ಬೆಂಗಳೂರು:ಬಿಜೆಪಿ ತೊರೆದು ಮತ್ತೆ ಕಾಂಗ್ರೆಸ್ ಸೇರಲು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ನಿರ್ಧರಿಸಿದ್ದಾರೆ.
ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯಲ್ಲಿ ತಮಗೆ ಪಕ್ಷದ ಟಿಕೆಟ್ ಸಿಗುವುದಿಲ್ಲ ಎಂಬ ಮಾಹಿತಿ ಖಚಿತಗೊಳ್ಳುತ್ತಿದ್ದಂತೆ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಯೋಗೇಶ್ವರ್ ಕಾಂಗ್ರೆಸ್‌ನಿಂದ ಕಣಕ್ಕಿಳಿಯಲು ಮುಂದಾಗಿದ್ದಾರೆ.
ಮದ್ದೂರು ಹಾಗೂ ಮಾಗಡಿ ವಿಧಾನಸಭಾ ಕ್ಷೇತ್ರಗಳನ್ನು ಪ್ರತಿನಿಧಿಸುವ ಕಾಂಗ್ರೆಸ್ ಶಾಸಕರಾದ ಉದಯ್ ಹಾಗೂ ಬಾಲಕೃಷ್ಣ ಅವರು, ಯೋಗೇಶ್ವರ್ ಅವರನ್ನು ಪಕ್ಷಕ್ಕೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಡಿ.ಕೆ. ಸಹೋದರರಿಗೆ ಆಸಕ್ತಿ ಇಲ್ಲ
ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಅವರ ಸಹೋದರ ಡಿ.ಕೆ.ಸುರೇಶ್ ಅವರಲ್ಲಿ ಯೋಗೇಶ್ವರ್ ಬಗ್ಗೆ ಹೇಳಿಕೊಳ್ಳುವಂತಹ ಆಸಕ್ತಿ ಇಲ್ಲ.
ಪ್ರತೀ ಚುನಾವಣೆಯಲ್ಲೂ ಒಂದೊಂದು ರಾಜಕೀಯ ನಿರ್ಧಾರ ಕೈಗೊಳ್ಳುವ ಯೋಗೇಶ್ವರ್, ಯಾವ ಪಕ್ಷದಲ್ಲೂ ಸ್ಥಿರವಾಗಿರುವುದಿಲ್ಲ, ಅಲ್ಲದೆ, ರಾಜಕೀಯವಾಗಿಯೂ ಶಿವಕುಮಾರ್ ಅವರನ್ನು ವಿರೋಧಿಸುತ್ತಲೇ ಬಂದಿದ್ದಾರೆ.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರವನ್ನು ಪಕ್ಷದ ತೆಕ್ಕೆಗೆ ತೆಗೆದುಕೊಳ್ಳಬೇಕು ಹಾಗೂ ಕುಮಾರಸ್ವಾಮಿ ಅವರಿಗೆ ರಾಜಕೀಯ ಒಳ ಏಟು ನೀಡಲು ಯೋಗೇಶ್ವರ್ ಅವರಿಂದ ಮಾತ್ರ ಸಾಧ್ಯ ಎಂದು ಉದಯ್ ಮತ್ತು ಬಾಲಕೃಷ್ಣ ಅವರುಗಳು, ಡಿ.ಕೆ. ಸಹೋದರರ ಬಳಿ ವಾದಿಸಿ, ಅವರ ಮನವೊಲಿಸಿ ಯೋಗೇಶ್ವರ್ ಅವರನ್ನು ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.
ವರಿಷ್ಠರ ಅನುಮತಿ
ಈ ಬೆಳವಣಿಗೆ ನಂತರ ಕೆಪಿಸಿಸಿ ಅಧ್ಯಕ್ಷರು ಪಕ್ಷದ ವರಿಷ್ಠರೊಂದಿಗೆ ಸಮಾಲೋಚನೆ ನಡೆಸಿ ಯೋಗೇಶ್ವರ್ ಸೇರ್ಪಡೆಗೆ ಅನುಮತಿ ಪಡೆದಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ವರಿಷ್ಠರಿಂದ ಹಸಿರು ನಿಶಾನೆ ದೊರೆಯುತ್ತಿದ್ದಂತೆ ಹುಬ್ಬಳ್ಳಿಯಲ್ಲಿ ವಾಸ್ತವ್ಯವಿದ್ದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮೂಲಕ ಚನ್ನಪಟ್ಟಣದಲ್ಲಿ ಪಕ್ಷದ ಟಿಕೆಟ್ ಪಡೆಯಲು ಯೋಗೇಶ್ವರ್ ನಡೆಸಿದ ಪ್ರಯತ್ನ ಒಂದು ಹಂತಕ್ಕೆ ಮುಟ್ಟಿತ್ತು, ವರಿಷ್ಠರು ಕೂಡಾ ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿ, ಸಾಧ್ಯವಾದರೆ ಅವರನ್ನು ಎನ್‌ಡಿಎ ಅಭ್ಯರ್ಥಿ ಮಾಡಿ ಎಂದು ಸಲಹೆ ಮಾಡಿದ್ದರು.
ಜೆಡಿಎಸ್ ಚಿನ್ಹೆಯಡಿ ಸ್ಪರ್ಧೆ ಇಲ್ಲ
ಬಿಜೆಪಿ ವರಿಷ್ಠರ ಸಲಹೆಯಂತೆ ಯೋಗೇಶ್ವರ್ ಅವರನ್ನು ಜೆಡಿಎಸ್ ಚಿನ್ಹೆಯಡಿ ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಕುಮಾರಸ್ವಾಮಿ ತಮ್ಮ ಬೆಂಬಲಿಗರ ಮೂಲಕ ಸಂದೇಶ ರವಾನೆ ಮಾಡಿದ್ದರು.
ಇದನ್ನೂ ತಿರಸ್ಕರಿಸಿದ ಯೋಗೇಶ್ವರ್ ಬಿಜೆಪಿ ತೊರೆದು ಮತ್ತೆ ಕಾಂಗ್ರೆಸ್ ಸೇರಿ ಕುಮಾರಸ್ವಾಮಿ ವಿರುದ್ಧ ಚನ್ನಪಟ್ಟಣದಲ್ಲಿ ರಾಜಕೀಯ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ.