ಬೆಂಗಳೂರು:ಕರ್ನಾಟಕಕ್ಕೆ ತೆರಿಗೆ ಪಾಲಿನಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧದ ಹೋರಾಟಕ್ಕೆ ಕನ್ನಡಿಗರೆಲ್ಲರೂ ದನಿ ಎತ್ತಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ಈ ಸಂಬಂಧ ಮಾಧ್ಯಮ ಪ್ರಕಟಣೆ ನೀಡಿರುವ ಮುಖ್ಯಮಂತ್ರಿ, ಕೇಂದ್ರದ ಎನ್ಡಿಎ ಸರ್ಕಾರ ಕರ್ನಾಟಕಕ್ಕೆ ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಮಾಡಿದ್ದು, ಇತ್ತೀಚಿನ ತೆರಿಗೆ ಪಾಲಿನ ಹಂಚಿಕೆಯ ವಿವರಗಳೇ ಸಾಕ್ಷಿಯಾಗಿವೆ, 28 ರಾಜ್ಯಗಳಿಗೆ ಒಟ್ಟು 1,78,193 ಕೋಟಿ ರೂ. ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಕೇವಲ 6,498 ಕೋಟಿ ರೂ. ಕೊಟ್ಟಿದೆ, ಈ ಅನ್ಯಾಯದ ವಿರುದ್ಧ ಪ್ರತಿಯೊಬ್ಬ ಕನ್ನಡಿಗನೂ ದನಿ ಎತ್ತಬೇಕಿದೆ ಎಂದಿದ್ದಾರೆ.
ಏನು ಅನ್ಯಾಯ ಮಾಡಿದ್ದೇವೆ
ಕರ್ನಾಟಕ ಕಡೆಗಣಿಸುವಂತಹ ಅನ್ಯಾಯ ನಾವೇನು ಮಾಡಿದ್ದೇವೆ ಎಂದು ಪ್ರತಿಯೊಬ್ಬ ಸ್ವಾಭಿಮಾನಿ ಕನ್ನಡಿಗನು ಕೇಂದ್ರ ಸರ್ಕಾರವನ್ನು ಕೇಳಬೇಕಾಗಿದೆ.
ರಾಜ್ಯಗಳಿಂದ ಸಂಗ್ರಹಿಸುವ ತೆರಿಗೆ ಹಣದಲ್ಲಿ ಉತ್ತರಪ್ರದೇಶಕ್ಕೆ ಶೇ.17.93, ಬಿಹಾರಕ್ಕೆ ಶೇ.10.05, ರಾಜಸ್ತಾನಕ್ಕೆ ಶೇ.6.02 ಮತ್ತು ಮಧ್ಯಪ್ರದೇಶಕ್ಕೆ ಶೇ.7.85ರಷ್ಟು ಪಾಲು ನೀಡಿದರೆ, ಕರ್ನಾಟಕಕ್ಕೆ ನೀಡುತ್ತಿರುವ ತೆರಿಗೆ ಪಾಲು ಕೇವಲ ಶೇ.3.64 ಮಾತ್ರ.
ತೆರಿಗೆ ಹಂಚಿಕೆಗಾಗಿ ನಿಗದಿ ಪಡಿಸಲಾಗಿರುವ ಮಾನದಂಡದಲ್ಲಿಯೇ ಕೇಂದ್ರ ಸರ್ಕಾರದ ಪ್ರಗತಿ ವಿರೋಧಿ ಧೋರಣೆ ಸ್ಪಷ್ಟವಾಗಿದೆ, ಅಭಿವೃದ್ಧಿಶೀಲ ರಾಜ್ಯವನ್ನು ಶಿಕ್ಷಿಸಿ, ದುರಾಡಳಿತ ನಡೆಸುತ್ತಿರುವ ರಾಜ್ಯಗಳನ್ನು ಪುರಸ್ಕರಿಸುವ ತೆರಿಗೆ ಹಂಚಿಕೆ ಮಾನದಂಡವನ್ನೇ ಬದಲಾಯಿಸಬೇಕೆಂದು ಒತ್ತಾಯಿಸುತ್ತ ಬಂದಿದ್ದರೂ ಕೇಂದ್ರ ಸರ್ಕಾರ ಕಿವುಡಾಗಿದೆ.
