ಬೆಂಗಳೂರು:ಹಗರಣಗಳ ಸುಳಿಗೆ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರನ್ನು ತಕ್ಷಣ ಬಂಧಿಸಿ ತನಿಖೆಗೆ ಒಳಪಡಿಸುವಂತೆ ಆಗ್ರಹಿಸಿದ್ದಾರೆ.
ಮುಡಾ, ಮಹರ್ಷಿ ವಾಲ್ಮೀಕಿ ನಿಗಮ ಹಾಗೂ ಮೈಸೂರು ಟರ್ಫ್ ಕ್ಲಬ್ ಸ್ಟುವರ್ಡ್ ನೇಮಕಾತಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳು ಸಿದ್ದರಾಮಯ್ಯ ಅವರಿಗೆ ಛೀಮಾರಿ ಹಾಕಿ ತನಿಖೆಗೆ ಆದೇಶಿಸಿವೆ.
ಎಲ್ಲಕ್ಕೂ ಮಿಗಿಲಾಗಿ ರಾಜ್ಯಪಾಲರು ೧೭ಎ ಅಡಿ ಪ್ರಾಸಿಕ್ಯೂಷನ್‌ಗೆ ಆದೇಶ ಮಾಡಿದ್ದು, ಇದನ್ನು ಪ್ರಶ್ನಿಸಿದ ಸಿದ್ದರಾಮಯ್ಯ ಅವರಿಗೆ ನ್ಯಾಯಾಲಯಗಳೂ ತೀರ್ಪಿನ ಮೂಲಕ ಛಾಟಿ ಬೀಸಿದ್ದರೂ ಅಧಿಕಾರದಲ್ಲಿ ಮುಂದುವರೆಯುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದರು.
ಮುಡಾ ಭ್ರಷ್ಟಾಚಾರ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾದ ಬಿಡಿ ನಿವೇಶನಗಳ ಹಂಚಿಕೆಯಲ್ಲಿ ಸಾವಿರಾರು ಕೋಟಿ ರೂ.ಗಳ ಭ್ರಷ್ಟಾಚಾರ ನಡೆದಿದೆ ಎಂದು ಜಿಲ್ಲಾಧಿಕಾರಿಗಳು ವರದಿ ನೀಡಿದ್ದಾರೆ.
ಇಷ್ಟೆಲ್ಲಾ ಆರೋಪ ಮತ್ತು ತನಿಖೆಗಳು ನಡೆಯುತ್ತಿದ್ದರೂ ಕಾಂಗ್ರೆಸ್ ಸಿದ್ದರಾಮಯ್ಯ ಅವರ ರಾಜೀನಾಮೆ ಏಕೆ ಪಡೆದಿಲ್ಲ, ಆ ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ವಿದೇಶಕ್ಕೆ ತೆರಳಿ ಉಪನ್ಯಾಸ ನೀಡುತ್ತಾರೆ, ಮೊದಲು ತಮ್ಮ ಪಕ್ಷದ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ನೋಡಿಕೊಳ್ಳಲಿ ಎಂದರು.
ಮುಖ್ಯಮಂತ್ರಿಗಳು ತಮ್ಮ ಪರಮಾಪ್ತ, ಮುಡಾ ಅಧ್ಯಕ್ಷ ಮರಿಗೌಡ ಅವರ ರಾಜೀನಾಮೆ ಪಡೆದಿದ್ದು ಏಕೆ, ಅವರ ಮೇಲೆ ಹಗರಣ ಆರೋಪ ಹೊರಿಸಲು ಹೊರಟಿದ್ದಾರೆಯೇ ಎಂದು ಶೋಭಾ ಕರಂದ್ಲಾಜೆ ಪ್ರಶ್ನಿಸಿದರು.
ಕಡತಗಳನ್ನು ಸುಟ್ಟು ಹಾಕಿದ್ದಾರೆ
ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು, ಸಚಿವ ಬೈರತಿ ಸುರೇಶ್ ಅವರನ್ನು ತಕ್ಷಣ ಬಂಧಿಸಿ ತನಿಖೆ ನಡೆಸಿದರೆ ಸತ್ಯ ಹೊರಬರಲಿದೆ, ಅವರು ಮುಡಾದಿಂದ 1997ರ ನಂತರದ ಎಲ್ಲ ಕಡತಗಳನ್ನು ಕಾರಿನಲ್ಲಿ ತುಂಬಿಸಿಕೊಂಡು ಬಂದು ಸುಟ್ಟು ಹಾಕಿದ್ದಾರೆ ಎಂದು ಆರೋಪಿಸಿದರು.
