ಬೆಂಗಳೂರು:ಪಕ್ಷದಲ್ಲಿದ್ದುಕೊಂಡೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಚಾವ್ ಮಾಡಲು ಹೊರಟಿರುವ ತಂಡವನ್ನು ಹೊರಹಾಕಿ ಎಂಬ ಕೂಗು ರಾಜ್ಯ ಬಿಜೆಪಿಯಲ್ಲಿ ಎದ್ದಿದೆ.
ಕೇಂದ್ರದ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಶಾಸಕರಾದ ರಮೇಶ್ ಜಾರಕಿಹೊಳಿ, ಬಿ.ಪಿ.ಹರೀಶ್, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್ ಅವರುಗಳ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪರ ಬಣ ತಿರುಗಿಬಿದ್ದಿದೆ.
ವರಿಷ್ಠರಿಗೆ ಒತ್ತಾಯ
ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ಡು ಅವರ ನಿವಾಸದಲ್ಲಿ ಸಭೆ ಸೇರಿದ್ದ ಈ ಬಣ, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವವರ ಮೇಲೆ ಕ್ರಮ ಕೈಗೊಳ್ಳಿ ಎಂದು ವರಿಷ್ಠರನ್ನು ಒತ್ತಾಯಿಸಿದೆ.
ವರಿಷ್ಠರಿಂದ ನೇಮಿಸಲ್ಪಟ್ಟ ರಾಜ್ಯಾಧ್ಯಕ್ಷರನ್ನು ಪ್ರಶ್ನಿಸುವುದೆಂದರೆ ವರಿಷ್ಠರನ್ನೇ ಪ್ರಶ್ನಿಸಿದಂತೆ, ಹಿರಿಯರಾದ ಬಸನಗೌಡ ಪಾಟೀಲ್ ಯತ್ನಾಳ್, ನಮ್ಮ ರಾಜ್ಯಾಧ್ಯಕ್ಷ ವಿಜಯೇಂದ್ರರ ಬಗ್ಗೆ ಪ್ರಸ್ತಾಪ ಮಾಡುತ್ತಾರೆ, ಅನಗತ್ಯವಾಗಿ ಚರ್ಚೆಗಳನ್ನು ಮಾಡುತ್ತಿದ್ದಾರೆ, ಅವರಿಗೆ ಅನುಭವ ಇಲ್ಲ, ಚಿಕ್ಕವರು ಎಂದೆಲ್ಲ ಮಾತನಾಡುತ್ತಾರೆ.
ರಾಜ್ಯಾಧ್ಯಕ್ಷರಿಗೆ ಮಾನಸಿಕ ಕಿರಿಕಿರಿ
ರಾಜ್ಯಾಧ್ಯಕ್ಷರಿಗೆ ಮಾನಸಿಕ ಕಿರಿಕಿರಿ ಉಂಟು ಮಾಡುವ ಉದ್ದೇಶ ಯತ್ನಾಳ್ ಅವರದು, ಇದು ಎಷ್ಟರ ಮಟ್ಟಿಗೆ ಸರಿ, ಹಿಂದೆ ಎ.ಕೆ.ಸುಬ್ಬಯ್ಯ ಅವರು 42 ರಿಂದ 44 ವರ್ಷದವರಿದ್ದಾಗ ಪಕ್ಷದ ಅಧ್ಯಕ್ಷರಾಗಿದ್ದರು, ಯಡಿಯೂರಪ್ಪ ಅಧ್ಯಕ್ಷರಾದಾಗ ಅವರಿಗೆ 48 ವರ್ಷ, ಈಗ ವಿಜಯೇಂದ್ರರಿಗೆ 49ರಿಂದ 50 ವರ್ಷ, ಇವರು ಹೇಗೆ ಕಿರಿಯರಾಗುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಯಡಿಯೂರಪ್ಪ ಅವರ ಮಗ ಎಂಬ ಕಾರಣಕ್ಕೆ ವಿಜಯೇಂದ್ರ ಅವರನ್ನು ಒಪ್ಪುವುದಿಲ್ಲ ಎನ್ನುತ್ತಾರೆ, ಯತ್ನಾಳ್‌ರಲ್ಲೇ ಒಂದಷ್ಟು ಗೊಂದಲಗಳಿವೆ, ವಿಜಯೇಂದ್ರರನ್ನು ರಾಜ್ಯದ ಅಧ್ಯಕ್ಷರನ್ನಾಗಿ ಮಾಡುವ ಸಂದರ್ಭದಲ್ಲಿ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು, ಕೇಂದ್ರ ಗೃಹ ಸಚಿವ ಅಮಿತ್ ಷಾ, ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆ ಪಡೆದು ನೇಮಕ ಮಾಡಿದ್ದಾರೆ.
ನೇಮಕ ಮಾಡುವಾಗ ರಾಜ್ಯ ಬಿಜೆಪಿ ಹಿರಿಯ ಮುಖಂಡರ, ಕಾರ್ಯಕರ್ತರ ಅಭಿಪ್ರಾಯವನ್ನೂ ಪಡೆದಿದ್ದಾರೆ.
ಯತ್ನಾಳ್ ತಂಡ ವರಿಷ್ಠರ ಭೇಟಿ ಮಾಡಲಿ
ಯತ್ನಾಳ್ ತಂಡಕ್ಕೆ ಭಿನ್ನಾಭಿಪ್ರಾಯವಿದ್ದರೆ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡಿ ಸಲಹೆ, ಸೂಚನೆ ಕೊಡಬೇಕು, ಸಮಸ್ಯೆಗಳನ್ನು ಚರ್ಚಿಸಬೇಕು, ಅದು ಬಿಟ್ಟು, ರಸ್ತೆಯಲ್ಲಿ, ಹೋದಲ್ಲಿ-ಬಂದಲ್ಲಿ, ಯಾವ್ಯಾವುದೋ ಸಭೆಗೆ ಹೋದಾಗ ಮಾತನಾಡುವುದು ಸರಿಯಲ್ಲ.
ಮುಡಾ ಹಗರಣದಲ್ಲಿ ಸಿಲುಕಿರುವ ಸಿದ್ದರಾಮಯ್ಯ ಪರ ಪರೋಕ್ಷವಾಗಿ ಮಾತನಾಡುವ ಮೂಲಕ ಬಿಜೆಪಿ ಹೋರಾಟದಲ್ಲಿ ಭಿನ್ನಮತ ಇದೆ ಎಂಬಂತೆ ಬಿಂಬಿಸಲು ಹೊರಟಿದ್ದಾರೆ.
ಅವರಿಗೆ ಸಿದ್ದರಾಮಯ್ಯ ಅವರಿಗಿಂತ ವಿಜಯೇಂದ್ರ ಅವರೇ ಟಾರ್ಗೆಟ್ ಆಗಿದ್ದಾರೆ, ಇನ್ನು ಮುಂದಾದರೂ ಇದನ್ನು ಬಿಟ್ಟು ವರಿಷ್ಠರ ಸಲಹೆ, ಸೂಚನೆಗಳಂತೆ ನಡೆಯಲಿ.
ನಮಗೆ ವ್ಯಕ್ತಿಯಲ್ಲ, ಪಕ್ಷ ಮುಖ್ಯ ಎಂದಿರುವ ಬಣ, ಈ ಎಲ್ಲಾ ಬೆಳವಣಿಗೆಗಳನ್ನು ವರಿಷ್ಠರ ಗಮನಕ್ಕೆ ತಂದು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲು ನಿರ್ಧರಿಸಿದೆ.