ಬೆಂಗಳೂರು:ರಾಜ್ಯಪಾಲರು ಮತ್ತು ನ್ಯಾಯಾಲಯ ನಾನು ತಪ್ಪಿತಸ್ಥ ಅಲ್ಲ ಎಂಬ ತೀರ್ಪು ನೀಡಿದ್ದರೂ ನಾಲ್ಕು ಸಚಿವರು ಭೂಕಬಳಿಕೆದಾರ ಎನ್ನುವ ಮೂಲಕ ನ್ಯಾಯಾಲಯಕ್ಕಿಂತ ದೊಡ್ಡವರೆಂದು ಪ್ರತಿಪಾದಿಸಲು ಹೊರಟಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ನಾಲ್ವರು ಸಚಿವರು ಕಳಂಕ ಸೃಷ್ಟಿಸಲು ಹಳೆಯ ಪ್ರಕರಣ ಕೆದಕುತ್ತಿದ್ದಾರೆ, ನೈತಿಕತೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರಂತೆ ಅರಿಶಿನ-ಕುಂಕುಮದ ಮೂಲಕ ಭೂಮಿ ಬಂದಿಲ್ಲ, ಹಣ ಕೊಟ್ಟು ಭೂಮಿ ಖರೀದಿ ಮಾಡಿದ್ದೇನೆ ಎಂದರು.
ಪ್ರಕರಣ ತನಿಖೆಗೆ ವಹಿಸಲಿಲ್ಲ
ಪ್ರಕರಣ ಕುರಿತು ಆರೋಪ ಕೇಳಿಬಂದಾಗ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕೇಂದ್ರ ಸರ್ಕಾರವೇ ನೇಮಿಸಿದ ಹಂಸರಾಜ್ ಭಾರದ್ವಾಜ್ ರಾಜ್ಯದಲ್ಲಿ ರಾಜ್ಯಪಾಲರಾಗಿದ್ದರು, ಅವರು ಪ್ರಕರಣವನ್ನು ತನಿಖೆಗೆ ವಹಿಸಲಿಲ್ಲ.
ನ್ಯಾಯಾಲಯವೂ ಪ್ರಕರಣದ ತನಿಖೆಗೆ ಆದೇಶಿಸಲಿಲ್ಲ, ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಡಾ ಹಗರಣದ ತನಿಖೆ ನಡೆಬೇಕೆಂಬುದಾಗಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ, ತೀರ್ಪಿನಿಂದ ಭಯಗೊಂಡು ನಿವೇಶನಗಳನ್ನು ಹಿಂದಿರುಗಿಸಿದ್ದಾರೆ.
ನಾನು ಕೋರ್ಟ್ ಆದೇಶ ಬರುವ ಮುನ್ನವೇ ನಿವೇಶನ ಹಿಂದಿರುಗಿಸಿದ್ದೆ, ಕೋರ್ಟ್ ನನ್ನನ್ನು ಆಪಾದಿತ ಎಂದು ಹೇಳಿರಲಿಲ್ಲ, ಜನಪ್ರತಿನಿಧಿಗಳ ನ್ಯಾಯಾಲಯದಲ್ಲೂ ಆರೋಪ ಮುಕ್ತ ಮಾಡಲಾಗಿದೆ, ಸಿದ್ದರಾಮಯ್ಯ ಇನ್ನೂ ಆರೋಪ ಮುಕ್ತವಾಗಿಲ್ಲ, ಈ ದೇಶದಲ್ಲಿ ಕೋರ್ಟ್ ದೊಡ್ಡದೋ, ಕಾಂಗ್ರೆಸ್ ದೊಡ್ಡದೋ ಎಂದು ಪ್ರಶ್ನಿಸಿದರು.
