ಪರ್ಯಾಯ ನಾಯಕತ್ವದ ಬಿಕ್ಕಟ್ಟು ಉಲ್ಬಣ
ಬೆಂಗಳೂರು : ಪರ್ಯಾಯ ನಾಯಕತ್ವಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣದಲ್ಲೇ ಬಿರುಕು ಮೂಡಿದೆ. ಮುಡಾ ಬಿಡಿ ನಿವೇಶನ ಹಾಗೂ ಪ್ರಾಧಿಕಾರದ ಹಣವನ್ನು ಎರಡು ಕ್ಷೇತ್ರಗಳ ಅಭಿವೃದ್ಧಿಗೆ ಬಳಸಿದ ವಿಚಾರಕ್ಕೆ ಸಂಬಂಧಿಸಿದಂತೆ ಜಾರಿ ನಿದೇರ್ಶನಾಲಯ (ಇ.ಡಿ.) ಯಾವುದೇ ಕ್ಷಣದಲ್ಲಿ ಮುಖ್ಯಮಂತ್ರಿ ಅವರಿಗೆ ನೋಟಿಸ್ ಜಾರಿ ಮಾಡಿ ಕಾನೂನು ಕ್ರಮಕ್ಕೆ ಮುಂದಾಗಬಹುದು.
ನ್ಯಾಯಾಲಯಗಳು ಕರ್ನಾಟಕದ ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಆದೇಶ ನೀಡಿದ ನಂತರ ಕಾಂಗ್ರೆಸ್ ವರಿಷ್ಠರು ಮೌನ ವಹಿಸಿರುವುದಲ್ಲದೆ, ತೆರೆಮರೆಯಲ್ಲೇ ಪರ್ಯಾಯ ನಾಯಕತ್ವಕ್ಕೆ ಅನ್ವೇಷಣೆ ನಡೆಸಿದ್ದಾರೆ. ಇದರ ಸುಳಿವರಿತ ಸಿದ್ದರಾಮಯ್ಯ ತಾವು ಅಧಿಕಾರ ತ್ಯಜಿಸಿದರೆ, ತಮ್ಮ ಬೆಂಬಲಿಗರೇ ನಾಯಕತ್ವ ವಹಿಸಿಕೊಳ್ಳಬೇಕೆಂಬ ತೀರ್ಮಾನಕ್ಕೆ ಬಂದಿದ್ದಾರೆ.
ಇದರ ಹಿನ್ನೆಲೆಯಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಮ್ಮ ಬೆಂಬಲಿಗರ ಮೂಲಕ ಕರ್ನಾಟಕ ರಾಜಕೀಯಕ್ಕೆ ಹಿಂತಿರುಗಿ ಮುಖ್ಯಮಂತ್ರಿ ಆಗಿ ಎಂಬ ಸಂದೇಶ ನೀಡಿದ್ದರು. ಅವರು ರಾಜ್ಯ ರಾಜಕಾರಣಕ್ಕೆ ಬರುವುದಿಲ್ಲ ಎನ್ನುವುದು ತಿಳಿದ ವಿಚಾರವೇ ಆದರೂ, ಎಐಸಿಸಿ ವಿಶ್ವಾಸ ಪಡೆದುಕೊಳ್ಳಲು ಸಿದ್ದರಾಮಯ್ಯ ಈ ತೀರ್ಮಾನ ಕೈಗೊಂಡಿದ್ದರು.
ಖರ್ಗೆ ಅವರು ರಾಜ್ಯ ರಾಜಕಾರಣಕ್ಕೆ ಬರಲು ನಿರಾಕರಿಸಿದ ಬೆನ್ನಲ್ಲೇ ಸಿದ್ದರಾಮಯ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಹಸಿರು ನಿಶಾನೆ ತೋರಿದ್ದಾರಂತೆ. ಜಾರಕಿಹೊಳಿಯನ್ನು ಬೆಂಬಲಿಸಿದ್ದು ಅದೇ ಬಣಕ್ಕೆ ಸೇರಿದ ಸಚಿವರಾದ ಡಾ.ಜಿ.ಪರಮೇಶ್ವರ್ ಹಾಗೂ ಡಾ.ಹೆಚ್.ಸಿ.ಮಹದೇವಪ್ಪ ಅವರಿಗೆ ಇರಿಸು-ಮುರಿಸು ತಂದಿದೆ.
