಯೂರಪ್ಪ ಸೈಟ್ ವಾಪಸ್ ಮಾಡುವ ಮೂಲಕ ತಪ್ಪನ್ನು ಒಪ್ಪಿಕೊಂಡಿದ್ದಾರೆ’ ಅಂತ ಹೇಳಿದ್ದರು, ಈಗ ಇದೇ ಮಾತು ಸಿದ್ದರಾಮಯ್ಯ ಅವರಿಗೂ ಅನ್ವಯ ಆಗುತ್ತದೆ ಎಂದರು.