ಬೆಂಗಳೂರು:ಬಿಜೆಪಿ ಸುಳ್ಳುಗಳಿಗೆ ತಲೆ ಕೊಟ್ಟು ಮೋಸ ಹೋಗದೆ ಸರಿಯಾದ ಉತ್ತರ ಕೊಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಕರೆ ನೀಡಿದ್ದಾರೆ.
ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಐದು ಮಂದಿಗೆ ವಾಲ್ಮೀಕಿ ಪ್ರಶಸ್ತಿ ವಿತರಿಸಿ ಮಾತನಾಡಿದ ಅವರು, ಕೇಂದ್ರದಲ್ಲಿನ ಬಿಜೆಪಿ ನೇತೃತ್ವದ ಸರ್ಕಾರವಾಗಲೀ, ಬಿಜೆಪಿ ಅಧಿಕಾರದಲ್ಲಿರುವ ಯಾವುದೇ ರಾಜ್ಯದಲ್ಲಾಗಲಿ ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆ ಜಾರಿಗೆ ತಂದಿಲ್ಲ, ಬಾಯಿ ಮಾತಲ್ಲಿ ಸಮಾನತೆ ಬರಲ್ಲ, ಆರ್ಥಿಕ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು ಎಂದರು.
ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ಹೋಗದೆ ಸಮಾನತೆ ಬರುವುದಿಲ್ಲ ಎಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದಾರೆ.
ಪಾಠ ಕಲಿಸಬೇಕು
ನಮ್ಮ ಸರ್ಕಾರ ಎಲ್ಲಾ ಧರ್ಮ, ಜಾತಿಯ ಬಡವರಿಗೆ ಆರ್ಥಿಕ ಶಕ್ತಿ ಕೊಡಲು ಗ್ಯಾರಂಟಿಗಳನ್ನು ಜಾರಿಗೆ ತಂದರೆ ಬಿಜೆಪಿಯವರು ವಿರೋಧಿಸಿದರು, ಗ್ಯಾರಂಟಿ ಫಲಾನುಭವಿಗಳು ಬಿಜೆಪಿಗೆ ಸರಿಯಾಗಿ ಪಾಠ ಕಲಿಸಬೇಕು.
ಬಡ್ತಿಯಲ್ಲಿ ಮೀಸಲಾತಿಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯಿತು, ಅದನ್ನು ಮೊದಲಿಗೆ ಜಾರಿಗೆ ತಂದಿದ್ದು ನಮ್ಮ ಸರ್ಕಾರ, ಗುತ್ತಿಗೆಯಲ್ಲಿ ಮೀಸಲಾತಿ ಮೊದಲಿಗೆ ತಂದಿದ್ದು ನಮ್ಮ ಸರ್ಕಾರ, ಇದನ್ನು ನಾಡಿನ ಜನತೆ ಅರ್ಥಮಾಡಿಕೊಳ್ಳಬೇಕು.
ನಾನು ಹೇಳುತ್ತಿದ್ದೇನೆ ಎನ್ನುವ ಕಾರಣಕ್ಕೆ ನೀವು ಇದನ್ನೆಲ್ಲಾ ನಂಬಬೇಡಿ, ಸತ್ಯ, ಸುಳ್ಳನ್ನು ಪರಾಮರ್ಷಿಸಿ, ವಿವೇಚಿಸಿ, ಸತ್ಯವನ್ನು ಧೈರ್ಯವಾಗಿ ಬಹಿರಂಗವಾಗಿ ಮಾತಾಡುವುದನ್ನು ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳು ಬೆಳೆಸಿಕೊಳ್ಳಬೇಕು, ಇದೇ ಮಹರ್ಷಿ ವಾಲ್ಮೀಕಿ ಅವರಿಗೆ ನಾವು-ನೀವು ಸಲ್ಲಿಸುವ ಗೌರವ ಎಂದರು.
