ಬೆಂಗಳೂರು:ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮೈತ್ರಿಕೂಟ (ಮಹಾವಿಕಾಸ ಅಘಾಡಿ) ಜಯಭೇರಿ ಬಾರಿಸಲಿದೆ ಎಂದು ಮಹಾರಾಷ್ಟ್ರ ಪಶ್ಚಿಮ ಭಾಗದ ಚುನಾವಣಾ ವೀಕ್ಷಕ ಹಾಗೂ ಸಚಿವ ಎಂ.ಬಿ.ಪಾಟೀಲ್ ಇಂದಿಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷ ಶಿವಸೇನೆ ಉದ್ಧವ್ ಠಾಕ್ರೆ ಬಣ ಮತ್ತು ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಜೊತೆ ಮೈತ್ರಿ ಹೊಂದಿದೆ ಎಂದರು.
ಆಡಳಿತ ವಿರೋಧಿ ಅಲೆ
ಆಡಳಿತಾರೂಢ ಬಿಜೆಪಿ, ಶಿವಸೇನೆ ನಾಯಕ ಹಾಗೂ ಮುಖ್ಯಮಂತ್ರಿ ಏಕನಾಥ ಶಿಂಧೆ, ಎನ್‌ಸಿಪಿ ಅಜಿತ್ ಪವಾರ್ ಬಣದ (ಮಹಾಯುಥಿ) ವಿರುದ್ಧ ಆಡಳಿತ ವಿರೋಧಿ ಅಲೆ ಇದೆ.
ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯ ವಿಚಾರಗಳೇ ನಿರ್ಣಾಯಕ, ಕರ್ನಾಟಕದ ಮುಡಾ ಪ್ರಕರಣಕ್ಕೂ ಮಹಾರಾಷ್ಟ್ರ ಚುನಾವಣೆಗೂ ಸಂಬಂಧವಿಲ್ಲ.
ಅನೈತಿಕ ರಾಜಕಾರಣ
ಮಹಾಯುಥಿ ಆಡಳಿತದಿಂದ ಮತದಾರರು ಬೇಸರಗೊಂಡಿದ್ದಾರೆ, ಅನೈತಿಕ ರಾಜಕಾರಣ ನಡೆಯುತ್ತಿದೆ, ಜನ ತಕ್ಕ ಉತ್ತರ ನೀಡಲಿದ್ದಾರೆ.
ಸೊಲ್ಲಾಪುರ, ಸಾಂಗ್ಲಿ, ಕೊಲ್ಲಾಪುರ, ಮೀರಜ್ ಭಾಗದಲ್ಲಿ ತಮ್ಮ ಒಡನಾಟವಿದೆ, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ತಮ್ಮನ್ನು ಮಹಾರಾಷ್ಟ್ರ ಪಶ್ಚಿಮ ಭಾಗದ ಹಿರಿಯ ಚುನಾವಣಾ ವೀಕ್ಷಕರನ್ನಾಗಿ ನೇಮಿಸಿದೆ ಎಂದರು.