ಬೆಂಗಳೂರು:ರಾಷ್ಟ್ರ ರಾಜಕಾರಣದಿಂದ ರಾಜ್ಯಕ್ಕೆ ಹಿಂತಿರುಗಿ ಮುಖ್ಯಮಂತ್ರಿ ಗಾದಿ ಪಡೆಯುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮನವಿ ಮಾಡಿದ್ದಾರೆ.
ಮುಡಾ ಹಗರಣದಲ್ಲಿ ಸಿಲುಕಿರುವ ಸಿದ್ದರಾಮಯ್ಯ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ಯಾವುದೇ ಕ್ಷಣದಲ್ಲಿ ಪ್ರವೇಶಿಸಲಿದ್ದು ಇದರಿಂದ ನಾಯಕತ್ವ ಮತ್ತು ಸರ್ಕಾರ ಇಕ್ಕಟ್ಟಿಗೆ ಸಿಲುಕಲಿದೆ.
ಸಿದ್ದರಾಮಯ್ಯ ಸ್ಥಾನ ತ್ಯಜಿಸುವ ಸಾಧ್ಯತೆ
ಇಂತಹ ಸನ್ನಿವೇಶದಲ್ಲಿ ಸಿದ್ದರಾಮಯ್ಯ ಅವರ ರಾಜೀನಾಮೆ ಪಡೆಯಲು ವರಿಷ್ಠರು ಮುಂದಾಗುತ್ತಾರೆ, ಇಲ್ಲವೇ ಸಿದ್ದರಾಮಯ್ಯ ಅವರೇ ತಮ್ಮ ಸ್ಥಾನ ತ್ಯಜಿಸುವ ಸಾಧ್ಯತೆ ಇದೆ.
ಇದರ ಬೆನ್ನಲ್ಲೇ ಪ್ರದೇಶ ಕಾಂಗ್ರೆಸ್‌ನಲ್ಲಿ ನಾಯಕತ್ವಕ್ಕಾಗಿ ಬಣ ರಾಜಕೀಯ ಸಭೆಗಳು ಗೌಪ್ಯವಾಗಿ ಆರಂಭಗೊಂಡಿವೆ.
ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಸೇರಿದ ಸಚಿವರುಗಳು ಈಗಾಗಲೇ ಸಮಾಜ ಕಲ್ಯಾಣ ಸಚಿವ ಮಹದೇವಪ್ಪ ನಿವಾಸದಲ್ಲಿ ಸಭೆ ನಡೆಸಿ, ಪರ್ಯಾಯ ನಾಯಕತ್ವ ನಮ್ಮ ಸಮುದಾಯದಲ್ಲೇ ಇರಬೇಕೆಂಬ ತೀರ್ಮಾನ ಕೈಗೊಂಡಿದೆ.
ನಾಯಕನ ಅನ್ವೇಷಣೆ
ಮತ್ತೊಂದೆಡೆ ವರಿಷ್ಠರು ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಮಾದರಿಯ ನಾಯಕನ ಆಯ್ಕೆಗೆ ಅನ್ವೇಷಣೆ ನಡೆಸಿದೆ.
ಮುಖ್ಯಮಂತ್ರಿ ಗಾದಿ ತಮಗೇ ಸಿಗುವುದೆಂಬ ವಿಶ್ವಾಸದಲ್ಲಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣಜೀತ್ ಸಿಂಗ್ ಸುರ್ಜೇವಾಲ ಜೊತೆ ಸಂಪರ್ಕದಲ್ಲಿದ್ದಾರೆ.
ಆಶ್ಚರ್ಯವೆಂದರೆ ಸಿದ್ದರಾಮಯ್ಯ ಬಣದವರೆಂದೇ ಗುರುತಿಸಿಕೊಂಡಿರುವ ಪರಿಶಿಷ್ಟ ಜಾತಿ ಮತ್ತು ವರ್ಗದ ಸಚಿವರಲ್ಲಿ ಒಬ್ಬರಾದ ಜಾರಕಿಹೊಳಿ, ನಿನ್ನೆ ದಿಢೀರನೆ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ವರಿಷ್ಠರ ಭೇಟಿ-ಚರ್ಚೆ
ನಿನ್ನೆ ರಾತ್ರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಮುಖಾಮುಖಿ ಚರ್ಚೆ ನಡೆಸಿದ ಸಚಿವರು ಇಂದು ಬೆಳಗ್ಗೆ ಎಐಸಿಸಿ ಅಧ್ಯಕ್ಷ ಖರ್ಗೆ ಅವರ ಜೊತೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚಿಸಿದ್ದಾರೆ.