ರಾಜ್ಯದ ಪಾಲು ಇಳಿಕೆ
ಹದಿನಾಲ್ಕನೇ ಹಣಕಾಸು ಆಯೋಗ ಕರ್ನಾಟಕದ ತೆರಿಗೆ ಪಾಲು ಶೇ.4.713 ಎಂದು ನಿಗದಿಪಡಿಸಿತ್ತು, ಈಗಿನ 15ನೇ ಹಣಕಾಸು ಆಯೋಗ ಈ ಪಾಲನ್ನು ಕಡಿಮೆಗೊಳಿಸಿ ಶೇ.3.647ಕ್ಕೆ ಇಳಿಸಿತು.
ಇದರಿಂದ ಕಳೆದ ಐದು ವರ್ಷಗಳಲ್ಲಿ ತೆರಿಗೆ ಪಾಲಿನಲ್ಲಿ ಅಂದಾಜು 62,275 ಕೋಟಿ ರೂ.ಗಳನ್ನು ಕರ್ನಾಟಕ ಕಳೆದುಕೊಂಡಿದೆ, ಈ ಅನ್ಯಾಯ ಪರಿಗಣಿಸಿದ್ದ ಹಣಕಾಸು ಆಯೋಗ ವಿಶೇಷ ಅನುದಾನ ರೂಪದಲ್ಲಿ 5,495 ಕೋಟಿ ರೂ. ನೀಡುವಂತೆ ಶಿಫಾರಸು ಮಾಡಿತ್ತು. ಇದನ್ನೂ ಕೇಂದ್ರ ಸರ್ಕಾರ ನೀಡದೆ ಅನ್ಯಾಯ ಎಸಗಿದೆ.
ಎಲ್ಲ ನಷ್ಟಗಳನ್ನು ಸೇರಿಸಿದರೆ 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಕರ್ನಾಟಕ ರಾಜ್ಯಕ್ಕೆ 79,770 ಕೋಟಿ ರೂ. ಆಗಿದೆ.
ಕರ್ನಾಟಕ ಶೇ.8.4 ಕೊಡುಗೆ
ದೇಶದ ಜನಸಂಖ್ಯೆಯಲ್ಲಿ ಕರ್ನಾಟಕದ ಪಾಲು ಕೇವಲ ಶೇಕಡಾ 5ರಷ್ಟಿದ್ದರೂ ದೇಶದ ಜಿಡಿಪಿಗೆ ಕರ್ನಾಟಕದ ಶೇಕಡಾ 8.4ರಷ್ಟು ಕೊಡುಗೆ ನೀಡುತ್ತಿದೆ, ಜಿಎಸ್ಟಿ ಸಂಗ್ರಹದಲ್ಲಿ ಸತತವಾಗಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ, ಜಿಎಸ್ಟಿ ಸಂಗ್ರಹದ ಬೆಳೆವಣಿಗೆ ದರ ಗಮನಿಸಿದರೆ ಶೇ.17ರ ಸಾಧನೆ ಮೂಲಕ ದೇಶದಲ್ಲೇ ಮೊದಲ ಸ್ಥಾನದಲ್ಲಿ ಕರ್ನಾಟಕವಿದೆ.
ಈ ಪ್ರಮಾಣದಲ್ಲಿ ಜಿಎಸ್ಟಿ ಹಣ ಕೇಂದ್ರಕ್ಕೆ ಸಂಗ್ರಹಿಸಿ ನೀಡಿದರೂ ರಾಜ್ಯಕ್ಕೆ ಮರಳಿ ದೊರೆಯುತ್ತಿರುವುದು ಶೇ.52 ಪಾಲು ಮಾತ್ರ, ಜಿಎಸ್ಟಿಯ ಅವೈಜ್ಞಾನಿಕ ಅನುಷ್ಠಾನದಿಂದ ಕರ್ನಾಟಕ 2017-18ರಿಂದ 2023-24ರ ವರೆಗೆ ಸುಮಾರು 59,274 ಕೋಟಿ ರೂ. ಕಳೆದುಕೊಂಡಿದೆ.
ದೇಶದ ಒಟ್ಟು ತೆರಿಗೆ ಸಂಗ್ರಹಕ್ಕೆ ಕರ್ನಾಟಕ 4 ಲಕ್ಷ ಕೋಟಿ ರೂ. ನೀಡುತ್ತಿದ್ದರೂ ತೆರಿಗೆ ಹಂಚಿಕೆ ರೂಪದಲ್ಲಿ ನಮಗೆ ಸಿಗುತ್ತಿರುವ ಪಾಲು 45,000 ಕೋಟಿ ರೂ. ಮಾತ್ರ. ಅನುದಾನದ ರೂಪದಲ್ಲಿ ಅಂದಾಜು 15,000 ಕೋಟಿ ರೂ.ಸೇರಿದೆ, ಇವೆಲ್ಲ ಕೂಡಿದರೆ ಕರ್ನಾಟಕ ಕೇಂದ್ರ ಸರ್ಕಾರಕ್ಕೆ ನೀಡುತ್ತಿರುವ ಪ್ರತಿಯೊಂದು ರೂ.ಗೆ ಹಿಂದಿರುಗಿ ಬರುತ್ತಿರುವುದು ಕೇವಲ 15 ಪೈಸೆ ಮಾತ್ರ.