ಬೇನಾಮಿ ಹೇಗಾಗುತ್ತೆ
ಸಚಿವ ಕೃಷ್ಣ ಭೈರೇಗೌಡ ಅವರ ಕೋಲಾರ ಆಸ್ತಿಗಳೆಲ್ಲವೂ ಕುಟುಂಬದಿಂದ ಬಂದಿದೆ, ಅದೇ ರೀತಿ ಮುನಿವೆಂಕಟಪ್ಪ ಅವರು ವಿಲ್ ಮೂಲಕ ಮಕ್ಕಳಿಗೆ ಆಸ್ತಿ ಕೊಟ್ಟಿದ್ದಾರೆ, ಆ ಕುಟುಂಬದಲ್ಲಿ ಸುಮಾರು ೨೦ ಜನರಿದ್ದು, ನನ್ನ ಹೆಸರಿಗೆ ನೋಂದಣಿಯಾದಾಗ ಎಲ್ಲಾ ೨೦ ಮಂದಿ ಸಹಿ ಮಾಡಿದ್ದಾರೆ, ಇದು ಬೇನಾಮಿ ಹೇಗಾಗುತ್ತೆ.
1995ರ ಪಹಣಿಯಲ್ಲಿ ಇಡೀ ಕುಟುಂಬದವರ ಹೆಸರಿದೆ, ಇದು ಬಿಡಿಎ ಭೂಮಿ, ಬಿ.ಎಸ್.ಯಡಿಯೂರಪ್ಪ ಅಕ್ರಮವಾಗಿ ಡಿ-ನೋಟಿಫೈ ಮಾಡಿದ್ದಾರೆ ಎಂದು ಸಚಿವರುಗಳು ಸುಳ್ಳು ಆರೋಪ ಮಾಡುತ್ತಿದ್ದಾರೆ.
ಸುಮಾರು ಒಂದು ಎಕರೆ ಜಾಗ, ಹೊರವರ್ತುಲ ರಸ್ತೆಯ ಪಕ್ಕದಲ್ಲಿದೆ, ರಸ್ತೆಗೆ ಅಗತ್ಯವಿರುವ ಭೂಮಿ ಪಡೆದು, ಉಳಿದಿದ್ದನ್ನು ಡಿ-ನೋಟಿಫೈ ಮಾಡಲು ತೀರ್ಮಾನಿಸಲಾಗಿತ್ತು ಎಂಬುದಾಗಿ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹೇಳಿದ್ದರು.
70:30ರ ಅನುಪಾತದಲ್ಲಿ ಹಂಚಿಕೆ
ಭೂಮಿ 70:30ರ ಅನುಪಾತದಲ್ಲಿ ಹಂಚಿಕೆಯಾಗಿದೆ. ಅಂದರೆ 70% ಸರ್ಕಾರಕ್ಕೆ ಹಾಗೂ 30% ಮಾಲೀಕರಿಗೆ ನೀಡಲಾಗಿದೆ, ಅಂದರೆ ಬಿಡಿಎಗೆ ಹೆಚ್ಚು ಲಾಭವಾಗಿದೆ, ಉಳಿದ ಜಮೀನು ಅಗತ್ಯವಿಲ್ಲವೆಂದು ಸರ್ಕಾರವೇ ವಾಪಸ್ ನೀಡಿದೆ.
ಬಿಡಿಎ ಸ್ವತಃ ಭೂ ಮಾಲೀಕರಿಗೆ ಪತ್ರ ಬರೆದು ಭೂಮಿ ಬಿಟ್ಟುಕೊಟ್ಟಿದೆ, ಇಲ್ಲಿ ಎಲ್ಲವೂ ಕಾನೂನು ಪ್ರಕಾರವೇ ನಡೆದಿದೆ, ತನಿಖೆಗೆ ಅನುಮತಿ ಕೋರಿ ಅಂದಿನ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರನ್ನು ಕೋರಲಾಗಿತ್ತು, ಆದರೆ, ತನಿಖೆಗೆ ಅವಕಾಶ ನೀಡಲಿಲ್ಲ ಎಂದರು.