ಬೆಂಗಳೂರು:ಮುಡಾ ಬಿಡಿ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ.) ನೋಟಿಸ್ ಜಾರಿ ಮಾಡಿದೆ.
ಇ.ಡಿ. ಅಧಿಕಾರಿಗಳು ಇಂದು ಬೆಳಗ್ಗೆ ಅವರ ಖಾಸಗಿ ನಿವಾಸಕ್ಕೆ ತೆರಳಿ ನೋಟಿಸ್ ನೀಡಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.
ದಸರಾ ನಂತರ ವಿಚಾರಣೆ
ದಸರಾ ಹಬ್ಬದ ನಂತರ ಕಚೇರಿಗೆ ಬಂದು ವಿಚಾರಣೆಗೆ ಹಾಜರಾಗುವುದಾಗಿ ಸಚಿವರು ತಿಳಿಸಿದ್ದಾರಂತೆ.
ಆದರೆ, ಇದನ್ನು ಅಲ್ಲಗಳೆದಿರುವ ಬೈರತಿ ಸುರೇಶ್, ನನಗೆ ಇ.ಡಿ.ಯಿಂದ ಯಾವುದೇ ನೋಟಿಸ್ ಬಂದಿಲ್ಲ, ಇದು ಮಾಧ್ಯಮದವರ ಸೃಷ್ಟಿ ಎಂದಿದ್ದಾರೆ.
ವರುಣಾ ಹಾಗೂ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 350 ಕೋಟಿ ರೂ.ಗಳಿಗೂ ಹೆಚ್ಚು ಹಣ ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇ.ಡಿ. ಈಗಾಗಲೇ ನೋಟಿಸ್ ಜಾರಿ ಮಾಡಿದೆ.
ಸಚಿವರ ಪಾತ್ರ ಆರೋಪ
ಇಲಾಖೆ ಹೊಣೆ ಹೊತ್ತಿರುವ ನಗರಾಭಿವೃದ್ಧಿ ಸಚಿವರು, ಅಧಿಕಾರ ವಹಿಸಿಕೊಂಡ ನಂತರ ಈ ಹಣವನ್ನು ಎರಡು ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳಿಗೆ ಬಿಡುಗಡೆ ಮಾಡುವಲ್ಲಿ ಸಚಿವರ ಪಾತ್ರ ಇದೆ ಎಂಬ ಆರೋಪವಿದೆ.
ಅಷ್ಟೇ ಅಲ್ಲ, ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಬಿಡಿ ನಿವೇಶನಗಳ ಹಂಚಿಕೆಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಸಚಿವರಿಂದ ಮಾಹಿತಿ ಪಡೆಯಲು ಇ.ಡಿ. ಮುಂದಾಗಿದೆ.
ಮುಖ್ಯಮಂತ್ರಿ ಅವರ ಕುಟುಂಬ 14 ನಿವೇಶನಗಳನ್ನು ಪಡೆದಿದ್ದರು ಎಂಬ ಮಾಹಿತಿ ಹೊರಬಂದು ರಾಜಕೀಯ ವಲಯದಲ್ಲಿ ಅಲ್ಲೋಲ-ಕಲ್ಲೋಲವಾದ ನಂತರ ಇದರ ಶಮನಕ್ಕೆ ನಗರಾಭಿವೃದ್ಧಿ ಸಚಿವರು ಪ್ರವೇಶ ಮಾಡಿದ್ದರು.
ಕಚೇರಿಯಲ್ಲಿ ಇಡೀ ದಿನ ಬಿಡಾರ
ಬಿಡಿ ನಿವೇಶನ ಹಂಚಿಕೆ ವಿಷಯ ಅತಿರೇಕಕ್ಕೆ ಹೋಗುತ್ತಿದ್ದಂತೆ ಮುಡಾ ಕಚೇರಿಯಲ್ಲಿ ಇಡೀ ದಿನ ಬಿಡಾರ ಹೂಡಿದ ಸಚಿವರು ಅಧಿಕಾರಿಗಳ ಜೊತೆ ಕಡತಗಳನ್ನು ಪರಿಶೀಲಿಸಿದ್ದಲ್ಲದೆ, ಕೆಲವು ಪ್ರಮುಖ ಕಡತಗಳನ್ನು ಬೆಂಗಳೂರಿಗೆ ರವಾನಿಸಿದ್ದರೆಂಬ ಆರೋಪ ಕೇಳಿಬಂದಿತ್ತು.
ತದನಂತರ ಪ್ರಮುಖ ಕಡತಗಳಲ್ಲಿನ ಕೆಲವು ಸಾಲುಗಳಿಗೆ ವೈಟ್ನರ್ ಬಳಿದು ಹಗರಣಗಳನ್ನು ಮುಚ್ಚಿಹಾಕುತ್ತಿದ್ದಾರೆಂಬ ಆರೋಪ ಬಿಜೆಪಿ ಮುಖಂಡರು ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೊರಿಸಿದ್ದರು.
ಹೈಕೋರ್ಟ್ ಹಾಗೂ ಜನಪ್ರತಿನಿಧಿಗಳ ನ್ಯಾಯಾಲಯ ಮುಖ್ಯಮಂತ್ರಿ ಕುಟುಂಬ ಪಡೆದ ನಿವೇಶನಗಳ ಕುರಿತಂತೆ ತನಿಖೆಗೆ ಆದೇಶಿಸಿದ ನಂತರ ಇ.ಡಿ. ಮಧ್ಯಪ್ರವೇಶ ಮಾಡಿದೆ.
ಇದು ಮುಂದಿನ ದಿನಗಳಲ್ಲಿ ಯಾವ ಯಾವ ಸ್ವರೂಪ ಪಡೆಯುತ್ತದೆ ಎಂದು ಕಾದು ನೋಡಬೇಕಿದೆ.