ಒಂದು ಲಕ್ಷ ಕೋಟಿ ರೂ.
ಕಳೆದ 8 ವರ್ಷಗಳಲ್ಲಿ ಕೇಂದ್ರ ಬಜೆಟ್ ಗಾತ್ರ ದುಪ್ಪಟ್ಟಿಗಿಂತ ಹೆಚ್ಚಾದರೂ ಕರ್ನಾಟಕಕ್ಕೆ ಸಿಗುವ ಕೇಂದ್ರದ ತೆರಿಗೆ ಪಾಲಿನಲ್ಲಿ ಯಾವುದೇ ಬದಲಾವಣೆ ಆಗಿಲ್ಲ, ಪ್ರಸಕ್ತ ಬಜೆಟ್ ಗಾತ್ರದ ಹೋಲಿಕೆಯಲ್ಲಿ ಕರ್ನಾಟಕಕ್ಕೆ ವಾರ್ಷಿಕ ಕನಿಷ್ಠ ಒಂದು ಲಕ್ಷ ಕೋಟಿ ರೂ. ತೆರಿಗೆ ಹಾಗೂ ಅನುದಾನದ ಪಾಲು ದೊರೆಯಬೇಕಿತ್ತು.
ಕನ್ನಡಿಗರ ಜನಪ್ರತಿನಿಧಿಯಾಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಣಕಾಸು ಆಯೋಗದ ಶಿಫಾರಸು ನಿರಾಕರಿಸಿದ ಕಾರಣ ಆ ದುಡ್ಡು ಕೂಡಾ ಬರಲಿಲ್ಲ.
ಹದಿನೈದನೇ ಹಣಕಾಸು ಆಯೋಗ ಬೆಂಗಳೂರಿನ ಫೆರಿಫೆರಲ್ ರಿಂಗ್ ರಸ್ತೆಗೆ 3,000 ಕೋಟಿ ರೂ., ಕೆರೆಗಳು ಸೇರಿದಂತೆ ಬೆಂಗಳೂರು ಜಲಮೂಲ ಅಭಿವೃದ್ಧಿಗೆ 3,000 ಕೋಟಿ ರೂ. ನೀಡಲು ಶಿಫಾರಸ್ಸು ಮಾಡಿತ್ತು. ಆದರೆ, ಶಿಫಾರಸ್ಸುಗಳನ್ನು ತಿರಸ್ಕರಿಸಿದ್ದರಿಂದ ರಾಜ್ಯಕ್ಕೆ ಸುಮಾರು 11,495 ಕೋಟಿ ರೂ. ನಷ್ಟವಾಗಿದೆ ಎಂದಿದ್ದಾರೆ.
ಅನ್ಯಾಯದ ಶೂಲ
ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಎರಡು ಚಕ್ರಗಳಂತೆ, ಎರಡೂ ಚಕ್ರಗಳು ಸಮಾನವಾಗಿ, ಸುಗಮವಾಗಿ ತಿರುಗಿದಾದ ಮಾತ್ರವೇ ದೇಶ ನಾಗಾಲೋಟದಿಂದ ಪ್ರಗತಿಯ ಪಥದಲ್ಲಿ ಮುನ್ನಡೆಯಲು ಸಾಧ್ಯ, ಇತ್ತೀಚಿನ ವರ್ಷಗಳಲ್ಲಿ ಸಂಪನ್ಮೂಲ ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರದ ತಾರತಮ್ಯ ಧೋರಣೆ ಕರ್ನಾಟಕ ಸೇರಿದಂತೆ ಭಾರತದ ದಕ್ಷಿಣ ರಾಜ್ಯಗಳನ್ನು ನಿರಂತರವಾಗಿ ಅನ್ಯಾಯದ ಶೂಲಕ್ಕೆ ಕೊರಳೊಡ್ಡುವಂತೆ ಮಾಡಿದೆ.
