ಬೆಂಗಳೂರು:ವಂಚಕ ವಿಜಯ್ ತಾತಾನಿಂದ ಮೋಸ ಹೋದ ಅನೇಕರಿಗೆ ನ್ಯಾಯ ಕೊಡಿಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಬೇಕು ಎಂದು ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಇಂದಿಲ್ಲಿ ಒತ್ತಾಯಿಸಿದ್ದಾರೆ.
ಸಂಸದ ಮಲ್ಲೇಶ್ ಬಾಬು, ವಿಧಾನ ಪರಿಷತ್ ಸದಸ್ಯರಾದ ಕೆ.ಎನ್.ತಿಪ್ಪೇಸ್ವಾಮಿ, ಟಿ.ಎ.ಶರವಣ, ಜವರಾಯಿಗೌಡ ಹಾಗೂ ವಿವಿಧ ಮುಖಂಡರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನೇಕರಿಗೆ ವಿಜಯ್ ತಾತಾ ಮೋಸ ಮಾಡಿದ್ದಾನೆ, ಆತನ ವಿರುದ್ಧ ನೂರಾರು ಪ್ರಕರಣಗಳು ದಾಖಲಾಗಿವೆ, ವಂಚನೆಯೇ ಆತನ ಪ್ರವೃತ್ತಿ ಎಂದರು.
ಫೋನ್ ಕದ್ದಾಲಿಕೆ
ರಾಜ್ಯದ ಆಂತರಿಕ ಭದ್ರತಾ ವಿಭಾಗದಿಂದ ನನ್ನ ಫೋನ್ ಕದ್ದಾಲಿಕೆ ಆಗುತ್ತಿದೆ, ಪೊಲೀಸ್ ಆಯುಕ್ತರಿಗೆ ದೂರು ನೀಡುತ್ತೇನೆ, ಈ ಬಗ್ಗೆಯೂ ತನಿಖೆ ನಡೆಯಬೇಕು.
ಕುಮಾರಸ್ವಾಮಿ ಹಾಗೂ ನನ್ನ ಮೇಲೆ ವಿಜಯ್ ತಾತಾ ಪೊಲೀಸರಿಗೆ ದೂರು ನೀಡಿದ್ದರು, ನಾನು ಆತನ ವಿರುದ್ಧ ದೂರು ಕೊಡಲು ಹೋದಾಗ ವಿಜಯ್ ತಾತಾ ಠಾಣೆಯಲ್ಲೇ ಇದ್ದರು, ಆಗ ಯಾಕೆ ಸುಳ್ಳು ದೂರು ಕೊಡುತ್ತೀಯಾ, ಇದು ಸರೀನಾ ಎಂದು ಇನ್ಸ್‌ಪೆಕ್ಟರ್ ಮುಂದೆಯೇ ಕೇಳಿದೆ, ಅದಕ್ಕೆ ವಿಜಯ್ ತಾತಾ, “ಮುಖ್ಯಮಂತ್ರಿ ಕಚೇರಿ ಹಾಗೂ ಕೆಲವು ಸಚಿವರಿಂದ ನನ್ನ ಮೇಲೆ ಒತ್ತಡ ಇದೆ” ಎಂದರು.
ವಿಜಯ್ ತಾತಾ ವಿರುದ್ಧ ಕರ್ನಾಟಕ ಮಾತ್ರವಲ್ಲ, ನಾಗಪುರ, ಪುಣೆ, ಮುಂಬೈನಲ್ಲೂ ಪ್ರಕರಣಗಳು ದಾಖಲಾಗಿವೆ, ನೂರಾರು ಎಫ್‌ಐಆರ್‌ಗಳು ಆಗಿವೆ, ಇದಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲೆಗಳು ನನ್ನ ಬಳಿ ಇವೆ.
ಬಣ್ಣ ಬಯಲು
ವಿಜಯ್ ತಾತಾ ಹಲವು ಬಾರಿ ನನಗೆ ದೂರವಾಣಿ ಕರೆ ಮಾಡಿದ್ದ, ಮೆಸೇಜ್ ಕಳುಹಿಸಿದ್ದ, 2006-07 ಹಾಗೂ 2008ರಲ್ಲಿ ಯೂರೋಪಿಯನ್ ಟೌನ್‌ಶಿಪ್ ಮಾಡಿ ಲೇಔಟ್ ಮಾಡುತ್ತೇನೆ ಅಂತಾ ಹೇಳಿದ್ದರು, ಲೇಔಟ್‌ಗೆ ಇವನ ಬಳಿ ಜಮೀನು ಇಲ್ಲ ಎಂದು ಬಿಡಿಎ ಬಣ್ಣ ಬಯಲು ಮಾಡಿತ್ತು.
