ಬೆಂಗಳೂರು:ಸರ್ಕಾರಿ ಶಾಲೆಗಳಲ್ಲಿ ಕಲಿಕಾ ಫಲಿತಾಂಶ ಸುಧಾರಿಸುವ ಗುರಿಯೊಂದಿಗೆ ಶಿಕ್ಷ ಕೋ-ಪೈಲಟ್ ಯೋಜನೆ ಜಾರಿಗೆ ತರಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಇಂದಿಲ್ಲಿ ತಿಳಿಸಿದ್ದಾರೆ.
ಶಿಕ್ಷ ಕೋ-ಪೈಲಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ಸ್ಥಳೀಯ ಪಠ್ಯಕ್ರಮ, ಭಾಷೆ ಮತ್ತು ಸಂದರ್ಭ ಆಧರಿಸಿ ಸಮಗ್ರ ಬೋಧನಾ ಸಂಪನ್ಮೂಲ ಮತ್ತು ಕಲಿಕಾ ಅನುಭವ ರಚಿಸಲು ಶಿಕ್ಷ ಕೋ-ಪೈಲಟ್ ಯೋಜನೆ ಶಿಕ್ಷಕರನ್ನು ಸಶಕ್ತಗೊಳಿಸುತ್ತದೆ ಎಂದರು.
ಸರ್ಕಾರಿ ಶಿಕ್ಷಕರಿಗೆ ಡಿಜಿಟಲ್ ಸಹಾಯ
ನಗರ ಮತ್ತು ಗ್ರಾಮೀಣ ಭಾಗಗಳ ಎಲ್ಲಾ ಶೈಕ್ಷಣಿಕ ಜಿಲ್ಲೆಗಳಲ್ಲಿ ೭೫೦ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಂದ ಆಯ್ದ 1,000 ಶಿಕ್ಷಕರಿಗೆ ಶಿಕ್ಷ ಕೋ-ಪೈಲಟ್‌ನ ಕೃತಕ ಬುದ್ಧಿಮತ್ತೆ ಚಾಲಿತ ಡಿಜಿಟಲ್ ಸಹಾಯ ನೀಡಲಾಗುವುದು.
ಶಿಕ್ಷ ಕೋ-ಪೈಲಟ್ ಉತ್ತಮ ಗುಣಮಟ್ಟದ ವೈಯಕ್ತೀಕರಿಸಿದ ವಿಷಯ ರಚಿಸಲು ಶಿಕ್ಷಕರನ್ನು ಸಬಲೀಕರಣಗೊಳಿಸುತ್ತದೆ.
ಶಿಕ್ಷಕರ ಹಿಮ್ಮಾಹಿತಿ ಆಧಾರದ ಮೇಲೆ ಚಟುವಟಿಕೆಗಳು, ಮೌಲ್ಯಮಾಪನಗಳು, ನೈಜ-ಪ್ರಪಂಚದ ಉದಾಹರಣೆಗಳು, ಅನ್ವಯಗಳು, ಕಿರು ವಿಡಿಯೊಗಳು ಮತ್ತು ಸಮಗ್ರ ಪಾಠ ಯೋಜನೆಗಳಂತಹ ಬೋಧನಾ ಸಂಪನ್ಮೂಲಗಳನ್ನು ರಚಿಸಲು ಶಿಕ್ಷ ಕೋ-ಪೈಲಟ್ ಸಹಾಯ ಮಾಡುತ್ತದೆ, ಇದು ಸ್ವಯಂ ಕಲಿಕೆ ಮತ್ತು ಸಂವಾದಾತ್ಮಕ ವಿಷಯ ರಚನೆಗಾಗಿ ಶಿಕ್ಷಕರಿಗೆ ಚಾಟ್-ಬಾಟ್ ಸಹ ಒದಗಿಸುತ್ತದೆ ಎಂದರು.