ದೇಶ ಐದು ಟ್ರಿಲಿಯನ್ ಅರ್ಥ ವ್ಯವಸ್ಥೆಯ ಕನಸು ಕಾಣುತ್ತಿದೆ, ಇದರ ಹಿಂದೆ ದೇಶದ ಪ್ರಗತಿಗೆ ಅನನ್ಯ ಕೊಡುಗೆ ನೀಡುತ್ತಿರುವ, ದೇಶದ ಸಂಪತ್ತಿಗೆ ಅಗಾಧ ಸಂಪನ್ಮೂಲ ಒದಗಿಸುತ್ತಿರುವ ಕರ್ನಾಟಕ ಸಹಿತ ದಕ್ಷಿಣ ಭಾರತದ ರಾಜ್ಯಗಳ ವಿಶೇಷ ಕೊಡುಗೆಯಿದೆ ಎಂಬುದನ್ನು ಮರೆಯಬಾರದು.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಮೊದಲು ಯೋಜನಾ ಆಯೋಗ ರದ್ದುಗೊಳಿಸಿ ರಾಜ್ಯ ಸರ್ಕಾರಗಳಿಗೆ ದನಿಯೇ ಇಲ್ಲದ ನೀತಿ ಆಯೋಗ ರಚಿಸಲಾಯಿತು, ನಂತರ 15ನೇ ಹಣಕಾಸು ಆಯೋಗ ರಚಿಸಿ ಮಾರ್ಗಸೂಚಿ ಅಂಶಗಳಲ್ಲಿ ಬದಲಾವಣೆ ಮಾಡಲಾಯಿತು.
ರಾಜ್ಯಗಳಿಗೆ ಘೋರ ಅನ್ಯಾಯ
ಈ ಬದಲಾವಣೆಗಳು ಸಹಜವಾಗಿ ಕರ್ನಾಟಕ ಸೇರಿದಂತೆ ಅಭಿವೃದ್ಧಿ ಪಥದಲ್ಲಿರುವ ದಕ್ಷಿಣದ ರಾಜ್ಯಗಳಿಗೆ ಘೋರ ಅನ್ಯಾಯ ಮಾಡಿದೆ.
ಕರ್ನಾಟಕದಿಂದ ಕ್ರೋಢೀಕರಿಸಲ್ಪಟ್ಟ ತೆರಿಗೆ ಕನ್ನಡಿಗರ ಕಷ್ಟನಷ್ಟಗಳಿಗೆ ಒದಗದೆ ಹೋದರೆ, ಕನ್ನಡಿಗರ ಕಣ್ಣೀರು ಒರೆಸಲು ಬಳಕೆಯಾಗದೆ ಹೋದರೆ ಅಂತಹ ತೆರಿಗೆ ಸಂಗ್ರಹಿಸಿ ಏನು ಪ್ರಯೋಜನ.
ದೇಶದ ಅಭಿವೃದ್ಧಿಗೆ ಪ್ರತಿ ವರ್ಷ ಲಕ್ಷ ಲಕ್ಷ ಕೋಟಿ ರೂ. ತೆರಿಗೆಯಾಗಿ ನೀಡಿದರೂ, ಅಪರೂಪಕ್ಕೊಮ್ಮೆ ಬರುವ ಅತಿವೃಷ್ಟಿ, ಅನಾವೃಷ್ಟಿಗಳ ಸಂದರ್ಭದಲ್ಲಿ ಕೆಲವೇ ಸಾವಿರ ಕೋಟಿ ರೂ.ಗಳನ್ನು ಕಣ್ಣೀರು ಒರೆಸಲು ನೀಡದಿದ್ದರೆ ಒಕ್ಕೂಟ ವ್ಯವಸ್ಥೆಗೆ ಅರ್ಥವಿದೆಯೇ ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕವು ಒಕ್ಕೂಟ ವ್ಯವಸ್ಥೆಯೆಡೆಗೆ ಎಲ್ಲ ಗೌರವ ಉಳಿಸಿಕೊಂಡು ನ್ಯಾಯಯುತ ಪಾಲು ಪಡೆಯಲು ಹೇಗೆ ಮುಂದುವರೆಯಬೇಕು ಎಂಬ ಚರ್ಚೆಗಳು ವಿಜಯದಶಮಿ ಶುಭದಿನದಿಂದಲೇ ಶುರುವಾಗಲಿ ಎನ್ನುವುದು ನನ್ನ ಹಾರೈಕೆ ಎಂದು ಕರೆ ನೀಡಿದ್ದಾರೆ.