ಬೆಂಗಳೂರು:ಪೊಲೀಸರು ಮುಕ್ತ ಹಾಗೂ ಸ್ವತಂತ್ರವಾಗಿ ಕೆಲಸ ನಿರ್ವಹಿಸಲು ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.
ಪೊಲೀಸ್ ಸಂಸ್ಮರಣಾ ದಿನದಂದು ಹುತಾತ್ಮ ಪೊಲೀಸ್ ಸಿಬ್ಬಂದಿಗೆ ನಮನ ಸಲ್ಲಿಸಿ ಮಾತನಾಡಿದ ಅವರು, ಜನರ ಪ್ರಾಣ, ಆಸ್ತಿ ರಕ್ಷಿಸುವ ಪೊಲೀಸ್ ಸಿಬ್ಬಂದಿ ಹಿತರಕ್ಷಿಸಲು ಸರ್ಕಾರ ಬದ್ಧವಾಗಿದೆ, ಇದಕ್ಕಾಗಿ 2025ಲ್ಲಿ 10 ಸಾವಿರ ಪೊಲೀಸ್ ವಸತಿಗಳ ನಿರ್ಮಾಣಕ್ಕೆ 2,000 ಕೋಟಿ ರೂ. ನೀಡಿದ್ದೇವೆ, 200 ಕೋಟಿ ರೂ. ವೆಚ್ಚದಲ್ಲಿ 100 ಹೊಸ ಠಾಣೆಗಳ ನಿರ್ಮಾಣ ಆಗುತ್ತಿವೆ, ಪೊಲೀಸ್ ಮಕ್ಕಳಿಗಾಗಿ 7 ಪ್ರಮುಖ ಸ್ಥಳಗಳಲ್ಲಿ 7 ಪಬ್ಲಿಕ್ ಶಾಲೆಗಳನ್ನು ತೆರೆಯಲಾಗುತ್ತದೆ ಎಂದು ಘೋಷಿಸಿದರು.
ಹುತಾತ್ಮ ಪೊಲೀಸರಿಗೆ ನಮನ
ಕಳೆದ ಒಂದು ವರ್ಷದಲ್ಲಿ ದೇಶದಲ್ಲಿ 216 ಮಂದಿ, ರಾಜ್ಯದಲ್ಲಿ 12 ಮಂದಿ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳು ಕರ್ತವ್ಯದಲಿದ್ದಾಗ ಹುತಾತ್ಮರಾಗಿದ್ದಾರೆ, ಇವರ ಆತ್ಮಕ್ಕೆ ನಾನು ಶಾಂತಿ ಕೋರುತ್ತಲೇ ಕುಟುಂಬದವರ ದುಃಖದಲ್ಲಿ ಭಾಗಿ ಆಗುತ್ತೇನೆ, ದೇಶ ಹಾಗೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ, ಜನರ ಪ್ರಾಣ, ಮಾನ ಕಾಪಾಡುವಾಗ ಇವರು ಹುತಾತ್ಮರಾಗಿದ್ದಾರೆ.
ದೇಶದ ಆಂತರಿಕ ಭದ್ರತೆ ಕಾಪಾಡುವಲ್ಲಿ, ದೌರ್ಜನ್ಯ, ಅಪರಾಧ, ದುರಂತಗಳನ್ನು ತಡೆಯುವುದರಲ್ಲಿ ಪ್ರಮುಖ ಪಾತ್ರ ವಹಿಸುವುದು ನಮ್ಮ ಪೊಲೀಸ್ ಸಿಬ್ಬಂದಿ, ಇವರ ಜವಾಬ್ದಾರಿ ಬಹಳ ದೊಡ್ಡದು.
ಅಸಮಾನತೆಯ ಸಮಾಜದಲ್ಲಿ ಶೋಷಣೆ
ಅಸಮಾನತೆ ಇರುವ ಸಮಾಜದಲ್ಲಿ ಶೋಷಣೆ, ದೌರ್ಜನ್ಯಗಳೂ ಇರುತ್ತವೆ, ಈ ಶೋಷಿತರ ಸಂವಿಧಾನಬದ್ಧ ಹಕ್ಕುಗಳನ್ನು ಕಾಪಾಡಲು ಮುಖ್ಯ ಪಾತ್ರ ವಹಿಸುವವರು ನಮ್ಮ ಪೊಲೀಸರು, ಇವರ ಜೊತೆಗೆ ಸರ್ಕಾರ ಇರುತ್ತದೆ.
ಅಪರಾಧ ತಡೆಯಲು 6,000 ಸಿಸಿ ಕ್ಯಾಮೆರಾಗಳು, 260ಕ್ಕೂ ಹೆಚ್ಚು ಹೆದ್ದಾರಿ ಗಸ್ತು ವಾಹನಗಳು ಕರ್ತವ್ಯ ನಿರ್ವಹಿಸುತ್ತಿವೆ ಎಂದರು.