ಸಿದ್ದರಾಮಯ್ಯ ಬಗ್ಗೆ ಎಐಸಿಸಿ ತಟಸ್ಥ ನಿಲುವು
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣದ ತನಿಖೆಗೆ ನ್ಯಾಯಾಲಯ ಆದೇಶ ನೀಡಿದ ನಂತರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ರಾಜ್ಯಕ್ಕೆ ಎರಡು ದಿನ ಪ್ರವಾಸ ಕೈಗೊಂಡಿರುವುದು ಕಾಂಗ್ರೆಸ್ ವಿದ್ಯಮಾನ ಗರಿಗೆದರುವಂತೆ ಮಾಡಿದೆ.
ಸಂಸತ್‌ನ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಅಧ್ಯಕ್ಷರೂ ಆಗಿರುವ ವೇಣುಗೋಪಾಲ್, ಸಭೆ ನಡೆಸುವ ಹಿನ್ನೆಲೆಯಲ್ಲಿ ನಾಳೆಯಿಂದ ಎರಡು ದಿನ ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಪಿನ ನಂತರ ಸಿದ್ದರಾಮಯ್ಯ ಪರ ಇಲ್ಲವೇ ವಿರುದ್ಧ ಎಐಸಿಸಿ ಪ್ರತಿಕ್ರಿಯೆ ನೀಡಿಲ್ಲ.
ಆದರೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಕರ್ನಾಟಕದ ಭೇಟಿ ಸಂದರ್ಭದಲ್ಲಿ ವೇಣುಗೋಪಾಲ್, ಗೌಪ್ಯವಾಗಿ ನಗರಕ್ಕೆ ಧಾವಿಸಿ, ಪಕ್ಷದ ಅಧ್ಯಕ್ಷರನ್ನು ಭೇಟಿ ಮಾಡಿ ಹಿಂತಿರುಗಿದ್ದರು.
ಪಿಎಸಿ ಸಭೆ ಹಿನ್ನೆಲೆಯಲ್ಲಿ ಬರುತ್ತಿರುವ ವೇಣುಗೋಪಾಲ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ರಾಜ್ಯದ ಸಚಿವರೂ, ನಾಯಕರೊಂದಿಗೆ ಚರ್ಚೆ ಮಾಡಲಿದ್ದಾರೆ. ಈ ಮಧ್ಯೆ, ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ವೇಳಾಪCCC CHಟ್ಟಿ ಯಾವುದೇ ಕ್ಷಣದಲ್ಲಿ ಘೋಷಣೆ ಆಗುವ ಸಾಧ್ಯತೆ ಇದೆ.
ಮಹಾರಾಷ್ಟ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಹರಸಾಹಸ ನಡೆಸುತ್ತಿರುವ ಎನ್‌ಡಿಎ ಮೈತ್ರಿಕೂಟ ಕರ್ನಾಟಕದ ಮುಖ್ಯಮಂತ್ರಿ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ಅಸ್ತ್ರವನ್ನೇ ಮುಂದಿಟ್ಟುಕೊಂಡು ಚುನಾವಣಾ ಪ್ರಚಾರಕ್ಕೆ ಬಿಜೆಪಿ ಮುಂದಾಗಿರುವುದು ಕಾಂಗ್ರೆಸ್ ವರಿಷ್ಠರಿಗೆ ತಲೆನೋವಾಗಿದೆ. ಹರಿಯಾಣ ವಿಧಾನಸಭಾ ಚುನಾವಣೆ ಸಂದರ್ಭದಲ್ಲೂ ಬಿಜೆಪಿ ಇದೇ ಅಸ್ತ್ರ ಬಳಕೆ ಮಾಡಿ ರಾಜಕೀಯ ಲಾಭ ಪಡೆಯಿತು.
ಅದೇ ತಂತ್ರವನ್ನು ಮಹಾರಾಷ್ಟ್ರ ಚುನಾವಣೆಯಲ್ಲೂ ಬಳಕೆ ಮಾಡುವ ಪರಿಣಾಮದ ಬಗ್ಗೆ ವೇಣುಗೋಪಾಲ್ ನಾಳೆ ರಾಜ್ಯ ನಾಯಕರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಮಾತುಕತೆ ವೇಳೆ ವೇಣುಗೋಪಾಲ್, ರಾಜ್ಯ ನಾಯಕರಿಗೆ ಯಾವ ಸಂದೇಶ ನೀಡಬಹುದೆಂಬ ಬಗ್ಗೆ ಕುತೂಹಲ ಮೂಡಿದೆ.
ಸಿದ್ದರಾಮಯ್ಯ ಅವರು, ತಾವು ಅಧಿಕಾರದಿಂದ ಕೆಳಗಿಳಿಯುವುದಿಲ್ಲ ಎಂದು ನಿನ್ನೆ ಬೆಳಗಾವಿಯಲ್ಲಿ ಘೋಷಣೆ ಮಾಡಿದ್ದಾರೆ, ಅಷ್ಟೇ ಅಲ್ಲ, ಉಳಿದ ಅವಧಿಯಲ್ಲೂ ನಮ್ಮದೇ ಆಡಳಿತ ಎಂದಿದ್ದಾರೆ.
ಮುಡಾ ಪ್ರಕರಣ ಕಾಂಗ್ರೆಸ್ ವರಿಷ್ಠರನ್ನೇ ಇಕ್ಕಟ್ಟಿಗೆ ಸಿಲುಕಿಸಿದೆ, ಒಂದೆಡೆ ಮುಖ್ಯಮಂತ್ರಿ ಪರ ನಿಂತರಾದರೂ, ರಾಷ್ಟ್ರಮಟ್ಟದಲ್ಲಿ ಆಗುತ್ತಿರುವ ಮುಜುಗರದಿಂದ ತಪ್ಪಿಸಿಕೊಳ್ಳಲು ಯಾವ ನಿರ್ಣಯ ಕೈಗೊಳ್ಳುವರೆಂಬ ಕುತೂಹಲ ಮೂಡಿಸಿದೆ.