ಬೆಂಗಳೂರು:ಮುಷ್ಕರನಿರತ ಗ್ರಾಮ ಪಂಚಾಯತ್ ನೌಕರರ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಗಮನಹರಿಸಿ ಸಮಸ್ಯೆ ಪರಿಹರಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದಿಲ್ಲಿ ಒತ್ತಾಯಿಸಿದ್ದಾರೆ.
ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬೇಡಿಕೆ ಈಡೇರದಿದ್ದರೆ ಅಕ್ಟೋಬರ್ 11ರಿಂದ ಹೋರಾಟ ತೀವ್ರಗೊಳಿಸುವುದಾಗಿ ಪಂಚಾಯತ್ ನೌಕರರು ಗಡುವು ನೀಡಿದ್ದು, ವಾಟರ್‌ಮನ್, ಕಂಪ್ಯೂಟರ್ ಸೇವೆ ಸ್ಥಗಿತವಾಗಲಿದೆ, ಗ್ರಾಮೀಣ ಪ್ರದೇಶದಲ್ಲಿ ಸಮಸ್ಯೆಗಳು ಉಲ್ಬಣಿಸಲಿವೆ ಎಂದಿದ್ದಾರೆ.
ಜನರಿಗೆ ತೊಂದರೆ ತಪ್ಪಿಸಿ
ಗ್ರಾಮ ಪಂಚಾಯತ್ ನೌಕರರ ವಿವಿಧ ಬೇಡಿಕೆಗಳನ್ನು ಮಾತುಕತೆ ಮೂಲಕ ಬಗೆಹರಿಸಬೇಕು, ಜನರಿಗೆ ತೊಂದರೆ ಆಗುವುದನ್ನು ತಪ್ಪಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸಲು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸೂಚಿಸಬೇಕು.
ಗ್ರಾಮ ಪಂಚಾಯತ್‌ಗಳ 11 ವೃಂದಗಳ ನೌಕರರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ, ರಾಜ್ಯಾದ್ಯಂತ ಗ್ರಾಮ ಪಂಚಾಯತ್ ಸೇವೆ ಸ್ಥಗಿತಗೊಂಡಿದೆ, ಪಂಚಾಯತ್ ರಾಜ್ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಕೂಡಲೇ ಸಮಸ್ಯೆ ಪರಿಹರಿಸಬೇಕು.
ನಾಲ್ಕನೇ ಬಾರಿ ಮುಷ್ಕರ
ಪಿಡಿಒಗಳು ಸೇರಿದಂತೆ ಎಲ್ಲ ನೌಕರವೃಂದ ನಾಲ್ಕನೇ ಬಾರಿಗೆ ಮುಷ್ಕರನಿರತರಾಗಿದ್ದಾರೆ, ಕಳೆದ ಮೂರು ಬಾರಿ ನಡೆಸಿದ ಸಭೆ ನಿರ್ಣಯಗಳು ಈಡೇರಿಲ್ಲ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಸಂಘ 28 ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿತ್ತು, ಒಂದು ಬೇಡಿಕೆಯನ್ನೂ ಈಡೇರಿಸಿಲ್ಲ, ಬೆಂಗಳೂರಿನಲ್ಲಿ ಸಾವಿರಾರು ನೌಕರರು ಪ್ರತಿಭಟನೆ ನಡೆಸಿದ್ದರು ಎಂದು ಸಂಘ ತಿಳಿಸಿದೆ.