ಬೆಂಗಳೂರು:ಹೆದರಿಕೊಳ್ಳಲು ಸಿದ್ದರಾಮಯ್ಯ ಏನು ದೆವ್ವಾನಾ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ವ್ಯಂಗ್ಯವಾಡಿದ್ದಾರೆ.
ಕುಮಾರಸ್ವಾಮಿಗೆ ನನ್ನ ಕಂಡರೆ ಭಯ ಎಂದು ಮುಖ್ಯಮಂತ್ರಿ ನೀಡಿದ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ದೇವರಿಗೆ ಮತ್ತು ಜನಕ್ಕೆ ಮಾತ್ರ ಹೆದರುತ್ತೇನೆ, ಈ ಸಿದ್ದರಾಮಯ್ಯ ಅವರಿಗಲ್ಲ.
ಜನರ ಆಶೀರ್ವಾದ
ಕಾರ್ಯಕರ್ತರು ಹಾಗೂ ಜನರ ಆಶೀರ್ವಾದದಿಂದ ನಾನು ರಾಜಕೀಯವಾಗಿ ಬೆಳೆದಿದ್ದೇನೆ, ಸಿದ್ದರಾಮಯ್ಯ ಜೆಡಿಎಸ್ ಕಾರ್ಯಕರ್ತರಾಗಿ ದೇವೇಗೌಡರ ನೆರಳಿನಲ್ಲಿ ಬೆಳೆದವರು.
ಅವರ ಹೆಸರಿನಲ್ಲಿ ನಾನೇನು ರಾಜಕೀಯ ಮಾಡಿಲ್ಲ, ನನ್ನ ವಿರುದ್ಧ ಸುಳ್ಳು ಮೊಕದ್ದಮೆಗಳನ್ನು ಹೂಡಿ ಹೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ, ಈ ಕುಮಾರಸ್ವಾಮಿಯನ್ನು ಯಾರಿಂದಲೂ ಅಲ್ಲಾಡಿಸಲು ಸಾಧ್ಯವಿಲ್ಲ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಷ್ಟು ಮೊಕದ್ದಮೆಗಳನ್ನು ಬೇಕಾದರೂ ಹಾಕಿಕೊಳ್ಳಲಿ, ನೀವು ಮಾಧ್ಯಮದವರು ಬೆಳಗ್ಗಿನಿಂದ ಸಂಜೆವರೆಗೆ ಅದನ್ನೇ ಬಿತ್ತರಿಸುತ್ತೀರಿ, ಇದರಿಂದ ಏನಾಯಿತು ಎಂದು ಪ್ರಶ್ನಿಸಿದರು.
ಎಲ್ಲವನ್ನೂ ಬಿಟ್ಟ ಸರ್ಕಾರ
ಇದು ಭಂಡ ಸರ್ಕಾರ, ಇವರು ಜನರಿಗೂ ಹೆದರುವುದಿಲ್ಲ, ಯಾರಿಗೂ ಕೇರ್ ಮಾಡುವುದಿಲ್ಲ, ಇವರ ತೀರ್ಮಾನವೇ ಅಂತಿಮ, ಇದು ಎಲ್ಲವನ್ನೂ ಬಿಟ್ಟ ಸರ್ಕಾರವಾಗಿದೆ.
ಪರ್ಯಾಯ ಮುಖ್ಯಮಂತ್ರಿ ವಿಷಯಕ್ಕೆ ಸಂಬಂಧಿಸಿದಂತೆ ಅವರ ಪಕ್ಷದಲ್ಲಿ ಹಲವಷ್ಟು ಹೇಳಿಕೆಗಳು ಬರುತ್ತಿವೆ, ಅದರ ಹಿಂದೆ ರಾಜಕೀಯವಿದೆ.
ಜೆಡಿಎಸ್ ಭವಿಷ್ಯ ಹಾಗೂ ಇಂದಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಕಾಲವೇ ನಿರ್ಣಯಿಸುತ್ತದೆ, ಅವರವರ ಅನುಕೂಲಕ್ಕೆ ತಕ್ಕಂತೆ ರಾಜಕೀಯ ಮಾಡುತ್ತಿದ್ದಾರೆ ಎಂದರು.