ಬೆಂಗಳೂರು:ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಪರ ನಿಲ್ಲುವುದು ಬೇಡ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರವನ್ನು ಜೆಡಿಎಸ್ಗೆ ಬಿಡೋಣ ಎಂದು ಸಂಸದ ಬಸವರಾಜ ಬೊಮ್ಮಾಯಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ಕಿವಿಮಾತು ಹೇಳಿದ್ದಾರೆ.
ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಯನ್ನು ನಾವು ಮತ್ತು ಜೆಡಿಎಸ್ ಪ್ರತಿಷ್ಠೆಯಾಗಿ ತೆಗೆದುಕೊಂಡು ಹೋರಾಟ ಮಾಡೋಣ, ಒಗ್ಗಟ್ಟಿನಿಂದ ಕೆಲಸ ಮಾಡಿ ಎಲ್ಲಾ ಕ್ಷೇತ್ರಗಳನ್ನೂ ನಮ್ಮದಾಗಿಸಿಕೊಳ್ಳೋಣ ಎಂದಿದ್ದಾರೆ.
ಆರ್.ಅಶೋಕ್, ಬಸವರಾಜ ಬೊಮ್ಮಾಯಿ
ವಿಧಾನಸಭೆಯಲ್ಲಿನ ಪ್ರತಿಪಕ್ಷ ನಾಯಕ ಆರ್.ಅಶೋಕ್, ಸಂಸದ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯ ನಾಯಕರು, ಚನ್ನಪಟ್ಟಣದಿಂದ ಯೋಗೇಶ್ವರ್ ಅವರಿಗೆ ಟಿಕೆಟ್ ನೀಡಬೇಕು, ಜೆಡಿಎಸ್ಗೆ ಬಿಟ್ಟುಕೊಡುವುದು ಬೇಡ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ ಅವರಿಗೆ ಮನವಿ ಮಾಡಿದ್ದರು.
ಈ ಬೆಳವಣಿಗೆ ನಂತರ ಅಶೋಕ್ ಮತ್ತು ಬೊಮ್ಮಾಯಿ ಅವರು, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಸಮಾಲೋಚನೆ ನಡೆಸಿ ಯೋಗೇಶ್ವರ್ ಪರ ನಿಂತಿದ್ದರು.
ನಿಲುವಿನಲ್ಲಿ ಬದಲಾವಣೆ
ಚುನಾವಣಾ ವೇಳಾಪಟ್ಟಿ ಪ್ರಕಟವಾಗುತ್ತಿದ್ದಂತೆ ಯಡಿಯೂರಪ್ಪ ಅವರು, ಅಶೋಕ್ ಮತ್ತು ಬೊಮ್ಮಾಯಿ ಅವರನ್ನು ಪ್ರತ್ಯೇಕವಾಗಿ ಕರೆಸಿಕೊಂಡು, ಬಿಜೆಪಿ ಮತ್ತು ಜೆಡಿಎಸ್ ಮತ್ತಷ್ಟು ಬಲವಾಗಿ ಒಂದುಗೂಡಬೇಕು, ಅವರ ಕ್ಷೇತ್ರದಲ್ಲಿ ನಮ್ಮ ಹಸ್ತಕ್ಷೇಪ ಬೇಡ ಎಂದ ನಂತರ ಉಭಯ ನಾಯಕರು ತಮ್ಮ ನಿಲುವು ಬದಲಾಯಿಸಿದ್ದಾರೆ.
ಇಂದು ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ಅವರು ನಮ್ಮ ಹಿರಿಯ ನಾಯಕರು, ಸಹಜವಾಗಿ ಭೇಟಿ ಮಾಡುತ್ತೇವೆ, ಚುನಾವಣೆ ಬಗ್ಗೆ ಬಂದು ಮಾತನಾಡು ಎಂದಿದ್ದರು, ಮಾತಾಡಿದ್ದೇನೆ, ಶಿಗ್ಗಾಂವಿ ಕ್ಷೇತ್ರದ ಬಗ್ಗೆಯೂ ಚರ್ಚೆ ನಡೆಯಿತು ಎಂದರು.
ಚುನಾವಣೆ ತಯಾರಿ ಚರ್ಚೆ
ಚುನಾವಣೆ ತಯಾರಿ ಸಿದ್ಧತೆ ಬಗ್ಗೆ ಹೇಳಿದ್ದೇನೆ, ಅಭ್ಯರ್ಥಿ ಆಯ್ಕೆ ಬಗ್ಗೆಯೂ ಚರ್ಚೆ ಆಗಿದೆ, ಅಂತಿಮವಾಗಿ ಯಾರಿಗೇ ಟಿಕೆಟ್ ಕೊಟ್ಟರೂ ಗೆಲ್ಲಿಸಬೇಕು ಎಂಬ ತೀರ್ಮಾನ ಆಗಿದೆ.
ದೆಹಲಿಗೆ ಅಕ್ಟೋಬರ್ 19ರ ನಂತರ ತೆರಳಲಿದ್ದು, ಎಲ್ಲ ಮೂರು ಕ್ಷೇತ್ರಗಳಲ್ಲೂ ಗೆಲ್ಲುವುದಕ್ಕೆ ಪ್ರಯತ್ನ ಮಾಡೋಣ ಎಂದಿದ್ದಾರೆ.
ಚನ್ನಪಟ್ಟಣ ಟಿಕೆಟ್ ಕುರಿತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿ ಹೈಕಮಾಂಡ್ ತೀರ್ಮಾನ ಮಾಡುತ್ತಾರೆ ಎಂದರು.