ಮುಡಾ ಕಾರ್ಯದರ್ಶಿಯನ್ನು ಅಮಾನತು ಮಾಡಿ ನಂತರ ವಾಪಸ್ ಪಡೆದಿದ್ದಾರೆ, 2013ರಲ್ಲಿ ತಮ್ಮ ಕೇಸುಗಳಿಂದ ಹೊರಬರಲು ಲೋಕಾಯುಕ್ತವನ್ನೇ ಮುಚ್ಚಿದ್ದರು, ಟರ್ಫ್ ಕ್ಲಬ್ ಪ್ರಕರಣದಲ್ಲಿ ಸ್ಟೂವರ್ಡ್ ಮಾಡಲು ಚೆಕ್ ಮೂಲಕ 1.30 ಕೋಟಿ ರೂ. ಪಡೆದ ಸಿದ್ದರಾಮಯ್ಯ ಭ್ರಷ್ಟಾಚಾರರಹಿತ ವ್ಯಕ್ತಿ ಆಗಲು ಹೇಗೆ ಸಾಧ್ಯ.
ಮುಖ್ಯಮಂತ್ರಿ ಪತ್ನಿ ಅವರಿಗೆ ನಿವೇಶನ ಹಂಚಿಕೆ ಸಂಬಂಧ ಮುಡಾ ನಿರ್ಧಾರ ಕೈಗೊಂಡಾಗ ಸಿದ್ದರಾಮಯ್ಯ ಪುತ್ರ ಯತೀಂದ್ರ ಶಾಸಕರಾಗಿದ್ದರಲ್ಲದೆ, ಮುಡಾ ಸದಸ್ಯರೂ ಆಗಿದ್ದರು, ಅವರ ಒತ್ತಡದಿಂದ ನಿವೇಶನಗಳು ಸಿಕ್ಕಿವೆ.
ಅಪರಾಧಕ್ಕೆ ಮೊದಲ ಸಾಕ್ಷಿ
ಇಷ್ಟೆಲ್ಲ ನಡೆದಾಗ ಸಿದ್ದರಾಮಯ್ಯ ಸಂವಿಧಾನಿಕ ಹುದ್ದೆಗಳಲ್ಲಿದ್ದರು, ಪ್ರಭಾವ ಬೀರಿ ಹೆಚ್ಚು ಮೌಲ್ಯಯುತ ಪ್ರದೇಶದಲ್ಲಿ ನಿವೇಶನ ಪಡೆಯಲಾಗಿದೆ, ನಿವೇಶನ ವಾಪಸ್ ಕೊಟ್ಟಿದ್ದೇ ಅಪರಾಧಕ್ಕೆ ಮೊದಲ ಸಾಕ್ಷಿ ಎಂದು ವಿಶ್ಲೇಷಿಸಿದರು.
ಬೊಕ್ಕಸದ ಹಣ ಕಾಂಗ್ರೆಸ್ ಪಕ್ಷಕ್ಕೆ ವರ್ಗಾವಣೆ ಆಗುತ್ತಿದೆ, ಸಿದ್ದರಾಮಯ್ಯ ತಾನು ಬಹಳ ಶುದ್ಧ ಎಂದು ಹೇಳಿಕೊಳ್ಳುತ್ತಿದ್ದರು, ಅವರ ಪರಿಶುದ್ಧತೆಯ ಒಂದೊಂದೇ ಮುಖವಾಡಗಳು ಕಳಚಿ ಬೀಳುತ್ತಿವೆ.
ಮುಡಾ ಹಗರಣ ಸಂಬಂಧ ಮೈಸೂರು ಜಿಲ್ಲಾಧಿಕಾರಿ ಒಂದು ಸಾವಿರ ಕೋಟಿ ರೂ.ಗೂ ಹೆಚ್ಚು ಮೊತ್ತದ ಅವ್ಯವಹಾರ ನಡೆದಿದ್ದು ತನಿಖೆ ಮಾಡಿ ವರದಿ ಕೊಟ್ಟಿದ್ದರು.
ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಒಂದು ರೂಪಾಯಿ ಬಿಡುಗಡೆ ಆಗುತ್ತಿಲ್ಲ, ಬೆಂಗಳೂರಿನಲ್ಲಿ ಬಿದ್ದ ಮಳೆ ಇಡೀ ನಗರವನ್ನೇ ಮುಳುಗಿಸಿದೆ, ಜನರನ್ನು ಕೇಳುವವರು, ಹೇಳುವವರು ಇಲ್ಲವಾಗಿದೆ, ಭ್ರಷ್ಟಾಚಾರದಿಂದ ದುಡ್ಡು ಮಾಡುವುದೇ ದಂಧೆಯಾಗಿದೆ ಎಂದು ಟೀಕಿಸಿದರು.