ದೇವನಹಳ್ಳಿ ಬಳಿ ಅಪಾರ್ಟ್‌ಮೆಂಟ್ ಕಟ್ಟುತ್ತೇನೆ, ಮನೆ ತೆಗೆದುಕೊಂಡರೆ ಬೆನ್ಜ್ ಕಾರು ಕೊಡುತ್ತೇನೆ ಎಂದು ಜಾಹೀರಾತು ನೀಡಿದ್ದ, ಒಂದು ಜಮೀನನ್ನು ಮೂವರಿಗೆ ಮಾರಾಟ ಮಾಡಿದ್ದಾನೆ, ಸೋಫಾ ಶೋ ರೂಮ್ ವ್ಯವಹಾರದಲ್ಲೂ ಹಲವು ಜನರಿಗೆ ಮೋಸ ಮಾಡಿದ್ದಾನೆ ಎಂದು ಆರೋಪಿಸಿದರು.
ನಾನು ದೂರು ಕೊಟ್ಟರೆ ಎಫ್‌ಐಆರ್ ಆಗಲ್ಲ, ಆತ ದೂರು ಕೊಟ್ಟರೆ ಆಗುತ್ತದೆ, ಪೊಲೀಸ್ ಠಾಣೆ ಮುಂದೆ ಧರಣಿ ಕೂರುತ್ತೇನೆ, ನಾಳೆಯಿಂದ ಎಲ್ಲಾ ಸಚಿವರ ಮೇಲೆ ದೂರು ಕೊಟ್ಟರೆ ಎಫ್‌ಐಆರ್ ಹಾಕುತ್ತಾರಾ ಎಂದು ಪ್ರಶ್ನಿಸಿದರು.
ಫೋನ್ ಸೀಜ್ ಮಾಡಿ
ಧರ್ಮಸ್ಥಳದ ಮಂಜುನಾಥ ಸ್ವಾಮಿ, ತಾಯಿ ಚಾಮುಂಡೇಶ್ವರಿ ಮೇಲೆ ಪ್ರಮಾಣ ಮಾಡುತ್ತೇನೆ, ನಾನು ವಿಜಯ್ ತಾತಾ ಬಳಿ ಯಾವುದೇ ಹಣ ಕೇಳಿಲ್ಲ, ನವರಾತ್ರಿ ನಡೆಯುತ್ತಿದೆ, ಪ್ರಮಾಣ ಮಾಡುತ್ತೇನೆ, ಯಾವುದೇ ಮನೆ ಹಾಳು ಕೆಲಸ ಮಾಡಿಲ್ಲ, ಹಲವು ಬಾರಿ ನನಗೆ ದೂರವಾಣಿ ಕರೆ ಮಾಡಿದ್ದಾನೆ, ಇಬ್ಬರ ಫೋನ್ ಸೀಜ್ ಮಾಡಿ ತನಿಖೆ ನಡೆಸಲಿ ಎಂದು ಸವಾಲು ಹಾಕಿದರು.
ಪೊಲೀಸ್ ಇಲಾಖೆ ಸಹಜ ನ್ಯಾಯ ಪಾಲನೆ ಮಾಡುತ್ತಿಲ್ಲ, ಒತ್ತಡಕ್ಕೆ ಮಣಿದು ಕೆಲಸ ಮಾಡುತ್ತಿದೆ, ವಿಜಯ್ ತಾತಾ ವಿರುದ್ಧ ದೂರು ಕೊಟ್ಟರೂ ಎಫ್‌ಐಆರ್ ದಾಖಲಿಸದ ಪೊಲೀಸರ ಕ್ರಮ ಖಂಡನೀಯ ಎಂದು ರಮೇಶ್ ಗೌಡ ಮತ್ತಿತರ ಮುಖಂಡರು ನಗರ ಪೊಲೀಸ್ ಆಯುಕ್ತರ ಕಚೇರಿ ಎದುರು ಧರಣಿ ನಡೆಸಿದರು.