ವಿಷಯ ತಿಳಿಯುತ್ತಿದ್ದಂತೆ ಡಾ.ಪರಮೇಶ್ವರ್ ಹಾಗೂ ಡಾ.ಮಹದೇವಪ್ಪ ಈ ಎಲ್ಲಾ ಬೆಳವಣಿಗೆಗಳಿಂದ ದೂರ ಉಳಿದು ತಮ್ಮ ಜಿಲ್ಲಾ ಕೇಂದ್ರಗಳಲ್ಲೇ ಬಿಡಾರ ಹೂಡಿದ್ದಾರೆ. ಇದರ ಸುಳಿವರಿತ ಜಾರಕಿಹೊಳಿ ಕಳೆದ ಎರಡು ದಿನಗಳ ಹಿಂದೆ ತುಮಕೂರಿಗೆ ತೆರಳಿ ಡಾ.ಪರಮೇಶ್ವರ್ ಅವರನ್ನು ಭೇಟಿ ಮಾಡಿ ಗೌಪ್ಯ ಮಾತುಕತೆ ನಡೆಸಿದರು.
ಇಂದು ಮೈಸೂರಿಗೆ ತೆರಳಿ ಡಾ.ಮಹದೇವಪ್ಪ ಅವರೊಂದಿಗೆ ಚರ್ಚಿಸಿದ ಜಾರಕಿಹೊಳಿ ತಮ್ಮಲ್ಲಿನ ಒಗ್ಗಟ್ಟು ಕಾಪಾಡುವ ಹಾಗೂ ವಿಶ್ವಾಸ ಗಳಿಸುವಲ್ಲಿ ಪ್ರಯತ್ನ ಮುಂದುವರೆಸಿದ್ದಾರೆ. ಕಳೆದ ಎರಡು ದಿನಗಳಿಂದ ನಗರದಲ್ಲೇ ಬಿಡಾರ ಹೂಡಿದ್ದ ಜಾರಕಿಹೊಳಿ ಕೆಲವು ಸಚಿವರು ಮತ್ತು ಶಾಸಕರ ಜೊತೆಯೂ ಗೌಪ್ಯ ಮಾತುಕತೆ ನಡೆಸಿದ್ದರು.
ಸಿದ್ದರಾಮಯ್ಯ ಮಾತ್ರ ತಮಗೇನೂ ತಿಳಿದಿಲ್ಲ ಎನ್ನುವಂತಿದ್ದು, ಅಗತ್ಯ ಕಂಡುಬಂದಲ್ಲಿ ಪರ್ಯಾಯ ನಾಯಕತ್ವಕ್ಕೆ ವೇದಿಕೆ ಸಿದ್ಧ ಪಡಿಸುತ್ತಿದ್ದಾರೆ.
ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷರಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮುಂದೆ ಅವಕಾಶ ದೊರೆಯುವುದಾದರೆ ವರಿಷ್ಠರು ತಮ್ಮನ್ನು ಕೈಬಿಡುವುದಿಲ್ಲ ಎಂಬ ತುಂಬು ವಿಶ್ವಾಸದಲ್ಲಿದ್ದಾರೆ.
ಇದರ ನಡುವೆಯೇ ತಮ್ಮ ಸಹೋದರ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ಮೂಲಕವೂ ಬಹಳ ಗೌಪ್ಯವಾಗಿ ತಮಗೆ ಅಧಿಕಾರ ತಪ್ಪದಂತೆ ಜಾಗ್ರತೆ ವಹಿಸಿದ್ದಾರೆ.
ಸುರೇಶ್ ನಿನ್ನೆ ಸತೀಶ್ ನಿವಾಸಕ್ಕೆ ತೆರಳಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ಮಾಡಿದ್ದಾರೆ. ಆದರೆ, ಮಾತುಕತೆ ವಿವರ ತಿಳಿದುಬಂದಿಲ್ಲ.