ಬೆಂಗಳೂರು:ಖಾಸಗಿ ಡೆವಲಪರ್‌ಗೆ ಅನೂಕೂಲ ಮಾಡಿಕೊಡಲು ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ (ನೈಸ್ ರಸ್ತೆ) ನಿರ್ಮಾಣಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಂದಾಗಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಆರೋಪಿಸಿದ್ದಾರೆ.
ಕರ್ನಾಟಕದಲ್ಲಿರುವ ಕೇಂದ್ರ ಉದ್ಯಮಗಳನ್ನು ಉಳಿಸಿ ಬೆಳೆಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದೊಂದಿಗೆ ಮಾತುಕತೆಗೆ ಸಿದ್ಧ ಎಂದಿದ್ದಾರೆ.
ದೇವೇಗೌಡರು ಅಡ್ಡಿ ಮಾಡಿಲ್ಲ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ದೇಶಿತ ಬೆಂಗಳೂರು-ಮೈಸೂರು ನೈಸ್ ರಸ್ತೆಗೆ ದೇವೇಗೌಡರು ಅಡ್ಡಿ ಮಾಡಿಲ್ಲ, ಸಂಸ್ಥೆಯ ನುಂಗುಬಾಕುತನಕ್ಕೆ ವಿರೋಧ ಮಾಡಿದ್ದರು.
ವಿಧಾನಮಂಡಲದ ಜಂಟಿ ಸದನ ಸಮಿತಿ ಅಧ್ಯಕ್ಷರಾಗಿದ್ದ ಟಿ.ಬಿ.ಜಯಚಂದ್ರ ಮತ್ತು ಸದಸ್ಯರು, ನೈಸ್ ರಸ್ತೆಯನ್ನು ಸರ್ಕಾರ ಸ್ವಾಧೀನ ಪಡಿಸಿಕೊಳ್ಳಬೇಕು ಹಾಗೂ ಇದರಲ್ಲಿ ನಡೆದಿರುವ ಹಗರಣವನ್ನು ಸಿಬಿಐಗೆ ವಹಿಸಬೇಕೆಂದು ವರದಿ ನೀಡಿದ್ದಾರೆ.
ವರದಿ ನೀಡಿರುವ ಅಧ್ಯಕ್ಷರು ಯಾವ ಪಕ್ಷದವರು ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ನೈಸ್ ಕಂಪನಿಯನ್ನೇ ಶಿವಕುಮಾರ್ ಖರೀದಿ ಮಾಡಿದ್ದಾರೇನೋ ಎಂಬ ಸಂಶಯ ವ್ಯಕ್ತಪಡಿಸಿದರು.
ಭೂಮಿ ಬೆಲೆ ಹೆಚ್ಚಿಸಿಕೊಳ್ಳುವ ಯತ್ನ
ಅದರಲ್ಲಿ ದೊಡ್ಡ ಪ್ರಮಾಣದಲ್ಲಿ ಹಣ ಬರುತ್ತಿರಬೇಕು, ಈ ಕಾರಣಕ್ಕಾಗಿ ತಾವು ಬೆಂಗಳೂರು-ರಾಮನಗರ ನಡುವೆ ಹೊಂದಿರುವ ಭೂಮಿ ಬೆಲೆ ಹೆಚ್ಚಿಸಿಕೊಳ್ಳಲು ಹಾಗೂ ಖಾಸಗಿ ಬಿಲ್ಡರ್‌ಗೆ ಅನುಕೂಲ ಮಾಡಿಕೊಡಲು ಹೊರಟಿರಬೇಕು ಎಂದರು.
ಕೆಐಡಿಬಿಯಿಂದ ತಮ್ಮ ಭೂಮಿಯನ್ನು ಡಿ-ನೋಟಿಫಿಕೇಷನ್ ಮಾಡಿಸಿಕೊಂಡಿದ್ದಾರೆ, ಆ ಭೂಮಿಯಿಂದ ಹಣ ಬರಬೇಕೆಂದರೆ ಈ ರಸ್ತೆ ಆಗಬೇಕಿದೆ, ಅದಕ್ಕೆ ಈ ಪ್ರಸ್ತಾಪ ಇಟ್ಟಿದ್ದಾರೆ.
ಮೇಕೆದಾಟು ಯೋಜನೆ ಪ್ರಸ್ತಾಪಿಸಿದ ಕುಮಾರಸ್ವಾಮಿ, ಹಿಂದಿನ ಬಿಜೆಪಿ ಸರ್ಕಾರದಲ್ಲಿ ಈ ಯೋಜನೆಗೆ ಒತ್ತಾಯಿಸಿ ಕುಣಿದು.., ಕುಣಿದು.., ಪಾದಯಾತ್ರೆ ಮಾಡಿದರು.
ಡಿಎಂಕೆ ಸರ್ಕಾರವನ್ನು ಒಪ್ಪಿಸಿ
ಈಗ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ, ನಿಮ್ಮ ಇಂಡಿಯಾ ಒಕ್ಕೂಟದ ಡಿಎಂಕೆ ಸರ್ಕಾರವನ್ನು ಒಪ್ಪಿಸಿ ತಕ್ಷಣವೇ ಯೋಜನೆಗೆ ಹಸಿರು ನಿಶಾನೆ ದೊರೆಯುತ್ತದೆ.
ಮೇಕೆದಾಟು ಅಣೆಕಟ್ಟೆ ನಿರ್ಮಾಣವಾದರೆ ತಮಿಳುನಾಡಿಗೇ ಹೆಚ್ಚು ಲಾಭ, ಆ ಸರ್ಕಾರವನ್ನು ಒಪ್ಪಿಸಿ, ಕೇಂದ್ರವನ್ನು ದೂರುವುದಲ್ಲ ಎಂದರು.
ಹಿಂದೂಸ್ತಾನ್ ಮೆಶಿನ್ ಅಂಡ್ ಟೂಲ್ಸ್ (ಹೆಚ್‌ಎಂಟಿ) ಹಾಗೂ ಕುದುರೆಮುಖ ಕಬ್ಬಿಣ ಮತ್ತು ಅದಿರು ಸಂಸ್ಥೆ (ಕೆಐಒಸಿಎಲ್) ವಿಷಯದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಹಸಿ ಸುಳ್ಳುಗಳನ್ನು ಹಬ್ಬಿಸುತ್ತಿದ್ದು, ಈ ಬಗ್ಗೆ ನಾನು ದಾಖಲೆಗಳ ಸಮೇತ ರಾಜ್ಯ ಸರ್ಕಾರದ ಜತೆ ಚರ್ಚೆಗೆ ತಯಾರಿದ್ದೇನೆ.
ರಾಜಕಾರಣ ಸರಿಯಲ್ಲ
ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವರಿಗೆ ಪತ್ರ ಬರೆಯುತ್ತೇನೆ, ಒಂದು ಸಭೆ ಮಾಡಲಿ, ಅಲ್ಲಿ ದಾಖಲೆಗಳ ಸಮೇತ ನಾನು ಮಾತನಾಡುತ್ತೇನೆ, ಒಂದು ವೇಳೆ ಕೆಐಒಸಿಎಲ್ ತಪ್ಪುಗಳಿದ್ದರೆ, ಇಲಾಖೆ ಸಚಿವನಾಗಿ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ, ಅದರೆ, ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿ ರಾಜಕಾರಣ ಮಾಡುವುದು ಸರಿಯಲ್ಲ ಎಂದರು.
ಅರಣ್ಯ ಸಚಿವರು ಈ ಎರಡೂ ಸಂಸ್ಥೆಗಳ ಬಗ್ಗೆ ಸತ್ಯಕ್ಕೆ ದೂರವಾದ ವಿಷಯಗಳನ್ನು ದಿನನಿತ್ಯವೂ ಮಾಧ್ಯಮಗಳಿಗೆ ಹೇಳುತ್ತಾ ಜನರ ದಿಕ್ಕು ತಪ್ಪಿಸುತ್ತಿದ್ದಾರೆ, ಸಚಿವರು ದಾಖಲೆಗಳನ್ನು ಓದಿಕೊಂಡು ಮಾತನಾಡಿದರೆ ಚೆನ್ನಾಗಿರುತ್ತದೆ, ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ಕ್ಷುಲ್ಲಕ ರಾಜಕಾರಣ ಮಾಡಿದರೆ ಅವರನ್ನು ಸಚಿವರೆಂದು ಕರೆಯಲಾಗುತ್ತದೆಯೇ ಎಂದು ಕಿಡಿಕಾರಿದರು.
ರಾಜ್ಯ ಸರ್ಕಾರದ ಹಠಮಾರಿತನದಿಂದ ಕುದುರೆಮುಖ ಸಂಸ್ಥೆಯ ಸುಮಾರು 300 ರಿಂದ 400 ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ, ಒಂದು ಕಡೆ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕು ಎನ್ನುವ ರಾಜ್ಯ ಸರ್ಕಾರ ಮತ್ತೊಂದೆಡೆ ಅಸಹಕಾರ ತೋರುತ್ತಿದೆ.
