ಬೆಂಗಳೂರು:ಇನ್ನು ಮುಂದೆ ವಿದ್ಯಾರ್ಥಿಗಳಿಗಷ್ಟೇ ಅಲ್ಲ ಪೋಷಕರಿಗೂ ಸರ್ಕಾರಿ ಶಾಲಾ ಶಿಕ್ಷಕರು ಗಣಿತ ಪಾಠ ಬೋಧಿಸಬೇಕು.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧುಬಂಗಾರಪ್ಪ, ಗಣಿತ-ಗಣಕದಿಂದ ಶೈಕ್ಷಣಿಕ ಗುಣಮಟ್ಟ ಕಡಿಮೆ ಇರುವವರಿಗೆ ಗಣಿತದ ಜ್ಞಾನ ಹೆಚ್ಚಿಸಿ ಮಕ್ಕಳಿಗೆ ಮನೆಯಲ್ಲಿ ಗಣಿತ ಜ್ಞಾನ ವೃದ್ಧಿಗೆ ಈ ಯೋಜನೆ ಅನುಕೂಲವಾಗಲಿದೆ ಎಂದರು.
ಮೊಬೈಲ್‌ನಲ್ಲಿ ಪಾಠ
ಗಣಿತ-ಗಣಕ ಕಾರ್ಯಕ್ರಮದಲ್ಲಿ ಶಿಕ್ಷಕರು, ಮಕ್ಕಳ ಪೋಷಕರ ಮೊಬೈಲ್‌ಗೆ ಕರೆ ಮಾಡಿ ಪ್ರತಿದಿನ 32ರಿಂದ 45 ನಿಮಿಷದವರೆಗೂ ಗಣಿತವನ್ನು ಹೇಳಿಕೊಡಲಿದ್ದಾರೆ, ಇದಕ್ಕಾಗಿ ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗಿದೆ.
ಶಿಕ್ಷಣದಲ್ಲಿ ತಂತ್ರಜ್ಞಾನ ಅಳವಡಿಸಿ ಕಲಿಕಾ ಗುಣಮಟ್ಟ ಹೆಚ್ಚಿಸಲು ಅಮೆರಿಕ ಮೂಲದ ಸಂಸ್ಥೆಯೊಂದಿಗೆ ರಾಜ್ಯ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಒಡಂಬಡಿಕೆ ಮಾಡಿಕೊಂಡಿದೆ.
ತಂತ್ರಜ್ಞಾನ ಅಳವಡಿಕೆ
ಶಿಕ್ಷಣದಲ್ಲಿ ಗುಣಮಟ್ಟ, ಹೊಸತನ ಮತ್ತು ತಂತ್ರಜ್ಞಾನ ಅಳವಡಿಕೆಗೆ ಜೆ-ಪಾಲ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಸರ್ಕಾರಿ ಶಾಲೆಗಳಲ್ಲಿ ಶುರುವಾಗಿರುವ ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಚಿಲಿಪಿಲಿ ಪಠ್ಯ ಕ್ರಮವನ್ನು ಹೊಸದಾಗಿ ರೂಪಿಸಲಾಗುವುದು, ಪ್ರಾಯೋಗಿಕವಾಗಿ 6 ಸಾವಿರ ಮಕ್ಕಳಿಗೆ ಚಿಲಿಪಿಲಿ ಯೋಜನೆ ಅನ್ವಯವಾಗಲಿದೆ ಎಂದರು.
ಮೂರರಿಂದ ಐದನೇ ತರಗತಿ ಮಕ್ಕಳಿಗೆ ಗಣಿತ-ಗಣಕ ಹಾಗೂ ಆರರಿಂದ ಹತ್ತನೇ ತರಗತಿ ಮಕ್ಕಳಿಗೆ ಮರುಸಿಂಚನ ಕಾರ್ಯಕ್ರಮ ರೂಪಿಸಲಾಗಿದೆ.
ಮರುಸಿಂಚನ ಕಾರ್ಯಕ್ರಮ
ಕಲಿಕಾ ಗುಣಮಟ್ಟ ಕಡಿಮೆ ಇರುವ ಮಕ್ಕಳಿಗಾಗಿ ಮರುಸಿಂಚನ ಕಾರ್ಯಕ್ರಮ ರೂಪಿಸಲಾಗಿದೆ, ಇಂತಹ ವಿದ್ಯಾರ್ಥಿಗಳಿಗೆ ಅವರ ಹಿಂದಿನ ಪಠ್ಯಕ್ರಮಗಳ ಪುನರ್‌ಮನನ ಮಾಡಿಕೊಡಲಾಗುವುದು.
ಇದರಿಂದ ಹಳೆಯ ಕಲಿಕೆ ಹಾಗೂ ಹೊಸ ಜ್ಞಾನದ ಜೊತೆ ಸುಧಾರಣೆ ಕಾಣುವ ನಿರೀಕ್ಷೆಯಿದೆ, ಪ್ರಾಯೋಗಿಕವಾಗಿ 9 ಸಾವಿರ ಶಾಲೆಗಳಲ್ಲಿ ಇದನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದರು.
ಸರ್ಕಾರಿ ಶಾಲೆಗಳಲ್ಲಿ ತಂತ್ರಜ್ಞಾನದ ಜೊತೆ ಶಿಕ್ಷಣದ ಕಲಿಕೆಗೆ ಅವಕಾಶ ಮಾಡಿಕೊಡಲಾಗುತ್ತಿದೆ, ಮುಂದಿನ ದಿನಗಳಲ್ಲಿ ಸ್ಮಾರ್ಟ್‌ಕ್ಲಾಸ್‌ಗಳನ್ನು ರೂಪಿಸಲಾಗುವುದು, ಅಭ್ಯಾಸದ ಜೊತೆಗೆ ಬೋಧನೆ ನಡೆಸುವುದರಿಂದ ವಿದ್ಯಾರ್ಥಿ ಸ್ನೇಹಿ ಶಿಕ್ಷಣ ವ್ಯವಸ್ಥೆ ರೂಪುಗೊಳ್ಳಲಿದೆ.
ಅಗತ್ಯ ತರಬೇತಿ
ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಭಾಷಾ ಕೀಳರಿಮೆ ಹಾಗೂ ವೇದಿಕೆ ಮುಜುಗರ ತಪ್ಪಿಸಲು ಅಗತ್ಯ ತರಬೇತಿ ನೀಡಲಾಗುತ್ತದೆ.
ಮುಂದಿನ 15-20 ವರ್ಷಗಳಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಗರದ ಬೃಹತ್ ಸಾಫ್ಟ್‌ವೇರ್ ಕಂಪನಿಗಳಲ್ಲಿ ಕೆಲಸ ಮಾಡಲು ಸಹಕಾರಿಯಾಗಲಿದೆ ಎಂದರು.