ಕೊಪ್ಪಳ:ಜಾತಿ ಗಣತಿ ವರದಿ ಸ್ವೀಕರಿಸಿದ್ದು, ಇಲಾಖಾ ಸಚಿವರು ಮತ್ತು ಸಂಪುಟ ಸಭೆಯಲ್ಲಿರಿಸಿ ಚರ್ಚೆ ನಂತರ ಜಾರಿ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಗಣತಿ ಜಾರಿ ಬಗ್ಗೆ ಶಾಸಕ ಬಸವರಾಜ ರಾಯರೆಡ್ಡಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ, ಮುಂದಿನ ವಾರ ಹಿಂದುಳಿದ ವರ್ಗಗಳ ಇಲಾಖಾ ಸಚಿವರ ಜೊತೆ ಚರ್ಚೆ ನಡೆಸಲಾಗುವುದು ಎಂದರು.
ಒಳಮೀಸಲಾತಿ
ಒಳಮೀಸಲಾತಿ ಜಾರಿ ಬಗ್ಗೆ ಸರ್ವೋಚ್ಛ ನ್ಯಾಯಾಲಯ ಆದೇಶ ನೀಡಿದೆ, ಈ ಸಂಬಂಧ ಸಚಿವ ಸಂಪುಟದಲ್ಲಿ ಹಾಗೂ ಪಕ್ಷದ ವರಿಷ್ಠರೊಂದಿಗೆ ಚರ್ಚೆ ನಡೆಸಲಾಗುವುದು.
ಸಿದ್ದರಾಮಯ್ಯ ಪರ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಜಿ.ಟಿ.ದೇವೇಗೌಡ ಜೆಡಿಎಸ್ ಪಕ್ಷದ ಕೋರ್ ಕಮಿಟಿ ಅಧ್ಯಕ್ಷರಾಗಿದ್ದು, ಹೇಳಿಕೆ ಸರಿಯಾಗಿಯೇ ಇರುತ್ತದೆ, ಬಿಜೆಪಿ ಮತ್ತು ಜೆಡಿಎಸ್‌ನವರಿಗೆ ನಾನು ಅಧಿಕಾರದಲ್ಲಿದ್ದರೆ, ಅವರ ಪಕ್ಷಗಳು ದುರ್ಬಲವಾಗುವ ಭಯ ಕಾಡುತ್ತಿದೆ ಎಂದರು.
ಸಚಿವ ಸತೀಶ್ ಜಾರಕಿಹೊಳಿ ಪಕ್ಷದ ವರಿಷ್ಠರನ್ನು ಭೇಟಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿ, ಎಐಸಿಸಿ ಅಧ್ಯಕ್ಷರಾಗಿರುವ ಖರ್ಗೆ ಅವರನ್ನು ಸಚಿವರಾಗಿರುವ ಸತೀಶ್ ಜಾರಕಿಹೊಳಿ ಭೇಟಿಯಾಗುವುದರಲ್ಲಿ ತಪ್ಪೇನಿಲ್ಲ, ಇಲ್ಲ-ಸಲ್ಲದ ಊಹಾಪೋಹಗಳಿಗೆ ಅವಕಾಶ ನೀಡಬಾರದು ಎಂದರು.