ವಿಶಾಖಪಟ್ಟಣದ ರಾಷ್ಟ್ರೀಯ ಉಕ್ಕು ಕಾರ್ಖಾನೆ ಸಂಕಷ್ಟದಲ್ಲಿತ್ತು, ನಿರ್ವಹಣಾ ಬಂಡವಾಳ ಇಲ್ಲದೆ ಸೊರಗಿತ್ತು, ಏಕಾಏಕಿ 4,500 ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಒತ್ತಾಸೆ ಮೇರೆಗೆ ಕೇವಲ 48 ಗಂಟೆಗಳ ಒಳಗಾಗಿ ಎಲ್ಲಾ ಕಾರ್ಮಿಕರ ಮರುನೇಮಕ ಮಾಡಿಕೊಳ್ಳಲಾಯಿತು.
ಕರ್ನಾಟಕದಲ್ಲಿ ಸಹಕಾರ ಸಿಗುತ್ತಿಲ್ಲ
ನೆರೆ ರಾಜ್ಯದಲ್ಲಿ ನಮಗೆ ಉತ್ತಮ ಸಹಕಾರ ಸಿಗುತ್ತಿದೆ, ನಮ್ಮದೇ ರಾಜ್ಯ ಕರ್ನಾಟಕದಲ್ಲಿ ಸಹಕಾರ ಸಿಗುತ್ತಿಲ್ಲ, ಒಬ್ಬ ಕೇಂದ್ರ ಮಂತ್ರಿಯನ್ನು ನಡೆಸಿಕೊಳ್ಳುವ ರೀತಿಯೇ ಇದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಾದಿಬೀದಿಯಲ್ಲಿ ಹೇಳಿಕೆ ನೀಡುತ್ತಾ ಹೋದರೆ ರಾಜ್ಯದ ಅಭಿವೃದ್ಧಿ ಆಗುತ್ತದೆಯೇ, ರಾಜ್ಯ ಸರ್ಕಾರ ಚಿಲ್ಲರೆ ರಾಜಕಾರಣ ಮಾಡುವುದನ್ನು ಬಿಡಬೇಕು, ಇಲ್ಲಿ ರಾಜಕಾರಣ ಮುಖ್ಯವಲ್ಲ, ಅದೇನಿದ್ದರೂ ಚುನಾವಣೆಗೆ ಸೀಮಿತ, ಇದುವರೆಗೆ ರಾಜ್ಯದ ಯಾರೊಬ್ಬರೂ ನನ್ನ ಬಳಿ ಬಂದು ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿಲ್ಲ.
ಎಂ.ಬಿ.ಪಾಟೀಲ್ ಮಾತ್ರ ದೆಹಲಿಯ ನನ್ನ ಸಚಿವಾಲಯಕ್ಕೆ ಬಂದು ಕೈಗಾರಿಕೆ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿದ್ದು ಬೇರಾರೂ ನನ್ನೊಂದಿಗೆ ರಾಜ್ಯದ ಬಗ್ಗೆ ಚರ್ಚೆ ಮಾಡಿಲ್ಲ.
ಟೊಯೊಟಾ ಸೇರಿದಂತೆ ಅನೇಕ ಕೈಗಾರಿಕೆಗಳು ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿವೆ, ಶಾಸಕ ರಾಜುಕಾಗೆ ಅಭಿವೃದ್ಧಿ ಅನುದಾನ ಬಗ್ಗೆ ಏನು ಹೇಳಿದ್ದಾರೆ, ಅರಣ್ಯ ಸಚಿವ ಈಶ್ವರ್ ಖಂಡ್ರೆ ಬಳಿ ಇರುವ ದಾಖಲೆಗಳನ್ನು ತೆಗೆದುಕೊಂಡು ಬರಲಿ, ನಾನು ಕುಳಿತುಕೊಳ್ಳುತ್ತೇನೆ, ಸಭೆಯಲ್ಲಿ ಎಲ್ಲಾ ಚರ್ಚೆಯಾಗಲಿ, ಸಭೆ ಏಕೆ ಕರೆಯುತ್ತಿಲ್ಲ, ಅರಣ್ಯ ಸಚಿವರು ಬೋಗಸ್ ಹೇಳಿಕೆ ನೀಡುತ್ತಿದ್ದಾರೆ ಎಂದರು.