ಬೆಂಗಳೂರು:ರಾಜ್ಯದಲ್ಲಿ ವಿಚ್ಛಿದ್ರಕಾರಿ ಶಕ್ತಿಗಳು ದುಷ್ಕೃತ್ಯದ ಮೂಲಕ ಶಾಂತಿಭಂಗಕ್ಕೆ ಯತ್ನ ನಡೆಸಿದ್ದು ಎಲ್ಲೆಡೆ ವ್ಯಾಪಕ ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಗುಪ್ತದಳ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ರಾಜ್ಯದ ವಿವಿಧೆಡೆ ಅಡಗಿದ್ದ ಪಾಕಿಸ್ತಾನಿ ಪ್ರಜೆಗಳ ಬಂಧನದ ಬೆನ್ನಲ್ಲೇ ವ್ಯಾಪಕ ಮುಂಜಾಗ್ರತೆ ವಹಿಸುವಂತೆ ಎಚ್ಚರಿಕೆ ಸಂದೇಶ ರವಾನೆಯಾಗಿದೆ.
ಸಂಘಟನೆಗಳ ಸಂಚು
ಆಯುಧ ಪೂಜೆ, ವಿಜಯದಶಮಿ ಸೇರಿದಂತೆ ಹಲವಾರು ಹಬ್ಬ ಆಚರಣೆಗಳು ಮುಂದಿನ ಒಂದೂವರೆ ತಿಂಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಕೆಲವು ಸಂಘಟನೆಗಳು ಸಂಚು ಮಾಡಿವೆ ಎಂದು ಗುಪ್ತದಳ ತನ್ನ ಸಂದೇಶದಲ್ಲಿ ತಿಳಿಸಿದೆ.
ಮೈಸೂರಿನ ಐತಿಹಾಸಿಕ ಜಂಬೂಸವಾರಿ, ಮಡಿಕೇರಿ ದಸರಾ, ಚಿತ್ರದುರ್ಗ ದಸರಾ ಸೇರಿ ರಾಜ್ಯದ ವಿವಿಧ ಕಡೆ ನಡೆಯುತ್ತಿರುವ ಧಾರ್ಮಿಕ ಆಚರಣೆಗಳ ಸಮಯದಲ್ಲಿ ದುಷ್ಕೃತ್ಯದ ಮೂಲಕ ಶಾಂತಿಭಂಗಕ್ಕೆ ಸಂಚು ನಡೆದಿದೆ.
ಕೆಲವು ವಿಚ್ಛಿದ್ರಕಾರಕ ಶಕ್ತಿಗಳ ಜೊತೆ ನಂಟು ಹೊಂದಿರುವ ವ್ಯಕ್ತಿಗಳು ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಭಾಗಗಳಲ್ಲಿ ತಲೆಮರೆಸಿಕೊಂಡಿದ್ದಾರೆ, ಈ ಹಿನ್ನೆಲೆಯಲ್ಲಿ ಅಪರಿಚಿತರ ಚಲನವಲನಗಳ ಮೇಲೆ ತೀವ್ರ ನಿಗಾ ವಹಿಸುವಂತೆ ಗುಪ್ತದಳ ಸಂದೇಶದಲ್ಲಿ ತಿಳಿಸಿರುವುದಾಗಿ ಗೊತ್ತಾಗಿದೆ.
ವ್ಯಾಪಕ ಮುಂಜಾಗ್ರತೆ
ಕೇಂದ್ರ ಗುಪ್ತದಳದ ಎಚ್ಚರಿಕೆ ಸಂದೇಶದ ಬೆನ್ನಲ್ಲೇ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರು, ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವ್ಯಾಪಕ ಮುಂಜಾಗ್ರತೆ ವಹಿಸುವಂತೆ ಸೂಚನೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಐತಿಹಾಸಿಕ ಮೈಸೂರು ದಸರಾ ಜಂಬೂಸವಾರಿ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳ ಮೇಲೆ ಪೊಲೀಸ್ ಇಲಾಖೆ ತೀವ್ರ ನಿಗಾ ವಹಿಸಿದೆ.
ರಾಜ್ಯದ ಎಲ್ಲಾ ಹೋಟೆಲ್‌ಗಳಲ್ಲಿ ಕಳೆದ 15 ದಿನಗಳಿಂದ ಕೊಠಡಿ ಪಡೆದಿರುವವರ ವಿವರಗಳನ್ನು ನೀಡುವಂತೆ ಸೂಚಿಸಿದ್ದು, ಇಂದಿನಿಂದ ಮುಂದಿನ ಹದಿನೈದು ದಿನ ಹೋಟೆಲ್‌ಗಳಲ್ಲಿ ಕೊಠಡಿ ಪಡೆಯುವವರ ವಿವರಗಳನ್ನು ಕಡ್ಡಾಯವಾಗಿ ಸಮೀಪದ ಪೊಲೀಸ್ ಠಾಣೆಗೆ ನೀಡಬೇಕು ಎಂದು ತಾಕೀತು ಮಾಡಲಾಗಿದೆ.
ವಿಮಾನ ನಿಲ್ದಾಣ, ಬಸ್ ಮತ್ತು ರೈಲು ನಿಲ್ದಾಣಗಳಲ್ಲಿ ಭದ್ರತೆ ಪ್ರಮಾಣ ಹೆಚ್ಚಳ ಮಾಡಲಾಗಿದೆ, ಐತಿಹಾಸಿಕ ಕಟ್ಟಡಗಳು, ಅಣೆಕಟ್ಟು ಮತ್ತು ಜನ ನಿಬಿಡ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.