ಪ್ರತೀ ಹೋಬಳಿಗೆ ವಸತಿ ಶಾಲೆ
ಎಸ್‌ಸಿಎಸ್‌ಪಿ/ಟಿಎಸ್‌ಪಿ ಮೂಲಕ ಪರಿಶಿಷ್ಟ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಆಯವ್ಯಯದಲ್ಲಿ ಹಣ ಮೀಸಲಿಟ್ಟ ಮೊದಲ ಸರ್ಕಾರ ನಮ್ಮದು, ತಳಹಂತದ ಸಮುದಾಯಗಳಿಗೆ ವಸತಿ ಶಾಲೆಗಳನ್ನು ಆರಂಭಿಸಿದ್ದು ನಾನು, ಪ್ರತೀ ಹೋಬಳಿಗೆ ಒಂದು ವಸತಿ ಶಾಲೆ ಮಾಡಿಯೇ ಮಾಡುತ್ತೇನೆ.
ಪರಿಶಿಷ್ಟ ಜಾತಿಯ ಎಲ್ಲಾ ವಸತಿ ಶಾಲೆ ಹಾಗೂ ರಾಯಚೂರು ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಹೆಸರು ಇಡಲಾಗುವುದು.
ವಾಲ್ಮೀಕಿ ರಾಮಾಯಣ
ಶಾಕುಂತಲಾ ನಾಟಕ ಬರೆದ ಕಾಳಿದಾಸ ಕುರುಬ ಸಮುದಾಯದವರು, ಮಹಾಭಾರತ ಬರೆದ ವ್ಯಾಸರು ಬೆಸ್ತ ಸಮುದಾಯದವರು, ರಾಮಾಯಣ ಬರೆದ ಮಹರ್ಷಿ ವಾಲ್ಮೀಕಿ ಸಮುದಾಯದವರು, ದರೋಡೆ ಮಾಡಿಕೊಂಡು ಓಡಾಡುತ್ತಿದ್ದ ವಾಲ್ಮೀಕಿ ರಾಮಾಯಣ ಬರೆಯಲು ಸಾಧ್ಯವಾ ಎಂದು ಕತೆ ಸುಳ್ಳು ಹೇಳಿದರು.
ತಳಹಂತದ ಸಮುದಾಯಗಳು, ಶೂದ್ರರು ಶಿಕ್ಷಣ, ಸಂಸ್ಕೃತ ಕಲಿಯುವುದು ನಿಷಿದ್ಧವಾಗಿತ್ತು, ಆದರೆ, ಸಂಸ್ಕೃತ ಕಲಿತು ಶ್ಲೋಕಗಳ ಮೂಲಕ ವಾಲ್ಮೀಕಿ ಜಗತ್ಪ್ರಸಿದ್ಧ ರಾಮಾಯಣ ಮಹಾಕಾವ್ಯ ಬರೆದಿದ್ದು ಹೆಮ್ಮೆಯ ಸಂಗತಿ.
ಶಿಕ್ಷಣ ಕಲಿಯುವ ಅವಕಾಶ ಸಿಕ್ಕಾಗ ಇವರೆಲ್ಲಾ ಕಲಿತರು, ಬರೆದರು, ಜಗತ್ತಿಗೇ ಪ್ರೇರಣೆಯಾದರು, ಸಮಪಾಲು, ಸಮಬಾಳು, ಸಮಾನ ಅವಕಾಶಗಳ ಬಗ್ಗೆ ವಾಲ್ಮೀಕಿ ಹೇಳಿದ್ದರು, ರಾಮಾಯಣದ ರಾಮರಾಜ್ಯ ಅಂದರೆ ಸಮಪಾಲಿನ, ಸಮಾನ ಅವಕಾಶಗಳ ರಾಜ್ಯ ಎಂದರ್ಥ.
ರಾಮನ ಮಕ್ಕಳಾದ ಲವ-ಕುಶರಿಗೆ ಆಶ್ರಯ ನೀಡಿ ಶಿಕ್ಷಣ ಕೊಟ್ಟ ವಾಲ್ಮೀಕಿ ವಾಲ್ಮೀಕಿ ವಿಶ್ವಮಾನವರಾಗಿದ್ದರು ಎನ್ನುವುದಕ್ಕೆ ಇದು ಸಣ್ಣ ಉದಾಹರಣೆ ಎಂದರು.