ಬಿಜೆಪಿ ದಾಳಕ್ಕೆ ಸಿದ್ದರಾಮಯ್ಯ ಅವರನ್ನು ಬಲಿ ಮಾಡುವುದು ಬೇಡ ಎಂದಿರುವ ಸತೀಶ್, ಒಂದು ವೇಳೆ ಕಾನೂನಿನ ಚೌಕಟ್ಟಿಗೆ ಸಿಲುಕಿದರೆ ಅಂತಹ ಸನ್ನಿವೇಶದಲ್ಲಿ ಪರಿಶಿಷ್ಟ ಸಮುದಾಯಕ್ಕೆ ಅವಕಾಶ ಮಾಡಿ.
ಇಂತಹ ಸಂದರ್ಭದಲ್ಲಿ ನೀವೇ ಕರ್ನಾಟಕ ರಾಜಕೀಯಕ್ಕೆ ಹಿಂತಿರುಗಿ ಮುಖ್ಯಮಂತ್ರಿ ಸ್ಥಾನ ವಹಿಸಿಕೊಳ್ಳಿ, ಇದರಿಂದ ಕಾಂಗ್ರೆಸ್‌ಗೆ ಮತ್ತಷ್ಟು ಬಲ ಬರಲಿದೆ, ಜೊತೆಗೆ ಪೂರ್ಣಾವಧಿ ಸರ್ಕಾರ ನೀಡಲು ಸಾಧ್ಯ ಎಂದು ಮನವಿ ಮಾಡಿಕೊಂಡಿದ್ದಾರೆ.
ಸಿದ್ದರಾಮಯ್ಯ ಬಣಕ್ಕೆ ಇಷ್ಟವಿಲ್ಲ
ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುವುದು ಸಿದ್ದರಾಮಯ್ಯ ಬಣಕ್ಕೆ ಇಷ್ಟವಿಲ್ಲ, ಹೀಗಾಗಿ ಎಐಸಿಸಿ ಅಧ್ಯಕ್ಷರಿಗೇ ಮೊರೆ ಹೋಗಿದ್ದಾರೆ.
ಖರ್ಗೆ ನಾಯಕತ್ವ ವಹಿಸಿಕೊಳ್ಳುವುದಾದರೆ ಎಐಸಿಸಿ ಹಾಗೂ ರಾಜ್ಯದ ಯಾವುದೇ ಮುಖಂಡರಿಂದ ವಿರೋಧ ಇರುವುದಿಲ್ಲ.
ಇದನ್ನು ಮನಗಂಡು ಸಿದ್ದರಾಮಯ್ಯ ಬಣ ಪೂರ್ವ ಯೋಜಿತವಾಗಿ ಖರ್ಗೆ ಅವರನ್ನು ಮುಂದು ಮಾಡಲು ಹೊರಟಿದೆ.
ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ
ಸತೀಶ್, ದೆಹಲಿಯಲ್ಲಿ ಖರ್ಗೆ ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಶ್ಚರ್ಯಕರ ಹೇಳಿಕೆ ನೀಡಿದ್ದಾರೆ.
ಸಿದ್ದರಾಮಯ್ಯ ಇನ್ನೂ ರಾಜೀನಾಮೆ ನೀಡಿಯೇ ಇಲ್ಲ, ಆಗಲೇ ಮುಕ್ಯಮಂತ್ರಿ ಗಾದಿ ಬಗ್ಗೆ ಮಾತನಾಡುತ್ತಿದ್ದಾರೆ, ನಮ್ಮ ಪಕ್ಷದ ೧೩೬ ಶಾಸಕರ ಇಚ್ಛೆಯ ಮೇರೆಗೆ ಮುಖ್ಯಮಂತ್ರಿ ಆಯ್ಕೆ ಆಗುತ್ತಾರೆ, ನಮ್ಮಲ್ಲಿ ವರಿಷ್ಠರ ತೀರ್ಮಾನವೇ ಅಂತಿಮ ಎಂದಿದ್ದಾರೆ.