ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ
ಬೆಂಗಳೂರು : ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಕಣಕ್ಕಿಳಿಯಲು ಮುಂದಾಗಿರುವ ಮಾಜಿ ಸಚಿವ, ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ಅವರಿಗೆ ಈಗ ಎಲ್ಲಿಲ್ಲದ ಬೇಡಿಕೆ.
ಚನ್ನಪಟ್ಟಣ ಕ್ಷೇತ್ರವನ್ನು ಎನ್‌ಡಿಎ ತೆಕ್ಕೆಯಲ್ಲಿ ಉಳಿಸಿಕೊಳ್ಳಲು ಬಿಜೆಪಿ ಒಂದೆಡೆ ನಿರಂತರ ಪ್ರಯತ್ನ ಮಾಡಿದರೆ, ಇನ್ನೊಂದೆಡೆ ಕಾಂಗ್ರೆಸ್, ಯೋಗೇಶ್ವರ್ ಅವರನ್ನು ಮತ್ತೆ ಮನೆಗೆ ಕರೆತರಲು ಮುಂದಾಗಿದೆ. ಇದರ ನಡುವೆ ಚನ್ನಪಟ್ಟಣ ಕ್ಷೇತ್ರ ಉಳಿಸಿಕೊಂಡು ತನ್ನ ಅಸ್ಥಿತ್ವ ಕಾಪಾಡಿಕೊಳ್ಳಲು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಇಡೀ ದಿನ ಕ್ಷೇತ್ರದ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು.
ಸಭೆ ನಡುವೆಯೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಜೆ.ಪಿ.ನಡ್ಡ, ತಮ್ಮ ಸಹೋದ್ಯೋಗಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಎರಡು ಬಾರಿ ದೂರವಾಣಿ ಮೂಲಕ ಸಂಪರ್ಕಿಸಿ, ಜೆಡಿಎಸ್ ಚಿನ್ಹೆಯಡಿ ಯೋಗೇಶ್ವರ್ ಸ್ಫರ್ಧೆಗೆ ನಿಮ್ಮ ಸಹಮತ ಇದೆಯೇ ಎಂದು ಕೇಳಿದ್ದಾರೆ. ಆದರೆ, ಸಭೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಯೋಗೇಶ್ವರ್ ಸ್ಫರ್ಧೆಗೆ ವಿರೋಧ ವ್ಯಕ್ತಪಡಿಸಿದ್ದಲ್ಲದೆ, ನಿಖಿಲ್ ಕುಮಾರಸ್ವಾಮಿ ಅಥವಾ ಕುಟುಂಬದ ಯಾರನ್ನಾದರೂ ಕಣಕ್ಕಿಳಿಸಿ ಎಂದು ಒತ್ತಾಯ ಮಾಡಿದ್ದಾರೆ. ಇದರಿಂದ ಇಕ್ಕಟ್ಟಿಗೆ ಸಿಲುಕಿದ ಕುಮಾರಸ್ವಾಮಿ, ನಡ್ಡ ಅವರ ಸಲಹೆಗೆ ಒಪ್ಪಿದ್ದರೂ ಅದಕ್ಕೆ ಇನ್ನೂ ಅಂತಿಮ ಚಿತ್ರಣ ದೊರೆತಿಲ್ಲ.
ಇತ್ತ ಯೋಗೇಶ್ವರ್ ಮಾತ್ರ ನಾನು ಬಿಜೆಪಿ ಚಿನ್ಹೆಯಡಿ ಕಣಕ್ಕಿಳಿಯುವುದಾದರೆ ಒಪ್ಪಿಗೆ, ಇಲ್ಲದಿದ್ದರೆ ನನ್ನ ದಾರಿ ನನಗೆ ಎಂದು ರಾಜ್ಯ ನಾಯಕರಿಗೆ ತಮ್ಮ ಗಟ್ಟಿ ನಿರ್ಧಾರವನ್ನು ಹೇಳುತ್ತಲೇ ಬಂದಿದ್ದಾರೆ. ಮತ್ತೊಂದೆಡೆ ಯೋಗೇಶ್ವರ್ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲು ರಾಜ್ಯ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ನಗರಕ್ಕೆ ಧಾವಿಸಿದ್ದಾರೆ.
ನಿನ್ನೆ ಕಾಂಗ್ರೆಸ್ ಸೇರುವುದು ನಿಶ್ಚಿತವಾಗಿತ್ತಾದರೂ, ಇಂದು ಯೋಗೇಶ್ವರ್ ಗೊಂದಲಕ್ಕೆ ಸಿಲುಕಿದಂತೆ ಕಾಣುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಆ ಪಕ್ಷದ ಮುಖಂಡರು, ಯೋಗೇಶ್ವರ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಚನ್ನಪಟ್ಟಣ ಕ್ಷೇತ್ರದಿಂದ ಕಣಕ್ಕಿಳಿಸಲು ಬಹಳ ಉತ್ಸುಕತೆಯಿಂದ ಇದ್ದಾರೆ.
ಯೋಗೇಶ್ವರ್ ಪರ ಮುಖ್ಯಮಂತ್ರಿ ಅವರು ಪರೋಕ್ಷವಾಗಿ ಬಹಿರಂಗವಾಗೇ ಹೇಳಿಕೆ ನೀಡಿದ್ದಾರೆ, ಇಷ್ಟಾದರೂ ಜೆಡಿಎಸ್ ನಿರ್ಧಾರದ ಮೇಲೆ ತಮ್ಮ ಮುಂದಿನ ಹೆಜ್ಜೆ ಎಂದು ಚಿತ್ರ ನಟರೂ ಆದ ಯೋಗೇಶ್ವರ್ ಕಾದು ನೋಡುವ ತಂತ್ರಕ್ಕೆ ಇಳಿದಿದ್ದಾರೆ.